ಶಿಕ್ಷಕರ ವರ್ಗಾವಣೆ ಕುರಿತ ಮಾರ್ಗಸೂಚಿಯಿಂದ ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕೆಲವು ಅಧ್ಯಾಪಕರಿಗೆ ಸಂತಸವಾಗಿದೆ. ಆದರೆ, ಕಡ್ಡಾಯ ವರ್ಗಾವಣೆಯಿಂದ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರ ಶಿಕ್ಷಕ ಪತಿ, ಪತ್ನಿ ಆತಂಕಕ್ಕೀಡಾಗಿದ್ದಾರೆ. ದೂರಕ್ಕೆ ವರ್ಗಾವಣೆಯಿಂದ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂಬ ಭೀತಿ ಶಿಕ್ಷಕರದ್ದು. ಈ ಬಗ್ಗೆ ಖಾಸಗಿ ಉದ್ಯೋಗದಲ್ಲಿರುವ ಶಿಕ್ಷಕಿಯ ಪತಿ ‘ವಿಜಯವಾಣಿ’ ಸಹಾಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ವರದಿಗಾರ ಭರತ್ರಾಜ್ ಸೊರಕೆ ಸಿದ್ಧಪಡಿಸಿದ ವರದಿ ಇಲ್ಲಿದೆ.
ಮಂಗಳೂರು: ನಗರ ವಲಯದ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಕಡ್ಡಾಯವಾಗಿ ಗ್ರಾಮಾಂತರ ಪ್ರದೇಶಕ್ಕೆ ವರ್ಗಾಯಿಸಬೇಕು ಎಂಬುದು ಸರ್ಕಾರದ ಆದೇಶ. ಆದರೆ, ಈ ಮಾರ್ಗಸೂಚಿಯಿಂದ ಕಂಗಾಲಾದವರು ಖಾಸಗಿ ವಲಯದ ಶಿಕ್ಷಕ ಪತಿ, ಪತ್ನಿಯರು.
ಸರ್ಕಾರಿ ಮತ್ತು ಸರ್ಕಾರಿ ಪ್ರಾಯೋಜಿತ ಬ್ಯಾಂಕ್, ಅಂಚೆ ಇಲಾಖೆ, ಎಲ್ಐಸಿ ಮೊದಲಾದ ಇಲಾಖೆಗಳಲ್ಲಿ ಶಿಕ್ಷಕರ ಪತಿ, ಪತ್ನಿ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಇದೆ. ಇಲ್ಲಿ ತೊಂದರೆ ಆಗಿರುವುದು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ.
ನಗರದಿಂದ ತೀರಾ ಹಳ್ಳಿ ಪ್ರದೇಶಕ್ಕೆ ಹೋಗಬೇಕಿರುವುದು ಕಡ್ಡಾಯ. ಗಂಡ ಖಾಸಗಿ ಉದ್ಯೋಗದಲ್ಲಿದ್ದು, ಶಿಕ್ಷಕ ವೃತ್ತಿಯ ಹೆಂಡತಿಯನ್ನು ಏಕಾಏಕಿ ಹಳ್ಳಿ ಪ್ರದೇಶಕ್ಕೆ ವರ್ಗ ಮಾಡಿದರೆ, ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಿದಂತಾಗುತ್ತದೆ. ಸಾಮಾನ್ಯವಾಗಿ ಎ ವಲಯದಲ್ಲಿ ಹತ್ತು ವರ್ಷ ಪೂರೈಸಿರುವ ಶಿಕ್ಷಕರು 40 ವರ್ಷ ಮೇಲ್ಪಟ್ಟವರು. ಅವರನ್ನು ಈಗಿರುವ ಜಿಲ್ಲೆ ಬಿಟ್ಟು ಬೇರೆ ಕಡೆಗೆ ಹೋಗಿ ಎನ್ನುವುದು ಆರೋಗ್ಯ ಮತ್ತು ವೃತ್ತಿಯ ಮೇಲೆ ಪರಿಣಾಮ ಬೀರಬಹುದು. ಇದಕ್ಕಾಗಿಯೇ, ನಿವೃತ್ತಿ ಅಂಚಿನಲ್ಲಿರುವ ಹಲವರು ಸ್ವಯಂ ನಿವೃತ್ತಿ (ವಿಆರ್ಎಸ್) ಸಿದ್ಧತೆಯಲ್ಲಿದ್ದಾರೆ.
ಇಲ್ಲಿ ಎ ವಲಯ(ನಗರ)ದಿಂದ ಸಿ ವಲಯ(ತೀರಾ ಗ್ರಾಮೀಣ)ಕ್ಕೆ ಆದೇಶಿಸಿರುವುದು ತಪ್ಪು ಎನ್ನುವುದು ಶಿಕ್ಷಕರ ದೂರು. ನಗರದಿಂದ ತೀರಾ ಗ್ರಾಮೀಣ ವಲಯಕ್ಕೆ ವರ್ಗಾವಣೆ ಆದಾಗ 50 ಕಿ.ಮೀ.ದೂರಕ್ಕೆ ವರ್ಗಾವಣೆ ಆಗಬಹುದು. ಇದರ ಬದಲು ಎ ವಿಭಾಗದಿಂದ ಬಿ, ಬಿ ನಿಂದ ಎ, ಸಿ ನಿಂದ ಬಿ ವಲಯಕ್ಕೆ ವರ್ಗಾವಣೆ ಮಾಡಬೇಕು. ಆಗ ಬಹಳ ದೂರಕ್ಕೆ ಸ್ಥಳಾಂತರ ಸಾಧ್ಯತೆ ಕಡಿಮೆ. ಕೊನೇ ಪಕ್ಷ ಒಂದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದಂತಾಗುತ್ತದೆ.
ಇಬ್ಬರಿಗೂ ಸರ್ಕಾರಿ ನೌಕರಿ ಸಾಧ್ಯವೇ?
ಶಿಕ್ಷಕರು ಮದುವೆಯಾಗುವಾಗ ಸರ್ಕಾರಿ ಕೆಲಸವಿರುವವರನ್ನೇ ಸಂಗಾತಿಯಾಗಿ ಹುಡುಕಲು ಸಾಧ್ಯವಿಲ್ಲ. ನಿರುದ್ಯೋಗ ಹೆಚ್ಚಾಗಿರುವ ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗವನ್ನೇ ಕಾದುಕುಳಿತುಕೊಳ್ಳಲೂ ಸಾಧ್ಯವಿಲ್ಲ. ಒಂದು ಸ್ಥಳದಲ್ಲಿರುವ ಖಾಸಗಿ ಕಂಪನಿ, ಅಂಗಡಿ, ಕ್ಲಿನಿಕ್, ವ್ಯವಹಾರಗಳನ್ನು ಸರ್ಕಾರ ವರ್ಗಾಯಿಸಿದ ಕಡೆಯಲ್ಲಿ ಪ್ರಾರಂಭಿಸಲು ಅಸಾಧ್ಯ. ಈ ವರ್ಗಾವಣೆ ಪ್ರಕ್ರಿಯೆ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರ ಸಂಸಾರಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ನಮಗೂ ಮನೆ, ಕುಟುಂಬ ಇರುತ್ತದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ಮನುಷ್ಯರಲ್ಲವೇ ಎನ್ನುವುದು ಶಿಕ್ಷಕರೊಬ್ಬರ ಪ್ರಶ್ನೆ.
ವರ್ಗಾವಣೆ ನೆಪದಲ್ಲಿ ಅದೆಷ್ಟೋ ಶಿಕ್ಷಕ ಕುಟುಂಬ ಮಾನಸಿಕ ನೆಮ್ಮದಿ ಕೆಡಿಸಿಕೊಂಡಿದೆ. ಮುಖ್ಯಮಂತ್ರಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದಂತಾಗಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರ ಪತಿ, ಪತ್ನಿ ಶಿಕ್ಷಕರ ಹಿತ ಕಾಪಾಡಲಿ. ಸರ್ಕಾರಿ ಕೆಲಸದವರು, ಖಾಸಗಿಯವರು ಎಂಬ ತಾರತಮ್ಯ ಬೇಡ.
ರಾಘವೇಂದ್ರ ಮೈಸೂರು, ಖಾಸಗಿ ಉದ್ಯೋಗಿ, ಶಿಕ್ಷಕಿಯೊಬ್ಬರ ಪತಿ