ಬೋಧನಾ ಪದ್ಧತಿಯಲ್ಲಿ ಹೊಸತನ ಅಳವಡಿಸಿಕೊಳ್ಳಿ

 ಬೆಳಗಾವಿ: ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ತರ ಸ್ಥಾನವಿದೆ. ಶಿಕ್ಷಕರು ಬೋಧನಾ ಪದ್ಧತಿಯಲ್ಲಿ ಹೊಸತನ ಅಳವಡಿಸಿಕೊಂಡು ಸಾವಿರಾರು ಮಕ್ಕಳ ಭವಿಷ್ಯ ಕಟ್ಟಲು ಶ್ರಮಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸಲಹೆ ನೀಡಿದರು.

ನಗರದ ಕಾಲೇಜು ರಸ್ತೆಯ ಗಾಂ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಆಯೋಜಿಸಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗ ತಂತ್ರಜ್ಞಾನ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಈ ಮಹತ್ವದ ಕಾಲಘಟ್ಟದಲ್ಲಿ ಶಿಕ್ಷಕರು ಪಠ್ಯ ಬೋಧನೆಗೆ ಸೀಮಿತವಾಗಬಾರದು. ಸತತ ಅಧ್ಯಯನಶೀಲರಾಗಬೇಕು. ಹೊಸ ಸಂಶೋಧನೆಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಒಬ್ಬ ಮೂರ್ತಿಕಾರ ಕಲ್ಲಿಗೆ ಶಿಲೆಯ ರೂಪ ನೀಡುವಂತೆ, ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ತಿದ್ದಿ ಪ್ರಗತಿಪಥದತ್ತ ಕರೆದೊಯ್ಯಬೇಕು. ಶಾಲೆಯಲ್ಲಿ ಮನೆಯ ವಾತಾವರಣ ನಿರ್ಮಿಸಿ, ಶೈಕ್ಷಣಿಕ ವ್ಯವಸ್ಥೆಯ ಮೂಲ ಆಶಯಗಳನ್ನು ಈಡೇರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಶಿಕ್ಷಕರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗಬಾರದು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಸರ್ಕಾರದ ವತಿಯಿಂದ ನಿಮಗೆ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ ಬೆನಕೆ, ಶಿಕ್ಷಕರು ಕರ್ತವ್ಯ ನಿಷ್ಠೆ ಬೆಳೆಸಿಕೊಳ್ಳಬೇಕು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸದಾ ಕ್ರಿಯಾಶೀಲರಾಗಿ ದುಡಿಯಬೇಕು. ಸದೃಢ ರಾಷ್ಟ್ರ ನಿರ್ಮಾಣವೇ ನಿಮ್ಮ ಧ್ಯೇಯವಾಗಬೇಕು ಎಂದು ಹೇಳಿದರು.

ಡಿಡಿಪಿಐ ಡಾ.ಆನಂದ ಪುಂಡಲಿಕ ಪ್ರಾಸ್ತಾವಿಕವಾಗಿ ಪ್ರಾಸ್ತಾವಿಕ ಮಾತನಾಡಿದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶಿಕ್ಷಕರಿಗೆ ನೀಡಿರುವ ಸಂದೇಶ ಓದಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ 28 ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೋರಲ್, ಬೆಳಗಾವಿ ನಗರ ಬಿಇಒ ಕೆ.ಡಿ.ಬಡಿಗೇರ, ರಾಜಶೇಖರ ಚಳಗೇರಿ, ಜಯಕುಮಾರ ಹೆಬ್ಳಿ, ರಾಮು ಗುಗವಾಡ, ಕೆ.ಎಸ್.ರಾಚನ್ನವರ ಇತರರು ಹಾಜರಿದ್ದರು.


ಶಿಕ್ಷಕರಿಗೆ ಮಿನಿಸ್ಟರ್ ಕ್ಲಾಸ್!

ಸಚಿವೆ ಶಶಿಕಲಾ ಜೊಲ್ಲೆ ನಿಗದಿಯಂತೆ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, 11 ಗಂಟೆಯಾದರೂ ಬಹುತೇಕ ಅಕಾರಿಗಳು ಮತ್ತು ಶಿಕ್ಷಕರು ಬಾರದ್ದರಿಂದ ಬೇಸರ ವ್ಯಕ್ತಪಡಿಸಿದರು.
‘ಬದುಕಿನಲ್ಲಿ ಉನ್ನತ ಸಾಧನೆ ಮಾಡಲು ಸಮಯ ಪಾಲನೆ ಬಹಳ ಮುಖ್ಯ. ಮಕ್ಕಳಿಗೆ ಬದುಕಿನ ಪಾಠ ಮಾಡಬೇಕಾದ ನೀವೇ ತಡವಾಗಿ ಬಂದರೆ ಹೇಗೆ?’ ಎಂದು ತಮ್ಮ ಭಾಷಣದಲ್ಲಿ ಅಕಾರಿಗಳು ಮತ್ತು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡರು. ಮುಂದಿನ ವರ್ಷದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಈ ಸಂಗತಿ ಮರಕಳಿಸುವುದು ಬೇಡ. ನಾವೆಲ್ಲ ಸಮಯಪ್ರಜ್ಞೆ ಬೆಳೆಸಿಕೊಳ್ಳೋಣ ಎಂದರು.

ಸದೃಢ ರಾಷ್ಟ್ರ ನಿರ್ಮಾಣದ ನೈಜ ಶಿಲ್ಪಿಗಳು

ಶಿಕ್ಷಕರು ಸದೃಢ ರಾಷ್ಟ್ರ ನಿರ್ಮಾಣದ ನೈಜ ಶಿಲ್ಪಿಗಳಿದ್ದಂತೆ. ದೇಶದ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ದೊಡ್ಡದಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಭಿಪ್ರಾಯಪಟ್ಟರು.
ಇಂದು ನಾವೆಲ್ಲ ಉನ್ನತ ಸ್ಥಾನ ಪಡೆಯಲು ಗುರುಗಳೇ ಕಾರಣ. ನೀವು ನೀಡಿದ ಉತ್ತಮ ಸಂಸ್ಕಾರ, ಶಿಕ್ಷಣ ಹಾಗೂ ನಾಯಕತ್ವ ಗುಣಗಳಿಂದ ನಾವು ಉತ್ತಮ ಸೇವೆ ಮಾಡುತ್ತಿದ್ದೇವೆ. ಶಿಕ್ಷಕರು ಗಡಿಯಾರ ನೋಡಿ ಕರ್ತವ್ಯ ನಿರ್ವಹಿಸಬಾರದು. ದೇಶದ ಭವಿಷ್ಯ ಕಟ್ಟುವ ಹುಮ್ಮಸ್ಸಿನೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *