ಇಂದು ಭಾರತ-ಬಾಂಗ್ಲಾ ಏಷ್ಯಾಕಪ್ ಫೈನಲ್

ದುಬೈ: ವಿಶ್ವ ಕ್ರಿಕೆಟ್ ಅಧಿಪತ್ಯದ ಜತೆಗೆ ಏಷ್ಯಾದಲ್ಲೂ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಹಂಬಲದಲ್ಲಿರುವ ಭಾರತ ತಂಡ 14ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್​ನಲ್ಲಿ ಶುಕ್ರವಾರ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಚೇತೋಹಾರಿ ನಿರ್ವಹಣೆ ತೋರುತ್ತಿರುವ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಆರಂಭಿಕ ತಮೀಮ್ ಇಕ್ಬಾಲ್ ಗಾಯಕ್ಕೆ ತುತ್ತಾಗಿ ಅಲಭ್ಯರಾಗಿದ್ದರೆ, ಸೂಪರ್-4 ಹಂತದ ನಿರ್ಣಾಯಕ ಹೋರಾಟದಲ್ಲಿ ಇನ್ನೊಬ್ಬ ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಸೇವೆಯನ್ನೂ ಬಾಂಗ್ಲಾ ಕಳೆದುಕೊಂಡಿತ್ತು. ಇವರಿಬ್ಬರು ಇದ್ದರೂ ಬಾಂಗ್ಲಾ ವಿರುದ್ಧ ಭಾರತವೇ ಹಾಟ್ ಫೇವರಿಟ್ ತಂಡವಾಗಿ ಪ್ರಶಸ್ತಿ ಸೆಣಸಾಟಕ್ಕೆ ಇಳಿಯುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಈಗ ಅವರ ಗೈರಿನಲ್ಲಿ ಭಾರತಕ್ಕೆ ಇನ್ನಷ್ಟು ಸುಲಭ ಸವಾಲು ಎದುರಾಗುವ ನಿರೀಕ್ಷೆ ಇದೆ.

ವಿರಾಟ್ ಕೊಹ್ಲಿ ಗೈರಿನಲ್ಲೂ ಭಾರತ ತಂಡ ರೋಹಿತ್ ಶರ್ಮ ಸಾರಥ್ಯದಲ್ಲಿ ಟೂರ್ನಿಯಲ್ಲಿ ಅಜೇಯವಾಗಿ ಮುನ್ನಡೆದಿದೆ. ಟೀಮ್ ಇಂಡಿಯಾ ನಿರ್ವಹಣೆಗೆ ಸಾಟಿಯಾದ ತಂಡವೇ ಹಾಲಿ ಏಷ್ಯಾಕಪ್​ನಲ್ಲಿಲ್ಲ ಎಂದೆನ್ನಬಹುದು. ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಗಾಯದಿಂದಾಗಿ ಕಳೆದುಕೊಂಡರೂ, ಬದಲಿಯಾಗಿ ತಂಡ ಸೇರಿದ ರವೀಂದ್ರ ಜಡೇಜಾ ತಂಡದ ಬಲವಾಗಿ ಗೋಚರವಾಗಿದ್ದಾರೆ. ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಆರಂಭಿಕರಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಸೇರಿದಂತೆ ಐವರು ಮೊದಲ ಆಯ್ಕೆಯ ಆಟಗಾರರಿಗೆ ವಿಶ್ರಾಂತಿ ನೀಡಿಯೂ ಅಫ್ಘಾನಿಸ್ತಾನದಂಥ ಉತ್ಸಾಹಿ ತಂಡದ ಎದುರು ಟೈ ಫಲಿತಾಂಶ ಕಂಡಿತ್ತು. ಅತ್ತ ಬಾಂಗ್ಲಾದೇಶ ತಂಡ ಬ್ಯಾಟಿಂಗ್​ನಲ್ಲಿ ನೆಚ್ಚಿಕೊಂಡಿರುವುದು ಮುಶ್ಪೀಕರ್ ರಹೀಂರನ್ನು ಮಾತ್ರ. ಇಮ್ರುಲ್ ಕಯೀಸ್ ಹಾಗೂ ಸೌಮ್ಯ ಸರ್ಕಾರ್​ರನ್ನು ಟೂರ್ನಿಯ ನಡುವೆಯೇ ತಂಡಕ್ಕೆ ಸೇರಿಸುವ ಮೂಲಕ ಬ್ಯಾಟಿಂಗ್ ಬಲಪಡಿಸುವ ಪ್ರಯತ್ನ ಮಾಡಿದರೂ, ಇದರಲ್ಲಿ ಹೆಚ್ಚಿನ ಯಶ ಸಿಕ್ಕಿಲ್ಲ. ಶಕೀಬ್ ಅಲ್ ಹಸನ್​ರ ಸ್ಥಾನವನ್ನು ತುಂಬಬಲ್ಲ ಇನ್ನೊಬ್ಬ ಆಲ್ರೌಂಡರ್ ತಂಡದಲ್ಲಿ ಕಾಣಿಸುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್. 2016ರ ಏಷ್ಯಾಕಪ್ (ಟಿ20 ಮಾದರಿ) ಫೈನಲ್​ನಲ್ಲೂ ಭಾರತ-ಬಾಂಗ್ಲಾದೇಶ ಮುಖಾಮುಖಿ ಆಗಿದ್ದವು. ಬಾಂಗ್ಲಾದೇಶ ತಂಡ ಸೇಡಿನ ಗುರಿಯಲ್ಲಿದ್ದರೂ, ಅದಕ್ಕಾಗಿ ಭಾರತದ ಬಲಾಢ್ಯ ಬ್ಯಾಟಿಂಗ್​ನ ಬೆನ್ನೆಲುಬು ಮುರಿಯಬೇಕಿದೆ. ಆದರೆ, ಸೂಪರ್-4 ಹಂತದಲ್ಲಿ ಬಲಿಷ್ಠ ಬಾಂಗ್ಲಾ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದ ವಿಶ್ವಾಸ ಭಾರತ ತಂಡದಲ್ಲಿದೆ. -ಏಜೆನ್ಸೀಸ್

ತಮೀಮ್ ಇಕ್ಬಾಲ್ ಮುರಿದ ಕೈಬೆರಳಿನೊಂದಿಗೆ ಬ್ಯಾಟಿಂಗ್ ಮಾಡಿದಾಗಲೇ ನನ್ನ ಪಾಲಿಗೆ ಏಷ್ಯಾಕಪ್ ಗೆದ್ದಾಗಿತ್ತು. ನಮ್ಮ ತಂಡದ ಇಬ್ಬರು ಪ್ರಮುಖ ಆಟಗಾರರ ಗೈರಿನಲ್ಲೂ ಫೈನಲ್​ಗೇರಿದ್ದು ಹೆಮ್ಮೆಯ ಸಾಧನೆ. ಫೈನಲ್ ಪಂದ್ಯದಲ್ಲಿ ಭಾರತವೇ ಫೇವರಿಟ್ ಎಂಬುದರಲ್ಲಿ ಅನುಮಾನವಿಲ್ಲ. ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿರುವ ಭಾರತಕ್ಕೆ ಸವಾಲು ನಿಗದಿಪಡಿಸುವುದೇ ಕಷ್ಟ.

| ಮುಶ್ರಫೆ ಮೊರ್ಟಜ, ಬಾಂಗ್ಲಾ ನಾಯಕ

ಫೈನಲ್ ಪಂದ್ಯದಲ್ಲೂ ಟಾಸ್ ಗೆದ್ದವರಿಗೆ ಲಕ್!

ಮತ್ತೊಂದು ಭಾರತ-ಪಾಕಿಸ್ತಾನ ಮುಖಾಮುಖಿ ತಪ್ಪಿದ್ದರಿಂದ ನೇರಪ್ರಸಾರ ವಾಹಿನಿಗೆ ನಿರಾಸೆ ಆಗಿರಬಹುದು. ಆದರೆ, ಕ್ರಿಕೆಟ್ ಪ್ರೇಮಿಗಳಿಗೆ ಏಷ್ಯಾಕಪ್​ನ ಅತ್ಯುತ್ತಮ ತಂಡಗಳ ನಡುವೆ ಫೈನಲ್ ನೋಡುವ ಅವಕಾಶ ಲಭಿಸಿದೆ. ಎಂದಿನಂತೆ ಫುಲ್​ಹೌಸ್ ಸ್ಟೇಡಿಯಂನ ನಿರೀಕ್ಷೆ ಇದೆ. ಭಾರತ ಹಾಗೂ ಬಾಂಗ್ಲಾದೇಶಕ್ಕೆ ದುಬೈನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ದುಬೈನಲ್ಲಿ ನಡೆದ 6 ಪಂದ್ಯಗಳ ಪೈಕಿ 4ರಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಹಾಗಾಗಿ ಟಾಸ್ ಗೆದ್ದ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು.

ಭಾರತ ತಂಡ ಈವರೆಗೂ ಐದು ಬಾರಿ ಏಷ್ಯಾಕಪ್ ಏಕದಿನ ಟೂರ್ನಿ ಜಯಿಸಿದ್ದರೆ, ಬಾಂಗ್ಲಾದೇಶ ತಂಡ 2012ರಲ್ಲಿ ರನ್ನರ್​ಅಪ್ ಆಗಿದ್ದು ಶ್ರೇಷ್ಠ ಸಾಧನೆಯಾಗಿದೆ. 2010ರಲ್ಲಿ ಭಾರತ ತಂಡ ಕೊನೆಯ ಬಾರಿಗೆ ಏಷ್ಯಾಕಪ್ ಏಕದಿನ ಟೂರ್ನಿಯ ಚಾಂಪಿಯನ್ ಆಗಿತ್ತು. ಆ ನಂತರದ ಎರಡು ಟೂರ್ನಿಗಳಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಜಯ ಕಂಡಿದ್ದವು. 2016ರ ಟಿ20 ಏಷ್ಯಾಕಪ್​ನಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು.


ಪಾಕಿಸ್ತಾನಕ್ಕೆ ಬಾಂಗ್ಲಾ ಶಾಕ್

ಅಬುಧಾಬಿ: ಎರಡು ವಾರಗಳ ಅಂತರದಲ್ಲಿ ಮೂರನೇ ಬಾರಿಗೆ ಭಾರತ-ಪಾಕಿಸ್ತಾನ ಮುಖಾಮುಖಿಯನ್ನು ನೋಡುವ ಅಭಿಮಾನಿಗಳ ಆಸೆ ಭಗ್ನವಾಗಿದೆ. ಸೆಮಿಫೈನಲ್​ನಂತಿದ್ದ ಸೂಪರ್-4ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 37 ರನ್​ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಏಷ್ಯಾಕಪ್ ಫೈನಲ್​ಗೆ ಲಗ್ಗೆ ಇಟ್ಟಿದೆ.

ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಪೇರಿಸಿದ 239 ರನ್​ಗಳಿಗೆ ಪ್ರತಿಯಾಗಿ ಪಾಕಿಸ್ತಾನ 9 ವಿಕೆಟ್​ಗೆ 202 ರನ್ ಬಾರಿಸಿ ಸೋಲು ಕಂಡಿತು. ಮುಸ್ತಾಫಿಜುರ್ ರೆಹಮಾನ್ (43ಕ್ಕೆ 4) ನೇತೃತ್ವದ ಬಾಂಗ್ಲಾ ತಂಡದ ಬೌಲಿಂಗ್ ಎದುರಿಸುವಲ್ಲಿ ಆರಂಭದಲ್ಲಿಯೇ ಎಡವಿದ ಪಾಕಿಸ್ತಾನ ತಂಡಕ್ಕೆ ಆರಂಭಿಕ ಇಮಾಮ್ ಉಲ್ ಹಕ್ (83ರನ್, 105 ಎಸೆತ, 2 ಬೌಂಡರಿ, 1 ಸಿಕ್ಸರ್) ಅರ್ಧಶತಕ ಬಾರಿಸುವ ಮೂಲಕ ಗೆಲುವಿನ ಆಸೆ ನೀಡಿದ್ದರು. 94 ರನ್​ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನ ಹಂತದಲ್ಲಿದ್ದ ವೇಳೆ ಇಮಾಮ್ ಹಾಗೂ ಆಸಿಫ್ ಅಲಿ (31ರನ್, 47 ಎಸೆತ, 3 ಬೌಂಡರಿ) 6ನೇ ವಿಕೆಟ್​ಗೆ 71 ರನ್ ಜತೆಯಾಟವಾಡಿ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ಆಸಿಫ್ ಅಲಿ ವಿಕೆಟ್ ಉರುಳಿಸುವ ಮೂಲಕ ಮಹದಿ ಹಸನ್ ಈ ಜತೆಯಾಟ ಬೇರ್ಪಡಿಸಿದರು. ಆ ಬಳಿಕ ಪಾಕಿಸ್ತಾನ ತಂಡದ ಗೆಲುವಿನ ಯತ್ನ ಹೆಚ್ಚು ಕಾಲ ಉಳಿಯಲಿಲ್ಲ.

ಬಾಂಗ್ಲಾದೇಶ: 48.5 ಓವರ್​ಗಳಲ್ಲಿ 239, ಪಾಕಿಸ್ತಾನ: 9 ವಿಕೆಟ್​ಗೆ 202 (ಇಮಾಮ್ ಉಲ್ ಹಕ್ 83, ಶೋಯೆಬ್ ಮಲೀಕ್ 30, ಆಸಿಫ್ ಅಲಿ 31, ಫಖರ್ ಜಮಾನ್ 1, ಬಾಬರ್ ಅಜಾಮ್ 1, ಸರ್ಫ್ರಾಜ್ ಅಹ್ಮದ್ 10, ಶಾದಬ್ ಖಾನ್ 4, ಮುಸ್ತಾಫಿಜುರ್ 43ಕ್ಕೆ 4, ಮೆಹದಿ ಹಸನ್ 28ಕ್ಕೆ 2, ರುಬೆಲ್ ಹುಸೇನ್ 38ಕ್ಕೆ 1, ಮಹಮದುಲ್ಲ 38ಕ್ಕೆ 1, ಸೌಮ್ಯ ಸರ್ಕಾರ್ 19ಕ್ಕೆ 1). -ಏಜೆನ್ಸೀಸ್