ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ಸಾವಳಗಿ: ಇಂಗ್ಲಿಷ್ ಹಾಗೂ ಗಣಿತ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಸಮೀಪದ ಅಡಿಹುಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮಂಗಳವಾರ ಸರ್ಕಾರಿ ಪ್ರೌಢಶಾಲೆಗೆ ಬೀಗ ಜಡಿದು ಸಾವಳಗಿ- ಚಿಕ್ಕಲಕಿ ಕ್ರಾಸ್ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದಲೂ ಶಾಲೆಯಲ್ಲಿ ಇಂಗ್ಲಿಷ್, ಗಣಿತ ಶಿಕ್ಷಕರಿಲ್ಲ. ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದು, ಇದುವರೆಗೆ ಒಂದೂ ಪಾಠ ಬೋಧನೆ ಮಾಡಿಲ್ಲ. ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಎದುರಿಸಬೇಕು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವ ಶಾಲೆಯಲ್ಲಿ ಕೇವಲ 4 ಕೊಠಡಿಗಳಿವೆ. ಡೆಸ್ಕ್ ಸಿಗದ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ವಣವಾಗಿದೆ. ಶಾಲೆಗೆ ಮೂಲ ಸೌಲಭ್ಯ ಕೊರತೆ ಕಾಡುತ್ತಿದೆ. ಮೇಲಧಿಕಾರಿಗಳ ಗಮ ನಕ್ಕೆ ತಂದು ಸಮಸ್ಯೆ ಬಗೆ ಹರಿಸಬೇಕಾದ ಮುಖ್ಯ ಶಿಕ್ಷಕರೇ ಸಮಯಕ್ಕೆ ಸರಿಯಾಗಿ ಬರದೇ ನಿರ್ಲಕ್ಷ್ಯನ ತೋರುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಡಿಡಿಪಿಐ ಎಂ.ಆರ್. ಕಾಮಾಕ್ಷಿ, ಶಿಕ್ಷಕರ ಬೇಡಿಕೆ ವಿವರ ಸಲ್ಲಿಸದಿರುವುದು ಹಾಗೂ ಅತಿಥಿ ಶಿಕ್ಷಕರ ನೇಮಕಕ್ಕೆ ಮಾಡಿಕೊಳ್ಳದಿರುವುದಕ್ಕೆ ಶಾಲೆ ಮುಖ್ಯ ಶಿಕ್ಷಕ ಹಾಗೂ ಬಿಇಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಶುಲ್ಕದಲ್ಲಿ ಗೋಲ್‍ಮಾಲ್: ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 63 ರೂ. ಪ್ರವೇಶ ಶುಲ್ಕ ಇದ್ದು, ಆದರೆ ಇಲ್ಲಿನ ಮುಖ್ಯ ಶಿಕ್ಷಕರು ಪ್ರತಿ ವಿದ್ಯಾರ್ಥಿಯಿಂದ 90 ರೂ. ಹಣ ಪಡೆದು ಇಲ್ಲಿಯವರೆಗೆ ರಸೀದಿ ಸಹ ನೀಡಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂಬುದು ಪಾಲಕರು ದೂರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮಕ್ಕಳ ಸಮಸ್ಯೆ ಆಲಿಸಿದ್ದೇನೆ. ವಾರದಲ್ಲಿ ಇಂಗ್ಲಿಷ್ ಹಾಗೂ ಗಣಿತ ಶಿಕ್ಷಕರನ್ನು ನೇಮಕಗೊಳಿಸುತ್ತೇನೆ.

| ಎಂ.ಆರ್. ಕಾಮಾಕ್ಷಿ ಡಿಡಿಪಿಐ