
ಹುಣಸೂರು: ಭವಿಷ್ಯದ ಸದೃಢ ಭಾರತ ನಿರ್ಮಾಣದಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಬಹುದೊಡ್ಡದಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೋಟರಿ ವಿದ್ಯಾಸಂಸ್ಥೆಯ 30ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ, ಜ್ಞಾನ ನೀಡುವ ಕಾರ್ಯವನ್ನು ಶಿಕ್ಷಕರು ನಡೆಸುತ್ತಾರೆ. ಶಿಕ್ಷಕರು ತಮ್ಮ ಮಕ್ಕಳಿಗೆ ವಿದ್ಯೆ ಕಲಿಸುತ್ತಾರೆಂದು ಪಾಲಕರು ಸುಮ್ಮನೆ ಇದ್ದರೆ ವಿದ್ಯಾರ್ಥಿ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವಿಲ್ಲ. ಮನೆಯಲ್ಲಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿರುವ ಕುರಿತು ಮಾಹಿತಿ ಪಡೆದು ತಪ್ಪು ಒಪ್ಪುಗಳನ್ನು ತಿದ್ದುವ ಕಾರ್ಯ ಮಾಡಬೇಕು. ಮನೆಯಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವತ್ತ ಗಮನಹರಿಸಬೇಕು. ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳು ಈ ದೇಶದ ಆಸ್ತಿಯಾಗಬೇಕೆಂದರೆ ಶಿಕ್ಷಕ ಮತ್ತು ಪಾಲಕರ ಪಾತ್ರ ಬಹುಮುಖ್ಯವಾದುದು. ವಿಶ್ವದಾದ್ಯಂತ ನಿಸ್ವಾರ್ಥ ಸೇವೆ ಮಾಡಿ ಜನಜನಿತವಾಗಿರುವ ರೋಟರಿ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲೂ ತನ್ನದೇ ಛಾಪನ್ನು ಮೂಡಿಸುತ್ತಿದೆ. ಹುಣಸೂರು ರೋಟರಿ ವಿದ್ಯಾಸಂಸ್ಥೆ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಸತತ 13 ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.100 ಆಗಿರುವುದೇ ಸಾಕ್ಷಿಯಾಗಿದೆ. ಪಾಲಕರು ತಮ್ಮ ಮಕ್ಕಳು ಉನ್ನತ ವ್ಯಾಸಂಗ, ಉದ್ಯೋಗ ಪಡೆಯಬೇಕೆನ್ನುವ ಹಂಬಲಕ್ಕೆ ಪೂರಕವಾಗಿ ಶಿಕ್ಷಕರು ಮತ್ತು ಸಂಸ್ಥೆ ದುಡಿಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಚಲನಚಿತ್ರ ನಟ ಗಣೇಶ್‌ರಾವ್ ಕೇಸರ್ಕರ್ ಮಾತನಾಡಿ, ಹುಣಸೂರು ಅತ್ಯಂತ ವಿಶೇಷತೆಗಳನ್ನು ಹೊಂದಿದೆ. ಚಿತ್ರರಂಗದಲ್ಲಿ ಹುಣಸೂರು ಕೃಷ್ಣಮೂರ್ತಿಯಂತಹ ನಿರ್ದೇಶಕರು, ದ್ವಾರಕೀಶ್‌ರಂತಹ ಪ್ರತಿಭೆ ಈ ನೆಲದಿಂದ ಬಂದಿದೆ. ಸೈನಿಕರಿಗಾಗಿಯೇ ಗ್ರಾಮವನ್ನು ಸ್ಥಾಪಿಸಿರುವ ತಾಲೂಕು ಹುಣಸೂರಾಗಿದೆ. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಕರ್ಮಭೂಮಿ ಹುಣಸೂರು. ಇಂತಹ ಊರಿನಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭೆಗಳನ್ನು ಗುರುತಿಸುವ ಕಾರ್ಯದಲ್ಲಿ ರೋಟರಿ ವಿದ್ಯಾಸಂಸ್ಥೆ ಮೊದಲಾಗಿರುವುದು ಎಲ್ಲರಿಗೂ ಹೆಮ್ಮೆ. ಪ್ರತಿಭೆಗಳನ್ನು, ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿರಿ ಎಂದು ಆಶಿಸಿದರು.
ರೋಟರಿ 3181ರ ನಿಯೋಜಿತ ಜಿಲ್ಲಾ ಗವರ್ನರ್ ಯಶಸ್ವಿನಿ ಸೋಮಶೇಖರ್, ರೋಟರಿ ವಿದ್ಯಾಸಂಸ್ಥೆ ಚೇರ‌್ಮನ್ ರೊ.ಡಾ.ಚಂದ್ರನಂದನ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿದರು. ರೋಟರಿ ಅಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಯದರ್ಶಿ ಕೃಷ್ಣಕುಮಾರ್, ಸಹಾಯಕ ಗರ್ವನರ್ ರೊ.ಆನಂದ್ ಸೇರಿದಂತೆ ರೋಟರಿ ಸದಸ್ಯರು, ವಿದ್ಯಾಸಂಸ್ಥೆ ಶಿಕ್ಷಕವೃಂದ ಮತ್ತು ಪಾಲಕರು ಹಾಜರಿದ್ದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ನಡೆಸಿಕೊಟ್ಟರು.