ಹೊಸಪೇಟೆ: ಶಾಲೆಗೆ ಗಣಿತ, ಸಮಾಜ ವಿಜ್ಞಾನ ವಿಷಯ ಶಿಕ್ಷಕರು ಹಾಗೂ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದ ಸಂಕ್ಲಾಪುರದಲ್ಲಿರುವ ಕಾಳಘಟ್ಟ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ ಕಣ್ಣೀರಿಟ್ಟರು.
ಕನ್ನಡ ಹೊರತುಪಡಿಸಿ ಉಳಿದ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಅದರಲ್ಲೂ ಕಳೆದ ಐದು ವರ್ಷದಿಂದ ಗಣಿತ ಕ್ಲಾಸ್‌ಗಳು ನಡೆದಿಲ್ಲ. ಪರೀಕ್ಷೆ ಬರೆಯಿರಿ ಎಂದರೆ ಹೇಗೆ ಬರೆಯಬೇಕು. ಫ್ಲೋರೈಡ್ ನೀರನ್ನೆ ಕುಡಿಯುತ್ತಿದ್ದೇವೆ. ಸೊಳ್ಳೆ ಉಪಟಳ ಹೆಚ್ಚಾಗಿದೆ. 5 ಕೊಠಡಿಯಲ್ಲಿ 250 ವಿದ್ಯಾರ್ಥಿಗಳು ಇದ್ದೇವೆ. ಟ್ರಂಕ್, ಬಟ್ಟೆಗಳನ್ನಿಟ್ಟುಕೊಳ್ಳಲು ಮತ್ತು ಮಲಗಲು ಸ್ಥಳವಿಲ್ಲ. ತರಗತಿಯಲ್ಲಿ ಡೆಸ್ಕ್ ಸಹ ಇಲ್ಲ. ಏನೇ ಕೇಳಿದರೆ ಪತ್ರ ಬರೆದುಕೊಡುವಂತೆ ಪ್ರಾಚಾರ್ಯರು ಕೇಳುತ್ತಾರೆ. ಅನೇಕ ಬಾರಿ ಪತ್ರ ಬರೆದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಒಂದೆ ವಸತಿ ಶಾಲೆಯಲ್ಲಿ ಇಬ್ಬರು ಪ್ರಾಚಾರ್ಯರಿದ್ದಾರೆ. 50 ವಿದ್ಯಾರ್ಥಿನಿಯರು ಒಂದೇ ವಸತಿ ಕೊಠಡಿಯಲ್ಲಿ ಇರಬೇಕು. ರೂಮಿಗೆ ಅಳವಡಿಸಿದ 40 ವೋಲ್ಟ್ ಬಲ್ಬ್ ಬೆಳಕಲ್ಲಿ 50 ವಿದ್ಯಾರ್ಥಿಗಳು ಬುಕ್ ಹಿಡಿದು ಓದಬೇಕಾಗಿದೆ. ನಮ್ಮ ಸಮಸ್ಯೆ ಯಾರೂ ಕೇಳುತ್ತಿಲ್ಲವೆಂದು ಕಣ್ಣೀರಟ್ಟ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಬರುವವರೆಗೆ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು. ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಕೀನಾಬಾನು ದೂರವಾಣಿ ಮೂಲಕ ಮಾತನಾಡಿ, ಮಂಗಳವಾರ ವಸತಿ ನಿಲಯಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಗಣಿತ ಪಠ್ಯ ಬೋಧನೆ ಪೂರ್ಣಗೊಳಿಸಲು ಶಿಕ್ಷಕರಿಗೆ ಸೂಚಿಸಿದ್ದೇನೆ. ಕಳೆದ 10 ವರ್ಷಗಳಿಂದ ಕನ್ನಡ ಹೊರತುಪಡಿಸಿ ಉಳಿದ ವಿಷಯಗಳಿಗೆ ಕಾಯಂ ಶಿಕ್ಷಕರಿಲ್ಲ. ಗಣಿತ ಹೊರತುಪಡಿಸಿ ಇನ್ನುಳಿದ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ನಾನು ಕಂಪ್ಯೂಟರ್ ಟೀಚರೆಂದು ನೇಮಕಗೊಂಡಿದ್ದೇನೆ. ಪ್ರಾಚಾರ್ಯ, ವಾರ್ಡನ್ ಜವಾಬ್ದಾರಿ ನೀಡಲಾಗಿದೆ. ಮಕ್ಕಳ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಬಗೆಹರಿಸಲು ಪ್ರಯತ್ನಿಸುತ್ತೇನೆ.
| ರುಕ್ಮಿಣಿ ಎನ್.ಹವಲೆ, ಪ್ರಾಚಾರ್ಯೆ, ವಾರ್ಡನ್, ಕಾಳಘಟ್ಟ ಮುರಾರ್ಜಿ ದೇಸಾಯಿ ವಸತಿ ಶಾಲೆ. ಸಂಕ್ಲಾಪುರ