ನೂರೆಂಟು ಜವಾಬ್ದಾರಿ ನಲುಗಿದ ಶಿಕ್ಷಕರು

ಶಿಕ್ಷಕ ಎಂದರೆ ಜ್ಞಾನದಾತ. ಆದರೆ, ಇವತ್ತಿನ ಸರ್ಕಾರಿ ಶಿಕ್ಷಕರಿಗೆ ಈ ಕೆಲಸವನ್ನು ಮಾಡಲು ಸಾಧ್ಯವೇ ಆಗುತ್ತಿಲ್ಲ. ಬಿಸಿಯೂಟದ ಲೆಕ್ಕಾಚಾರ, ದಾಖಲೀಕರಣ, ಪಠ್ಯೇತರ ಚಟುವಟಿಕೆ, ಚುನಾವಣೆ ಡ್ಯೂಟಿ… ಪಟ್ಟಿ ಉದ್ದವಿದೆ. ಒಟ್ಟಿನಲ್ಲಿ, ನಮ್ಮ ಶಿಕ್ಷಕರಿಗೆ ಕೆಲಸ ಮಾಡಲು ದಿನದ 24 ಗಂಟೆ ಸಮಯ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ, ನಿಮ್ಮ ಸಮಸ್ಯೆಗಳನ್ನು ಬರೆದು ಕಳಿಸಿ ಎಂದು ಶಿಕ್ಷಕರಿಗೆ ‘ವಿಜಯವಾಣಿ’ ಮನವಿ ಮಾಡಿತ್ತು. ಇದಕ್ಕೆ ನಾಡಿನ ಸಾವಿರಾರು ಶಿಕ್ಷಕರು ಪ್ರತಿಕ್ರಿಯಿಸಿದ್ದಾರೆ. ನಿತ್ಯವೂ ತಾವು ಎದುರಿಸುವ ಸಮಸ್ಯೆಗಳ ಸರಮಾಲೆಯನ್ನೇ ಓದುಗರೆದುರು ಬಿಚ್ಚಿಟ್ಟಿದ್ದಾರೆ. ಆ ಪೈಕಿ ಆಯ್ದ ಕೆಲವು ಬರಹಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ಸ್ವತಃ ಅವ್ಯವಸ್ಥೆ ಮಾಡಿದ ಸರ್ಕಾರ

ಪ್ರಾಥಮಿಕ ಶಾಲೆಗಳಲ್ಲಿನ ಮುಖ್ಯ ಶಿಕ್ಷಕರು ಲೆಕ್ಕಾಧಿಕಾರಿಗಳಂತೆ ಹಾಗೂ ಸಹ ಶಿಕ್ಷಕರು ಗುಮಾಸ್ತರಂತೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಶಾಲೆಯ ಮುಖ್ಯ ಗುರುಗಳಿಗೆ ಬಿಸಿಯೂಟದ ಜವಾಬ್ದಾರಿ ವಹಿಸಿರುವುದು ಖಂಡನಾರ್ಹ. ಈ ಯೋಜನೆಯ ಆರಂಭದಿಂದಲೂ ಶಿಕ್ಷಕರು ತೀವ್ರ ಸಂಕಟದ ಸ್ಥಿತಿ ಎದುರಿಸುತ್ತಿದ್ದಾರೆ. ಈ ಗೋಳನ್ನು ಯಾರೂ ಕೇಳದಿರುವುದರಿಂದ ಸರ್ಕಾರವೇ ಕೈಯಾರೆ ಶಿಕ್ಷಣ ಹಾಗೂ ಮಕ್ಕಳನ್ನು ಅವ್ಯವಸ್ಥೆಯ ಕೂಪಕ್ಕೆ ತಳ್ಳಿದಂತಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಯೂಟ ನಿರ್ವಹಣೆ, ಹಾಜರಾತಿ ಸಂಗ್ರಹ, ಅಕ್ಕಿ, ಬೇಳೆ, ಎಣ್ಣೆ ಮೊದಲಾದ ಅಡುಗೆ ಸಾಮಗ್ರಿಗಳನ್ನು ಮಕ್ಕಳ ಸಂಖ್ಯೆಗನುಗುಣವಾಗಿ ಹೊಂದಿಸುವ ಹಣಕಾಸಿನ ವ್ಯವಹಾರವಲ್ಲದೆ ರಾಜಕೀಯ ಪ್ರೇರಿತ ಎಸ್​ಡಿಎಂಸಿಯನ್ನು ನಿರ್ವಹಿಸಬೇಕು. ಸರ್ಕಾರಿ ಶಿಕ್ಷಕರ ನೇಮಕಾತಿ ಮೆರಿಟ್ ಆಧಾರದಲ್ಲಿ ನಡೆದರೂ ಶಾಲೆಗಳಲ್ಲಿ ಮಾತ್ರ ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿಲ್ಲ. ಖಾಸಗಿ ಶಾಲೆಯ ಶಿಕ್ಷಕರು ಶಾಲಾ ಚಟುವಟಿಕೆ ಹೊರತುಪಡಿಸಿ ಬೇರಾವ ಕಾರ್ಯವನ್ನೂ ಮಾಡುವುದಿಲ್ಲ. ಇದರಿಂದಾಗಿ ಮಕ್ಕಳಿಗೆ ಅಲ್ಲಿ ಪೂರಕ ಶಿಕ್ಷಣ ದೊರಕುತ್ತಿದೆ. ಇದಕ್ಕೆಲ್ಲ ಸರ್ಕಾರದ ಅವೈಜ್ಞಾನಿಕ ಶಿಕ್ಷಣ ನೀತಿಯೇ ಕಾರಣ. ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬೋಧನೆಗೆ ಮೀಸಲಿಟ್ಟಿದ್ದರೆ, ಪ್ರಾಥಮಿಕ ಶಾಲೆಗಳನ್ನು ಮುಚ್ಚುವಂಥ ಸ್ಥಿತಿ ಬರುತ್ತಿರಲಿಲ್ಲ. ಶಾಲಾ ದಾಖಲಾತಿ ಹಾಗೂ ಇತರ ಚಟುವಟಿಕೆ ನಿಭಾಯಿಸಲು ದ್ವಿತೀಯ ದರ್ಜೆಯ ಗುಮಾಸ್ತರನ್ನು ಈ ಶಾಲೆಗಳಲ್ಲಿ ನೇಮಕಾತಿ ಮಾಡಬೇಕು.

| ಎಸ್. ಜಿ. ಸಲಗರೆ ದಿಗ್ಗೇವಾಡಿ (ರಾಯಬಾಗ)

ವರ್ಗಾವಣೆಗೆ ನೂರೆಂಟು ಕಗ್ಗಂಟು

ಮಹಾರಾಷ್ಟ್ರ ಗಡಿಭಾಗದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಕಳೆದ 11 ವರ್ಷಗಳಿಂದ ಶಿಕ್ಷಕನಾಗಿದ್ದೇನೆ. ನನ್ನ ಊರು ಶಾಲೆಯಿಂದ 450 ಕಿ.ಮೀ ದೂರದಲ್ಲಿದ್ದು, ನನ್ನ ಪಾಲಕರು 3 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ, ನನ್ನ ಊರಿಗೆ ವರ್ಗಾವಣೆ ಮಾಡಿಸಿಕೊಂಡರೆ ಮುಪ್ಪಿನ ಪಾಲಕರಿಗೆ ಅನುಕೂಲವಾಗುತ್ತದೆ. ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನೀತಿಯಿಂದ ನನ್ನ ಮೂರು ವರ್ಷದ ವರ್ಗಾವಣೆ ಪ್ರಯತ್ನ ವ್ಯರ್ಥವಾಗಿದೆ. ದೇಶದಲ್ಲಿ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿರುವಾಗ ನಮ್ಮ ರಾಜ್ಯದಲ್ಲಿನ ಪರಿಸ್ಥಿತಿ ಮಾತ್ರ ಶಿಕ್ಷಕರ ನೆಮ್ಮದಿಯನ್ನು ಹಾಳು ಮಾಡಿದೆ. ಇದು ನನ್ನೊಬ್ಬನ ನೋವಲ್ಲ. ನನ್ನಂತೆಯೇ ಹಲವಾರು ಶಿಕ್ಷಕರಿದ್ದಾರೆ. ವರ್ಗಾವಣೆ ಆರಂಭ ಎನ್ನುತ್ತಿದ್ದಂತೆ, ತಡೆಯಾಜ್ಞೆ, ಟಿಡಿಎಸ್ ಸಮಸ್ಯೆ, ಹೆಚ್ಚುವರಿ ಶಿಕ್ಷಕರ ಸಮಸ್ಯೆ, ಕಡ್ಡಾಯ ವರ್ಗಾವಣೆ ಸಮಸ್ಯೆಯಂಥ ಹಲವಾರು ತಾಪತ್ರಯಗಳಿವೆ. ಇಂಥ ಹಿಂಸೆಗಳೂ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅಡ್ಡಿಯಾಗುತ್ತಿವೆ.

| ಹೆಸರು ಬೇಡ

ಶಿಕ್ಷಣ ಶಿಕ್ಷೆಯಲ್ಲ…

ನಾವು ಚಿಕ್ಕವರಿದ್ದಾಗ ನಮ್ಮ ಶಿಕ್ಷಕರು ಕಿವಿ ಹಿಡಿದು ಉಟಾಬಸ್ ತೆಗೆಸುತ್ತಿದ್ದರು, ಮೈದಾನದ ಸುತ್ತು ಹಾಕಿಸುತ್ತಿದ್ದರು, ಒಂದೆರಡು ಕ್ಲಾಸ್ ನಿಲ್ಲಿಸುತ್ತಿದ್ದರು… ಹೋಂ ವರ್ಕ್ ಮಾಡದಿದ್ದರೆ ಅದಕ್ಕೆ ಬೇರೆಯದೇ ಶಿಕ್ಷೆ ಇತ್ತು. ಆಗ ಮಕ್ಕಳಾಗಿದ್ದ ನಾವು ಶಿಕ್ಷಕರಿಗೆ ಬೈದುಕೊಳ್ಳುತ್ತಿದ್ದುದೂ ಉಂಟು. ಆದರೆ ಅದರ ಹಿಂದಿನ ಸತ್ಯ ಈಗ ಗೊತ್ತಾಗುತ್ತಿದೆ. ನಮ್ಮ ವೈದ್ಯಶಾಸ್ತ್ರವು ಉಟಾಬಸ್ ತೆಗೆಯುವುದು, ಓಡುವುದು, ನಿಲ್ಲುವುದು ಆರೋಗ್ಯ ಕಾಪಿಟ್ಟುಕೊಳ್ಳಲು ಎಷ್ಟು ಅವಶ್ಯಕ ಎನ್ನುವುದನ್ನು ಹೇಳುತ್ತದೆ. ಒಂದೇ ವಿಷಯವನ್ನು ಬಹಳ ಸಲ ಬರೆಯುವುದು ಶಿಕ್ಷೆ ಎನಿಸಿದರೂ ಅದು ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲದು. ಈಗ ಶಾಲೆಗಳಲ್ಲಿ ಅಂಥ ಶಿಕ್ಷೆಗಳನ್ನು ಕೊಡುವಂತೆಯೇ ಇಲ್ಲ! ಅದಕ್ಕೇ ತಾನೇ ವೈದ್ಯರು ವಾಕಿಂಗ್, ಯೋಗ- ಧ್ಯಾನ ಹಾಗೂ ವ್ಯಾಯಾಮದ ಸಲಹೆ ನೀಡುವುದು? ಆಗ ಶಾಲೆಯ ಶಿಕ್ಷೆ ಮಕ್ಕಳ ಒಳ್ಳೆಯದಕ್ಕೆ ಎಂಬುದು ಪಾಲಕರಿಗೂ ಗೊತ್ತಿತ್ತು. ಹಾಗಾಗಿ ಅವರು ಇದರ ಬಗ್ಗೆ ಏನೂ ಅನ್ನುತ್ತಿರಲಿಲ್ಲ, ಆದರೆ ಈಗ..? ಮಕ್ಕಳಿಗೆ ಶಿಕ್ಷೆ ಕೊಡುವುದು ದೂರದ ಮಾತು, ಏರುದನಿಯಲ್ಲಿ ಸ್ವಲ್ಪ ಬೈದರೂ ಸಾಕು, ಕೆಲ ಪಾಲಕರು ಶಾಲೆಗೆ ಬಂದು ಗುರುಗಳ ಶರ್ಟ್ ಕಾಲರ್ ಹಿಡಿಯುತ್ತಿದ್ದಾರೆ. ಒಂದೆರಡು ಗಂಟೆ ನಿಲ್ಲಿಸುವ ಶಿಕ್ಷಕರ ವಿರುದ್ಧ ಅನಾಮಧೇಯ ಪತ್ರಗಳ ಮೂಲಕ ಬೆದರಿಕೆ ಹಾಕಿ ನಿಂದಿಸುತ್ತಾರೆ. ಒಪ್ಪುತ್ತೇನೆ, ಈಗ ಇರುವುದು ಒಂದೋ-ಎರಡೋ ಮಕ್ಕಳು. ಹಾಗೆಂದು ಅವರ ಮೇಲೆ ಅತಿ ಪ್ರೀತಿ ತೋರಿದರೆ ಮಕ್ಕಳು ಚುರುಕಾಗುವುದು ಹೇಗೆ? ಅಂದಮಾತ್ರಕ್ಕೆ ಮಕ್ಕಳು ಸಹಿಸಲಾರದಷ್ಟು ಶಿಕ್ಷೆ ನೀಡುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಿದೆ. ಅಂಥ ಶಿಕ್ಷೆಗಳನ್ನು ನಾನೂ ಖಂಡಿಸುತ್ತೇನೆ.

| ಕೆ. ನಾಗರಾಜ ಪ್ರಾಂಶುಪಾಲರು, ಪೂರ್ಣಪ್ರಜ್ಞ ವಿದ್ಯಾಪೀಠ ಹೈಸ್ಕೂಲ್, ಸದಾಶಿವನಗರ

ಶಿಕ್ಷಕರು ಸುಮ್ುಮ್ನೆ ಶಿಕ್ಷೆ ಕೊಡಲ್ಲ..

ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಶಿಕ್ಷೆ ಕೊಡುವುದು ಸಾಮಾನ್ಯ. ಆದರೆ ಈಗ ಅದೇ ಅಪರಾಧವಾದಂತಿದೆ. ಮಕ್ಕಳು ತಪು್ಪ ತಿದ್ದಿಕೊಳ್ಳಲಿ ಎಂದು ಶಿಕ್ಷಿಸಿದರೆ ಪಾಲಕರೇ ಜಗಳ ಕಾಯುತ್ತಾರೆ. ಹೀಗಿದ್ದಾಗ ತಮ್ಮ ಮಕ್ಕಳು ಯಾವ ತಪು್ಪ ಮಾಡಿದ್ದಾರೆ ಎಂಬುದನ್ನು ಪಾಲಕರು ತಿಳಿಯಬೇಕು. ಶಿಕ್ಷಕ ಶಿಕ್ಷೆ ಕೊಡಬಾರದು ಎಂದಾದರೆ ಶಿಕ್ಷಕ ಎನ್ನುವ ಪದಕ್ಕೆ ಅರ್ಥವೇ ಇರುವುದಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಂತೆ ಮಕ್ಕಳಾಗಿದ್ದಾಗ ಪೆಟ್ಟು ಕೊಡದೆ, ಶಿಕ್ಷೆ ನೀಡಿ ತಪು್ಪ ತಿದ್ದದಿದ್ದರೆ ದೊಡ್ಡವರಾದ ಮೇಲೆ ಹೇಳಿದ್ದು ಕೇಳುತ್ತಾರೆಯೇ? ಪ್ರತಿಯೊಬ್ಬ ಪಾಲಕರಿಗೂ ನನ್ನದೊಂದು ವಿನಂತಿ ಎಂದರೆ, ಶಿಕ್ಷಕರನ್ನು ಗೌರವದಿಂದ ಕಾಣಿ. ಶಿಕ್ಷಕರು ಮಕ್ಕಳಿಗೆ ನೀಡುವ ಶಿಕ್ಷೆ ಏಕೆಂದು ಅರಿಯಿರಿ. ಮಕ್ಕಳಿಗೂ ಹಿರಿಯರನ್ನು ಗೌರವಿಸುವುದನ್ನು ಕಲಿಸಿ.

| ಚೇತನಾ ನಾಗರಾಜ, ಮುಚ್ಚಟ್ಟಿ, ಹಾವೇರಿ

ಸೇವಾ ಹಿರಿತನಕ್ಕೆ ಬೆಲೆ ಸಿಗಲಿ

ವರ್ಗಾವಣೆ ಶಿಕ್ಷಕರ ನಿದ್ದೆಗೆಡಿಸಿದೆ, ಇದು ಶಿಕ್ಷಕರ ಪಾಲಿಗೆ ಇತ್ತೀಚಿನ ವರ್ಷಗಳ ಘನಘೊರ ಮಾನಸಿಕ ಹಿಂಸೆಯೇ ಸರಿ. ಅದರಲ್ಲೂ ಅಧ್ಯಾಪಕರ ಸೇವಾ ಹಿರಿತನಕ್ಕೆ ಬೆಲೆಯೇ ಸಿಗದಿರುವುದು ಶಿಕ್ಷಕರ ಪಾಲಿಗೆ ನುಂಗಲಾರದ ತುತ್ತು. ಸರ್ಕಾರದ ಅವೈಜ್ಞಾನಿಕ ಆದ್ಯತೆಗಳಿಂದಾಗಿ 10- 20 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರು ವರ್ಗಾವಣೆ ಪ್ರಕ್ರಿಯೆಯಲ್ಲಿ ಕೇವಲ 3-4 ವರ್ಷ ಸೇವೆ ಇರುವವರ ನಂತರದಲ್ಲಿ ಆದ್ಯತೆ ಪಡೆಯುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಹಿರಿತನಕ್ಕೆ ಅನ್ಯಾಯವಾಗಿ ಪ್ರತಿವರ್ಷ ಮತ್ತೆ ಮತ್ತೆ ವರ್ಗ ಪಡೆದವರೇ ಆದ್ಯತೆಗಳ ನೆಪದಲ್ಲಿ ಮತ್ತೆ ವರ್ಗವಾಗುತ್ತಿದ್ದಾರೆ, ಆದರೆ, ಸಾಮಾನ್ಯ ಶಿಕ್ಷಕ 10-20+ ವರ್ಷ ಸೇವಾಹಿರಿತನ ಇದ್ದರೂ ವರ್ಗಾವಣೆಗೆ ಅವಕಾಶ ಇಲ್ಲವಾಗಿದೆ. ಅಕಸ್ಮಾತ್ ಬೆರಳೆಣಿಕೆಯಷ್ಟು ಅವಕಾಶ ಸಿಕ್ಕರೂ ವರ್ಗವಾಗಿ ಘಟಕದ ಹೊರಗೆ ಹೋದರೆ ಅಲ್ಲಿಯೂ ಸೇವಾ ಹಿರಿತನ ಕಳೆದುಕೊಂಡು ಆ ಘಟಕದ ಕಿರಿಯರಾಗಿ ಸೇವೆ ಸಲ್ಲಿಸಬೇಕಾದ ಸ್ಥಿತಿ ಶಿಕ್ಷಕರದ್ದಾಗಿದೆ. ದಯಮಾಡಿ ಸಂಬಂಧಪಟ್ಟವರು ಅನಿವಾರ್ಯ ಆದ್ಯತೆ ಹೊರತುಪಡಿಸಿ, ಸೇವಾಹಿರಿತನಕ್ಕೆ ಗೌರವ ಕೊಡಬೇಕು. ಈ ಮೂಲಕ, ಪ್ರತಿವರ್ಷ ತಪ್ಪದೆ ವರ್ಗಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಮಾಡಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವಂತಾಗಬೇಕು.

| ಈರಪ್ಪ ಸೊರಟೂರ, ಶಿಕ್ಷಕ ಬಳ್ಳಾರಿ ಜಿಲ್ಲೆ

ಶಿಕ್ಷಕರ ಕೆಲಸ ಸರಳಗೊಳಿಸಿ

ಹೆಚ್ಚುವರಿ ಜವಾಬ್ದಾರಿಯ ನಡುವೆಯೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ದಶವಾರ್ಷಿಕ ಗಣತಿ ಕಾರ್ಯ, ಚುನಾವಣಾ ಕರ್ತವ್ಯ, ವಿಷಯವಾರು ತರಬೇತಿ, ವಿವಿಧ ಆಚರಣೆಗಳು, ಬಿಸಿಯೂಟ, ಹಾಜರಾತಿ ದಾಖಲೀಕರಣ ಸಹಿತ 50-60 ದಾಖಲೆ ಸಿದ್ಧಪಡಿಸುವುದು ಸೇರಿ ಹಲವು ಹೆಚ್ಚುವರಿ ಕೆಲಸಗಳು ಶಿಕ್ಷಕರ ಮೇಲಿವೆ. ಇದು ಪಾಠ-ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ. ಶಿಕ್ಷಕರ ಕೊರತೆ, ಇನ್ನೊಂದೆಡೆ ಹಲವು ಜವಾಬ್ದಾರಿ, ವರ್ಗಾವಣೆಯಲ್ಲಿ ಲೋಪದೋಷ, ಅನುದಾನ ಕೊರತೆ ನಡುವೆಯೂ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ಜಿಲ್ಲೆಯ ಮಟ್ಟಿಗೆ ಇಲ್ಲಿನ ಶಿಕ್ಷಕರು ಮಕ್ಕಳ ಶಿಕ್ಷಣದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲವನ್ನೂ ಸರಳೀಕರಣಗೊಳಿಸಿ ಶಿಕ್ಷಕರಿಗೆ ವರ್ಷವಿಡೀ ಪಾಠದಲ್ಲಿ ತೊಡಗುವಂತೆ ಮಾಡಬೇಕು. ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಣ ಭದ್ರ ಬುನಾದಿಯಾಗಿದ್ದು, ಅದು ಗಟ್ಟಿಯಾದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಗಟ್ಟಿಯಾಗಲು ಸಾಧ್ಯ.

| ಶಿವಶಂಕರ್ ಭಟ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ.ಕ. ಜಿಲ್ಲಾ ಸಮಿತಿ

ಶಿಕ್ಷಕ ನಿಜಾರ್ಥದ ‘ಗುರು’ವಾಗಬೇಕು!

ಕ್ಷಣಕ್ಷಣಕ್ಕೂ ಸಂಕೀರ್ಣತೆಯೆಡೆಗೆ ಸಾಗುತ್ತಿರುವ ಇಂದಿನ ದಿನಮಾನದಲ್ಲಿ ಅಧ್ಯಾಪಕ ವೃತ್ತಿಯು ಅತ್ಯಂತ ಪಂಥಾಹ್ವಾನದ್ದಾಗಿದೆ. ದೂರದರ್ಶನ, ಮೊಬೈಲ್, ಅಂತರ್ಜಾಲಗಳ ಯಥೇಚ್ಛ ಬಳಕೆಯಿಂದ ಇಂದು ಸಣ್ಣ ಮಕ್ಕಳೂ ಅನೇಕ ಬಾರಿ ಅಧ್ಯಾಪಕರಿಗಿಂತ ಒಂದು ಹೆಜ್ಜೆ ಮುಂದಕ್ಕೆ ‘ಅಪ್​ಡೇಟ್’ ಆಗಿರುತ್ತಾರೆ. ಯಾವುದೇ ಪೂರ್ವತಯಾರಿ ಇಲ್ಲದೆ ತರಗತಿಗೆ ಕೈ ಬೀಸಿಕೊಂಡು ಹೋದಲ್ಲಿ ವಿದ್ಯಾರ್ಥಿಗಳೆದುರು ಅವಮಾನಕ್ಕೀಡಾಗಬಹುದಾದ ಸನ್ನಿವೇಶ ಇಂದಿದೆ. ಹೀಗಾಗಿ ಅಧ್ಯಾಪಕರಾದವರು ಹಿಂದೆಂದಿಗಿಂತಲೂ ನಿತ್ಯವೂ ಹೆಚ್ಚೆಚ್ಚು ಅಧ್ಯಯನಶೀಲರಾಗಲೇಬೇಕಾದ ತುರ್ತಿದೆ. ಜತೆಗೆ, ಸಾಮಾಜಿಕ ಜಾಲತಾಣಗಳ ಮನಸೋಇಚ್ಛೆ ಬಳಕೆಯಿಂದಾಗಿ ಬೇಡದ ‘ಕಸ’ಗಳನ್ನು ಮಕ್ಕಳು ತಲೆಗೆ ತುಂಬಿಕೊಂಡಿರುವಾಗ, ಅಂತಹವರ ಮನವೊಲಿಸಿ ಶುದ್ಧ ವಿಚಾರಗಳಿಂದ ಸಮಾಜದ ಮುಖ್ಯವಾಹಿನಿಗೆ ಕರೆತಂದು ಸತ್ಪ ್ರೆಯನ್ನಾಗಿ ಮಾಡುವ ಗುರುತರ ಹೊಣೆ ಗುರುಗಳ ಮೇಲಿದೆ. ಈ ಹಿನ್ನೆಲೆಯಲ್ಲಿ ಪಾಲಕರ ಸಹಕಾರ ಪಡೆಯುವ ಕೃತಶಕ್ತಿ ಅಧ್ಯಾಪಕರಿಗೆ ಇರಲೇಬೇಕಾಗುತ್ತದೆ. ತರಗತಿಯಲ್ಲಿ ಕಲಿಸುವುದರ ಜತೆಗೆ, ವಿದ್ಯಾರ್ಥಿಯ ವ್ಯಕ್ತಿತ್ವ ನಿರ್ವಿುಸುವ ಕರ್ತವ್ಯ ಅಧ್ಯಾಪಕರ ಮೇಲಿದೆ. ಹೀಗಾಗಿ ಇಂದಿನ ಶಿಕ್ಷಕರು ಕೇವಲ ಶಿಕ್ಷಕರಾಗಿದ್ದರೆ ಸಾಲದು, ಅಧ್ಯಾಪಕರೂ ಆಗಿರಬೇಕು; ಅದಕ್ಕಿಂತ ಹೆಚ್ಚು ನಿಜಾರ್ಥದ ಶೀಲವಂತ ‘ಗುರು’ವಾಗಬೇಕು.

| ಸುರೇಶ್ ಮರಕಾಲ ಸಾಯ್ಬರಕಟೆ

3 ವರ್ಷದಿಂದ ನೀಡಿಲ್ಲ ಪದೋನ್ನತಿ

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೈಕ್ಷಣಿಕ ಅವಧಿಯ ಮಧ್ಯಂತರದಲ್ಲಿ ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿರುವುದು ಅವೈಜ್ಞಾನಿಕ. ಇದರಿಂದ ಗುಣಾತ್ಮಕ ಶಿಕ್ಷಣ ನೀಡಲು ಅಡಚಣೆಯಾಗುತ್ತಿ್ತೆ. ನಲಿ-ಕಲಿ ಯೋಜನೆಗೆ ವಿದ್ಯಾರ್ಥಿಗಳನ್ನು ಸಾಮರ್ಥ್ಯದ ಆಧಾರದಲ್ಲಿ ಗುರುತಿಸುವುದು ಬೇಡ. ತರಗತಿ ಆಧಾರದಲ್ಲೇ ನಲಿ-ಕಲಿಯನ್ನು ವ್ಯವಸ್ಥಿತವಾಗಿ ಕಲಿಸಬೇಕು. ಇದಕ್ಕೆ ಅಗತ್ಯ ಶಿಕ್ಷಕರನ್ನು ನೇಮಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ(ಎಲ್​ಕೆಜಿ, ಯುಕೆಜಿ)ಗಳನ್ನು ಆರಂಭಿಸಬೇಕು. ಇದರಿಂದ ಅಲ್ಲಿ ಸೇರುವ ಮಕ್ಕಳೇ ಮುಂದೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಾರೆ. ಮಗುವಿಗೆ ಐದು ವರ್ಷ 5 ತಿಂಗಳು ತುಂಬುವವರೆಗೆ ಯಾವ ಬಡ ಪಾಲಕರೂ ಇಂದು ಕಾಯುವುದಿಲ್ಲ. ಎಲ್ಲೋ ಒಂದು ಕಡೆ ಎಲ್​ಕೆಜಿಗೆ ಸೇರಿಸಿ ಆ ಹಾದಿಯಲ್ಲೇ ಮುಂದೆ ಸಾಗುತ್ತಾರೆ. ಸತತ 3 ವರ್ಷದಿಂದ ವರ್ಗಾವಣೆಯಿಲ್ಲದೆ ಶಿಕ್ಷಕರು ಬಳಲುತ್ತಿದ್ದಾರೆ. ಕೆಲ ಅಧಿಕಾರಿಗಳು ಹಾಗೂ ಲಿಪಿಕ ಸಿಬ್ಬಂದಿ ನಿರ್ಲಕ್ಷ್ಯಂದ 3 ವರ್ಷದಿಂದ ಪದೋನ್ನತಿ ನೀಡುತ್ತಿಲ್ಲ. ಸರ್ವಶಿಕ್ಷಾ ಅಭಿಯಾನದಡಿ ಸೇರಿದ ಶಿಕ್ಷಕರಿಗೆ 3-4 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದು ಸಕಾಲದಲ್ಲಿ ನೀಡುವಂತಾಗಬೇಕು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ನಿವೃತ್ತಿಯಾದ ಶಿಕ್ಷಕರಿಗೆ ಬದುಕೇ ಇಲ್ಲದಂತಾಗುತ್ತದೆ.

| ಬಿ. ಎನ್. ಸುಂದರೇಶ್ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು

ಮಾಹಿತಿ ಹಕ್ಕು ಕಾರ್ಯಕರ್ತರ ಕಾಟ

ಸರ್ವಶಿಕ್ಷಣ ಅಭಿಯಾನದಡಿಯ ಶಿಕ್ಷಕರಿಗೆ ಸಕಾಲಕ್ಕೆ ವೇತನ ಪಾವತಿಯಾಗುತ್ತಿಲ್ಲ. ಅಲ್ಲದೆ, ಶಿಕ್ಷಕರಿಗೆ ಶಾಲಾ ಕೆಲಸಗಳ ಜತೆಗೆ ಜನಗಣತಿ ಸೇರಿ ವಿವಿಧ ಕೆಲಸ ವಹಿಸಲಾಗುತ್ತಿದೆ. ಮಾಹಿತಿ ಹಕ್ಕು ಕಾರ್ಯಕರ್ತರು ಪದೇ ಪದೆ ಮಾಹಿತಿ ಕೇಳುವುದರಿಂದ ಶಿಕ್ಷಕರಿಗೆ ಸಮಸ್ಯೆಯಾಗುತ್ತಿದೆ. ಈ ಕಾರಣದಿಂದ ಸರ್ಕಾರ ಶಾಲೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಲು ಶಾಲೆಗಳಿಗೆ ಕ್ಲರ್ಕ್ ಒಬ್ಬರನ್ನು ನೇಮಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲ ಸಮಸ್ಯೆಗಳ ಕೊರತೆಯಿದೆ. ಶಾಲಾ ಕೊಠಡಿ ದುರಸ್ತಿ ಹಾಗೂ ಶೌಚಗೃಹದ ಸಮಸ್ಯೆಯಿದೆ. ಇದರಿಂದಾಗಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ, ಶಾಲಾ ದುರಸ್ತಿಗೆ ಹಣ ಬಿಡುಗಡೆ ಮಾಡುವ ಜತೆಗೆ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

| ಬೀರಪ್ಪ ಅಂಡಗಿ ಸಿಪಿಎಸ್ ಶಾಲೆ ಮುಖ್ಯಶಿಕ್ಷಕ, ಕೊಪ್ಪಳ

ಆತ್ಮಸ್ಥೈರ್ಯ ಕುಂದಿಸುವ ಪಾಲಕರು!

ಮಕ್ಕಳ ಮೇಲೆ ಮಾನಸಿಕ ಮತ್ತು ದೈಹಿಕವಾಗಿ ಯಾವುದೇ ದೌರ್ಜನ್ಯವಾಗಬಾರದೆಂಬ ಅತ್ಯುತ್ತಮ ಉದ್ದೇಶದಿಂದ ದೇಶದಲ್ಲಿ ಕಾನೂನುಗಳು ರೂಪುಗೊಂಡಿವೆ. ಆದರೆ, ಈ ಕಾನೂನುಗಳು ಸೂಕ್ತ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಇವುಗಳ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಬಹುಮಂದಿ ದುರ್ಬಳಕೆ ಮಾಡಿಕೊಳ್ಳುವವರಿದ್ದಾರೆ. ಮಾತುಮಾತಿಗೂ ಶಿಕ್ಷಕರನ್ನು ಜೈಲಿಗಟ್ಟಲು ತುದಿಗಾಲಿನಲ್ಲಿ ನಿಂತಿರುವಂತೆ ಬೆದರಿಕೆ ಹಾಕುವವರಿದ್ದಾರೆ. ಇಂತಹ ಪಾಲಕರು ಕಣ್ಣ ಮುಂದೆ ಕಾಣಿಸಿಕೊಳ್ಳುತ್ತಿರುವಾಗ ಯಾವ ಶಿಕ್ಷಕರು ತಾನೇ ಮಕ್ಕಳಿಗೆ ನೈತಿಕ ಪಾಠ ಹೇಳಲು ಮುಂದಾಗುತ್ತಾರೆ? ಸುಳ್ಳು ಜಾತಿ ನಿಂದನೆ, ದೈಹಿಕ ದೌರ್ಜನ್ಯದ ಬೆದರಿಕೆಗಳು ಹೆಚ್ಚಾಗುತ್ತಿವೆ. ಪೊಲೀಸ್, ಜೈಲು ಎಂದಾಕ್ಷಣ ಶಿಕ್ಷಕರ ಆತ್ಮಸ್ಥೈರ್ಯವೇ ಉಡುಗಿ ಹೋಗುತ್ತದೆ.

| ನಂದೀಶ ಬಿ. ಹದಿನಾರು

ಪಠ್ಯೇತರ ಕೆಲಸ ಬೇಡ

ಶಿಕ್ಷಣ ಇಲಾಖೆಯಲ್ಲಿ ಆಡಳಿತಾತ್ಮಕ ಮತ್ತು ಅಭಿವೃದ್ಧಿ ಎಂಬ ಎರಡು ವಿಭಾಗಗಳಿವೆ. ಇದರಿಂದಾಗಿ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಲು ಶಿಕ್ಷಕರಿಂದ ಆಗುತ್ತಿಲ್ಲ. ಸರ್ಕಾರದ ವಿವಿಧ ಕೆಲಸಗಳು, ಸಮೀಕ್ಷೆಗಳಿಗೆ ಶಿಕ್ಷಕರನ್ನು ಮಾತ್ರ ನಿಯೋಜಿಸುವುದರಿಂದ ಮಕ್ಕಳು ಪಾಠದಿಂದ ವಂಚಿತರಾಗುತ್ತಿದ್ದಾರೆ. ಇದರೊಂದಿಗೆ ಇತರ ಇಲಾಖೆ ಸಿಬ್ಬಂದಿಯನ್ನು ಜತೆಗೂಡಿಸಬೇಕು. ಬಿಸಿಯೂಟ, ಸೈಕಲ್, ಪುಸ್ತಕ ವಿತರಣೆಯನ್ನು ಶಿಕ್ಷಕರು ನಿರ್ವಹಿಸುವುದರಿಂದ ಶಿಕ್ಷಕರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಇದನ್ನು ಖಾಸಗೀಕರಣ ಮಾಡಿದರೆ ಒಳಿತು. ಸರ್ವಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ ಯೋಜನೆಯಡಿ ನೇಮಕಗೊಂಡ ಶಿಕ್ಷಕರಿಗೆ 3 ತಿಂಗಳಿಗೊಮ್ಮೆ ವೇತನವಾಗುತ್ತಿದ್ದು, ಶಿಕ್ಷಕರು ಜೀವನ ನಡೆಸುವುದು ಕಷ್ಟ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು.

| ಹೆಸರು ಹೇಳಲಿಚ್ಛಿಸದ ಶಿಕ್ಷಕ ಹೊಸಪೇಟೆ

ಶಿಕ್ಷಕರು ಶಿಕ್ಷಕರಾಗಿರಲು ಬಿಡಿ

ಶಿಕ್ಷಕರಾಗಿ ಬಂದಿರುವುದೇ ಒಂದು ಶಾಪವೆಂಬ ಭಾವನೆ ನನಗೆ ಬಂದಿದೆ. ಕಾರಣವಿಷ್ಟೆ, ಬೋಧಿಸಲು ಅನುವು ಮಾಡಿಕೊಡಲಾಗದಷ್ಟು ಇಲಾಖೆಯ ಜವಾಬ್ದಾರಿಗಳು ನನ್ನನ್ನು ಹೈರಾಣಾಗಿಸಿವೆ. ಮೇಲಧಿಕಾರಿಗಳು ಹಲವಾರು ಕೆಲಸಗಳನ್ನು ನೀಡಿದ್ದು, ಶೈಕ್ಷಣಿಕ ಚಟುವಟಿಕೆಗಳತ್ತ ಗಮನ ಹರಿಸಲು ಸಮಯ ಸಾಲುತ್ತಿಲ್ಲ. ಶಿಕ್ಷಕರಿಗೆ ಬೋಧಿಸಲು, ಶಿಕ್ಷಿಸಲು ಎಲ್ಲಿಯವರೆಗೆ ಸ್ವಾತಂತ್ರ್ಯ ಇರುವುದಿಲ್ಲವೋ ಅಲ್ಲಿಯತನಕ ಮಕ್ಕಳನ್ನು ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ರೂಪಿಸಲು ಸಾಧ್ಯವಿಲ್ಲ. ಮೊದಲೆಲ್ಲ ಶಿಕ್ಷಕರಿಗೆ ಸಿಗುತ್ತಿದ್ದ ಗೌರವಾದರಗಳು ಇಂದು ಮರೆಯಾಗಿವೆ. ಪ್ರತಿವರ್ಷವೂ 15-20 ಹೊಸ ಪ್ರಯೋಗಗಳನ್ನು ನಮ್ಮ ಮೇಲೆ ಪ್ರಯೋಗಿಸುತ್ತಿದ್ದಾರೆ. ಇದರಿಂದ ಮಾನಸಿಕ ನೆಮ್ಮದಿಯೇ ಕಳೆದುಹೋಗಿದೆ.

| ಮಂಜುನಾಥ ಎಂ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲ್ಕುಣಿ ಶಿವಮೊಗ್ಗ, | ಪ್ರಕಾಶ್ ದೊಡ್ಡಮನಿ ದಾವಣಗೆರೆ

ಒನ್ ಮ್ಯಾನ್ ಷೋ

ಶಿಕ್ಷಕ ವೃತ್ತಿಯಲ್ಲಿ ಹೇಳಲು ಸಶಕ್ತ ಶಿಕ್ಷಕರು ಕೇಳುವ ಆಸಕ್ತ ವಿದ್ಯಾರ್ಥಿಗಳು ಇದ್ದರೂ ಇವರೀರ್ವರ ನಡುವೆ ಕಲಿಕಾ ಸಂಪನ್ಮೂಲಗಳ ಕೊರತೆ, ಕೊಠಡಿಗಳ ಕೊರತೆ ಕಾಡುತ್ತಿದೆ. ವಿಷಯವಾರು ಶಿಕ್ಷಕರು ಇಲ್ಲದ ಸಮಯದಲ್ಲಿ ಎಲ್ಲ ವಿಷಯಗಳನ್ನು ಸೀಮಿತ ಶಿಕ್ಷಕರೇ ಬೋಧಿಸುವ ಪರಿಸ್ಥಿತಿ ಹಾಗೂ ದೈಹಿಕ ಶಿಕ್ಷಕರು ಇಲ್ಲದ ನಮ್ಮ ಮಾದರಿ ಶಾಲೆಯಲ್ಲಿ, ನಾನೇ ದೈಹಿಕ ಶಿಕ್ಷಣ ಶಿಕ್ಷಕರ ಕೆಲಸ ನಿರ್ವಹಿಸುತ್ತ, ನೃತ್ಯ ಹಾಗೂ ಸಂಗೀತವನ್ನೂ ಹೇಳಿಕೊಡುತ್ತಿದ್ದೇನೆ.

ಗೈರಾದ ಮಕ್ಕಳ ಮನೆಗೂ ಭೇಟಿ ನೀಡಿ, ಕಾರಣ ತಿಳಿದುಕೊಂಡು ಮತ್ತೆ ಕರೆತರುತ್ತಿದ್ದೇನೆ. ಇದರ ನಡುವೆ, ಕ್ಷೀರಭಾಗ್ಯ, ಬಿಸಿಯೂಟದ ಹೊರೆಯೂ ನನ್ನ ಮೇಲಿದೆ. ಹೀಗಾಗಿ, ಗುಣಮಟ್ಟದ ಶಿಕ್ಷಣದ ಕಡೆ ಅಷ್ಟಾಗಿ ಗಮನಹರಿಸಲು ಆಗುತ್ತಿಲ್ಲ.

| ಶಾಂತಾ ಎಂ. ಟಿ. ಸಿರಗುಪ್ಪ, ಬಳ್ಳಾರಿ

ನಮ್ಮದಲ್ಲದ ತಪ್ಪಿಗೆ ಬೈಸಿಕೊಳ್ಳಬೇಕು

ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆಯಷ್ಟು ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂಬ ಮನಸ್ಥಿತಿ ಪಾಲಕರಲ್ಲಿ ಮೂಡಿದೆ. ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರಿಲ್ಲದಿರುವುದರ ಜತೆಗೆ ಸರ್ಕಾರದ ಯೋಜನೆಗಳಾದ ಬಿಸಿಯೂಟ, ಕ್ಷೀರಭಾಗ್ಯ, ಬಿಎಲ್​ಒಗಳಾಗಿ ಕಾರ್ಯ ನಿರ್ವಹಣೆ, ಚುನಾವಣಾ ಕರ್ತವ್ಯ, ದಾಖಲೆಗಳ ನಿರ್ವಹಣೆ ಶಿಕ್ಷಕರಿಗೆ ನಿಜಕ್ಕೂ ತೀವ್ರ ಹೊರೆಯಾಗಿದೆ. ಆದರೆ, ಈ ಎಲ್ಲವೂ ಪಾಲಕರಿಗೆ ಅರ್ಥವಾಗದೇ ಮಕ್ಕಳಿಗೆ ಶಿಕ್ಷಕರು ಏನೂ ಕಲಿಸುತ್ತಿಲ್ಲ ಎಂದು ದೂರುತ್ತಾರೆ. ಒತ್ತಡದಲ್ಲಿ ಸಿಲುಕಿದ ನಮಗೆ ಮಕ್ಕಳ ಕಡೆ ಗಮನಹರಿಸಲು ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಪಾಲಕರು ಶಾಲೆಗೆ ಬಂದು ಗಲಾಟೆ ಮಾಡಿದರೂ ನಮ್ಮದಲ್ಲದ ತಪ್ಪಿಗೆ ಬೈಸಿಕೊಳ್ಳುವುದು ರೂಢಿಯಾಗಿದೆ. ಇಂತಹ ಘಟನೆಗಳು ಹೆಚ್ಚಾದಾಗ ಕೆಲಸಕ್ಕೆ ರಾಜೀನಾಮೆ ಕೊಡಬೇಕು ಎನಿಸುತ್ತದೆ. ಆದರೆ ಅನಿವಾರ್ಯವಾಗಿ ಕೆಲಸ ಮಾಡುವ ಸ್ಥಿತಿ ನಿರ್ವಣವಾಗಿದೆ. ಸರ್ಕಾರ ಶಿಕ್ಷಕರ ಮೇಲಿನ ಹೆಚ್ಚುವರಿ ಹೊರೆ ಕಡಿಮೆಗೊಳಿಸಿದರೆ ನಾವು ಸಹ ಗುಣ ಮಟ್ಟದ ಶಿಕ್ಷಣವನ್ನು ನೀಡಬಹುದು.

| ಹೆಸರು ಬೇಡ

ಕಾರ್ಯದೊತ್ತಡದಿಂದ ಗುಣಮಟ್ಟ ಕುಸಿತ

ಸರ್ಕಾರ ಅನೇಕ ಹೊಸ ಯೋಜನೆಗಳನ್ನು ಘೊಷಿಸಿ ಜಾರಿ ಮಾಡುವ ಹೊಣೆಯನ್ನು ಶಿಕ್ಷಕರ ಹೆಗಲಿಗೇರಿಸುತ್ತಿದೆ. ಈ ಒತ್ತಡಕ್ಕೆ ಶಿಕ್ಷಣದ ಗುಣಮಟ್ಟ ಕುಸಿಯುವ ಆತಂಕ ಎದುರಾಗಿದೆ. ಮಕ್ಕಳ ಪ್ರಗತಿಯ ದಾಖಲೀಕರಣ ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದ್ದು, ಕೆಲವೊಮ್ಮೆ ಬೆಳಗ್ಗಿನ ಜಾವ ಶಾಲೆ ಹಾಜರಾಗಿ ಕಾರ್ಯನಿರ್ವಹಿಸಬೇಕಾಗಿದೆ. ಬಿಲ್ ಪಾವತಿಗಳು ಆನ್​ಲೈನ್ ಮೂಲಕ ನಡೆಯುತ್ತಿದ್ದು, ಆರ್​ಎಂಎಸ್, ಅಟಲ್ ಟಿಂಕರಿಂಗ್ ಲ್ಯಾಬ್ ಮೊದಲಾದವುಗಳ ಖರ್ಚುವೆಚ್ಚಗಳ ವಿವರವನ್ನು ಪಿಎಫ್​ಎಂಎಸ್​ನಲ್ಲಿ ದಾಖಲಿಸಬೇಕು. ಇಂಟರ್​ನೆಟ್ ಸಮರ್ಪಕವಾಗಿಲ್ಲದಿದ್ದರೆ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂರುವುದು ಅನಿವಾರ್ಯ. ಹೀಗಾಗಿ ಪಾಠ ಯಾವಾಗ ಮಾಡಬೇಕು? ಜತೆಗೆ ಈಗ ಸರ್ಕಾರ ಮತ್ತು ಇಲಾಖೆಯ ಸುತ್ತೋಲೆಗಳು ವಾಟ್ಸ್​ಆಪ್ ಗ್ರೂಪ್​ಗಳಲ್ಲೇ ಬರುತ್ತಿದ್ದು, ತಕ್ಷಣಕ್ಕೆ ಸ್ಪಂದಿಸುವ ಹೊಣೆಯೂ ನಮ್ಮ ಮೇಲಿದೆ. ಪರೀಕ್ಷೆ ಮೌಲ್ಯಮಾಪನ, ಚುನಾವಣೆ ಕರ್ತವ್ಯ ಹೀಗೆ ಎಲ್ಲವನ್ನೂ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸವಾಲು ಶಿಕ್ಷಕರ ಮೇಲಿದೆ. ಕೆಲಸ ಒತ್ತಡವೇ ಜಾಸ್ತಿಯಾಗಿದ್ದು, ಖಾಸಗಿ ಬದುಕಿಗೆ ಮೀಸಲಿಡುವ ಸಮಯ ಅತ್ಯಲ್ಪವಾಗಿದೆ.

| ನಿರ್ಮಲಾ ಶಿಕ್ಷಕಿ ಉಡುಪಿ

ವರ್ಗಾವಣೆ ಇಲ್ಲದೆ ಹೈರಾಣ

ವರ್ಗಾವಣೆ ಪ್ರಕ್ರಿಯೆ ನಡೆಯದಿರುವುದೇ ಶಿಕ್ಷಕ ವರ್ಗದ ದೊಡ್ಡ ಸಮಸ್ಯೆ. ಕಳೆದ 2017- 18ರಲ್ಲಿ ಶಿಕ್ಷಕರ ವರ್ಗಾವಣೆ ನಡೆಯಲೇ ಇಲ್ಲ. ಆಳುವ ಸರ್ಕಾರಗಳ ನೀತಿಗಳಿಂದ ವರ್ಗಾವಣೆ ನಡೆಯದೇ ಶಿಕ್ಷಕವರ್ಗ ಹೈರಾಣಾಗಿದೆ. ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದರಿಂದ ಕೌಟುಂಬಿಕವಾಗಿ ದೂರ ಇರುವ ಶಿಕ್ಷಕರು ಪರದಾಡುವಂತಾಗಿದೆ. ಮತ್ತೊಂದೆಡೆ ಬಡ್ತಿ ಪ್ರಕ್ರಿಯೆಯೂ ಸರಿಯಾಗಿ ಆಗುತ್ತಿಲ್ಲ. ಸರ್ಕಾರ 1ರಿಂದ 5, 6-8 ಹಾಗೂ 9ರಿಂದ 12ನೇ ತರಗತಿವರೆಗಿನ ಪದ್ಧತಿ ತರಲು ಹೊರಟಿದೆ. ಪದವೀಧರ ಸಹಾಯಕ ಶಿಕ್ಷಕರ(ಎಜಿಟಿ) ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. 7,000 ಎಜಿಟಿ ಹುದ್ದೆಯ ನೇಮಕಾತಿ ಬದಲು ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರಲ್ಲೇ ಸಾವಿರಾರು ಜನ ಪದವೀಧರರಿದ್ದಾರೆ. ಪದವೀಧರ ಸಹಾಯಕ ಶಿಕ್ಷಕರ ನೇಮಕಾತಿ ಬದಲು ಇರುವ ಪದವೀಧರ ಶಿಕ್ಷಕರನ್ನೇ ಪರಿಗಣಿಸಿ ಬಡ್ತಿ ನೀಡಬೇಕು.

| ಶಿವಾನಂದ ನಾಗೂರ ಪ್ರೌಢಶಾಲಾ ಶಿಕ್ಷಕರು, ಧಾರವಾಡ

ಫಲಿತಾಂಶದ ಆಧಾರದ ಮೇಲೆ ಅನುದಾನ ಕಡಿತ ಸರಿಯಲ್ಲ

ಎಸ್​ಎಸ್​ಎಲ್​ಸಿ ಫಲಿತಾಂಶದ ಆಧಾರದ ಮೇಲೆ ಅನುದಾನಿತ ಹೈಸ್ಕೂಲ್ ಶಿಕ್ಷಕರ ನೇಮಕಾತಿ ಅನುಮತಿ ನಿರ್ಧರಿಸುವ ಸರ್ಕಾರದ ಕ್ರಮ ಸರಿಯಿಲ್ಲ. ಎಸ್​ಎಸ್​ಎಲ್​ಸಿ ಜಿಲ್ಲಾ ಫಲಿತಾಂಶಕ್ಕಿಂತ ಅನುದಾನಿತ ಹೈಸ್ಕೂಲ್ ಫಲಿತಾಂಶ ನಿರಂತರ 5 ವರ್ಷ ಕಡಿಮೆ ಇದ್ದಲ್ಲಿ ಹೊಸ ಶಿಕ್ಷಕರ ನೇಮಕಾತಿಗೆ ಸರ್ಕಾರದ ಅನುದಾನ ದೊರೆಯುತ್ತಿಲ್ಲ. ಅನುದಾನಿತ ಸಂಸ್ಥೆಗಳು ಕೆೈಯಿಂದ ಶಿಕ್ಷಕರ ವೇತನ ಪಾವತಿಸಬೇಕಿದೆ. ಶಿಕ್ಷಣ ಸಂಸ್ಥೆಗಳು ಡೊನೇಷನ್ ಪಡೆಯುವಂತಿಲ್ಲ. ಸರ್ಕಾರ ವೇತನಾನುದಾನ ಬಿಟ್ಟು ಮೂಲ ಸೌಕರ್ಯಕ್ಕೆ ಹಣ ನೀಡುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಹೆಚ್ಚಿನ ಕನ್ನಡ ಮಾಧ್ಯಮ ಹೈಸ್ಕೂಲ್​ಗಳು ಮಕ್ಕಳ ಸಂಖ್ಯೆ ಕಡಿಮೆಯಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿವೆ. ಇಂಥ ಸಂದರ್ಭದಲ್ಲಿ ಒಬ್ಬರೇ ಎರಡು, ಮೂರು ವಿಷಯ ಬೋಧಿಸಬೇಕಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಫಲಿತಾಂಶ ಹೆಚ್ಚಿಸಬೇಕು ಎಂಬುದು ಸರ್ಕಾರದ ಗುರಿ ಸರಿಯೇ ಆಗಿದೆ. ಆದರೆ, ಗ್ರಾಮೀಣ ಭಾಗದ ಕೆಲವು ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಕರು ಎಷ್ಟೇ ಪ್ರಯತ್ನಪಟ್ಟರೂ ಫಲಿತಾಂಶ ಕಡಿಮೆಯಾಗುತ್ತಿ್ತೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಸರಾಸರಿ ಫಲಿತಾಂಶ ಕಡಿಮೆಯಾಗುತ್ತದೆ. ಆದರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮುಂತಾದ ಜಿಲ್ಲೆಗಳ ಎಸ್​ಎಸ್​ಎಲ್​ಸಿ ಸರಾಸರಿ ಫಲಿತಾಂಶ ಶೇ. 80ಕ್ಕಿಂತ ಜಾಸ್ತಿ ಇರುತ್ತದೆ. ಇದರಿಂದ ಶಾಲೆಗಳ ಫಲಿತಾಂಶವೂ ಅದಕ್ಕಿಂತ ಕಡಿಮೆಯಾಗುವಂತಿಲ್ಲ ಎಂಬ ಪರಿಸ್ಥಿತಿ ಬಂದಿದೆ.

| ಪ್ರಭಾಕರ ಬಂಟ್ ಶಿಕ್ಷಕರು, ಅಂಕೋಲಾ, (ಉತ್ತರ ಕನ್ನಡ)

ನಮ್ಮ ಸಮಸ್ಯೆ ಕೇಳಿ ಪ್ಲೀಸ್…

ಚುನಾವಣೆ ಕೆಲಸ, ದಾಖಲೆ ನಿರ್ವಹಣೆ, ಪರೀಕ್ಷೆ ಮೌಲ್ಯಮಾಪನ… ಹೀಗೆ ಅನೇಕ ಜವಾಬ್ದಾರಿಗಳನ್ನು ಶಿಕ್ಷಕರ ಮೇಲೆ ಹಾಕಲಾಗುತ್ತಿದೆ. ನಿತ್ಯ ಒಂದಿಲ್ಲೊಂದು ಹೊಸ ಸೂಚನೆಗಳು ಬರುತ್ತಿರುತ್ತವೆ. ಇವುಗಳನ್ನು ನಿಭಾಯಿಸುವುದರಲ್ಲಿ ಸುಸ್ತಾಗುತ್ತದೆ. ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಿಂತ ಅನ್ಯ ಕಾರ್ಯಗಳೇ ಹೆಚ್ಚಾಗಿವೆ. ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ. ಇತ್ತೀಚೆಗೆ ರಾಜಕೀಯ ಬೆರೆತು ಹೋಗಿದ್ದರಿಂದ ಹೊರಗಿನ ಒತ್ತಡಗಳು ಜಾಸ್ತಿಯಾಗಿವೆ. ಇದರಿಂದ ಮಕ್ಕಳಿಗೆ ಸಮರ್ಪಕವಾಗಿ ಶಿಕ್ಷಣ ನೀಡಲು ಆಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ.

| ಹೆಸರು ಹೇಳಲು ಇಚ್ಛಿಸದ ಪ್ರಾಥಮಿಕ ಶಾಲೆ ಶಿಕ್ಷಕಿ ಬಾಗಲಕೋಟೆ

ಮೂರು ತಿಂಗಳ ಸಂಬಳವೆಲ್ಲಿ?

ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಸಿಬ್ಬಂದಿ ವೇತನ ಪಾವತಿಸಬೇಕೆಂಬ ನಿಯಮವಿದ್ದರೂ ಸಕಾಲಕ್ಕೆ ವೇತನ ಪಾವತಿಯಾಗುತ್ತಿಲ್ಲ. ಸರ್ವ ಶಿಕ್ಷಣ ಅಭಿಯಾನ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ರಾಜ್ಯ ಸರ್ಕಾರದ ಸಹಭಾಗಿತ್ವದಡಿ ಈ ಯೋಜನೆ ಅನುಷ್ಠಾನಗೊಂಡಿದೆಯಾದರೂ ವೇತನ ಪಾವತಿ ಜವಾಬ್ದಾರಿ ಸಂಪೂರ್ಣ ರಾಜ್ಯ ಸರ್ಕಾರದ್ದು ಎಂದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ನೂತನ ಸರ್ಕಾರ ಶಿಕ್ಷಕರ ಮೂರು ತಿಂಗಳ ವೇತನ ಬಟವಡೆ ಮಾಡದೆ ತೀವ್ರ ತೊಂದರೆಯಾಗಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಸಂಬಳ ಬರಬೇಕಿದ್ದು, ಅದಕ್ಕಾಗಿ ಸಿಬ್ಬಂದಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

| ಸರ್ವ ಶಿಕ್ಷಣ ಅಭಿಯಾನ ಶಿಕ್ಷಕರು ವಿಜಯಪುರ

ಹೊಸ ಯೋಜನೆ ಅನಿವಾರ್ಯ

ಶಿಕ್ಷಣ ವ್ಯವಸ್ಥೆ ಬದಲಾಗುವ ನಿಟ್ಟಿನಲ್ಲಿ ಹೊಸ ಸರ್ಕಾರಿ ಯೋಜನೆಗಳು ಅನಿವಾರ್ಯ. ಆದರೆ ಅದೇ ಯೋಜನೆಗಳಿಂದ ಶಿಕ್ಷಕರಿಗೆ ಅತಿಯಾದ ಹೊರೆಯಾಗುತ್ತಿದೆ. ಕಲಿಕೆಯಲ್ಲಿ ಗುಣಮಟ್ಟ ತರಲು ಸಾಧ್ಯವಾಗುತ್ತಿಲ್ಲ. ಹೊಸ ಯೋಜನೆಗಳು ಬಂದಂತೆ ಹಳೆಯ ಯೋಜನೆಗಳ ಫಾಲೋಅಪ್ ಮಾಡುವುದು ಕಷ್ಟವಾಗುತ್ತಿದೆ. ಎಲ್ಲೆಡೆ ಶಿಕ್ಷಕರ ಕೊರತೆಯಿಂದ ಯೋಜನೆಗಳ ಅನುಷ್ಠಾನ ಸಮರ್ಪಕವಾಗುತ್ತಿಲ್ಲ. ಪದೇ ಪದೆ ವರ್ಗಾವಣೆ ಕಿರಿಕಿರಿ, ಗ್ರಾಮೀಣ ಭಾಗದಲ್ಲಿ ಬಸ್ ಸಮಸ್ಯೆ, ಹಲವೆಡೆ ಪಾಲಕರ ಪ್ರೋತ್ಸಾಹ ಸಿಗದಿರುವುದು, ಕಂಪ್ಯೂಟರ್ ಕೊರತೆ, ಆಟದ ಮೈದಾನ, ಆಸನಗಳು ಸೇರಿ ಮೂಲಸೌಕರ್ಯಗಳ ಕೊರತೆ ಇದೆ. ಸರ್ಕಾರದಿಂದ ಯೋಜನೆಗಳಿಗೆ ತಕ್ಕಂತೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಚುನಾವಣಾ ಕರ್ತವ್ಯ, ಜನಗಣತಿಗೆ ಶಿಕ್ಷಕರ ಬಳಕೆಯಿಂದ ಸಮಯ ವ್ಯರ್ಥವಾಗುತ್ತದೆ. ಮಕ್ಕಳ ಕಲಿಕೆಯತ್ತ ಗಮನ ಹರಿಸಲು ಸಾಧ್ಯವಾಗದು. ಈ ಎಲ್ಲ ಅಂಶಗಳಿಂದ ಹೊಸ ಪದ್ಧತಿಗಿಂತ ಹಳೆಯ ಶಿಕ್ಷಣ ವ್ಯವಸ್ಥೆಯೇ ಮಕ್ಕಳ ಕಲಿಕೆಗೆ ಸಹಕಾರಿ ಎಂದರೂ ತಪ್ಪಲ್ಲ.

| ಹೆಸರು ಹೇಳಲಿಚ್ಛಿಸದ ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಮೊಗ್ಗ ತಾಲೂಕು

ಸಿಆರ್​ಸಿ, ಬಿಆರ್​ಸಿಗಳೂ ಪಾಠ ಮಾಡಲಿ

ಪ್ರತಿ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಸಿಆರ್​ಸಿ, ಬಿಆರ್​ಸಿಗಳನ್ನು (ಕ್ಲಸ್ಟರ್ ಮತ್ತು ಬ್ಲಾಕ್ ರಿಸೋರ್ಸ್ ಕೋಆರ್ಡಿನೇಟರ್​ಗಳು) ನೇಮಿಸಲಾಗಿದೆ. ಆದರೆ ಇವರಿಂದ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಏನೂ ಉಪಯೋಗವಾಗುತ್ತಿಲ್ಲ. ಇವರು ಒಂದರ್ಥದಲ್ಲಿ ಕಚೇರಿ ಹಾಗೂ ಶಾಲೆ ನಡುವೆ ಫೈಲ್ ಹಿಡಿದು ಸುತ್ತಾಡುವ ಪೋಸ್ಟ್ ಮನ್ ಆಗಿದ್ದಾರೆ. ರಾಜ್ಯಾದ್ಯಂತ ಈ ಹುದ್ದೆ ರದ್ದುಗೊಳಿಸಿ ಇವರನ್ನು ಬೋಧನೆಗೆ ಹಚ್ಚಬೇಕು. ಶಿಕ್ಷಕರಿಗೆ ಆಗಾಗ ವೇತನ ಹೆಚ್ಚಾಗುತ್ತಿದೆ. ಆದರೆ ಶಾಲೆಗಳಿಗೆ ಸರ್ಕಾರ ಕೊಡುವ ಅನುದಾನ ನಗಣ್ಯ. ಒಬ್ಬ ವಿದ್ಯಾರ್ಥಿಗೆ ವರ್ಷಕ್ಕೆ 1000 ರೂ. ಲೆಕ್ಕದಲ್ಲಿ ಪ್ರತಿ ಶಾಲೆಗೆ ಅನುದಾನ ಕೊಟ್ಟರೆ ಆಟೋಪಕರಣ, ಪೀಠೋಪಕರಣ ಸೇರಿ ಅಗತ್ಯ ಸೌಕರ್ಯ ಕಲ್ಪಿಸಬಹುದು. ಶೇ.60ಕ್ಕೂ ಹೆಚ್ಚು ಶಾಲೆಗಳಿಗೆ ಕಾಂಪೌಂಡ್ ಇಲ್ಲ. ಬಹುತೇಕ ಶಾಲೆಗಳಲ್ಲಿ ಜವಾನ (ಪೀವನ್) ಇಲ್ಲ. ಸರ್ಕಾರ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘಗಳು ಯಾವತ್ತೂ ಸರ್ಕಾರಿ ಶಾಲೆ ಸ್ಥಿತಿ ಸುಧಾರಿಸುವ, ಗುಣಮಟ್ಟದ ಶಿಕ್ಷಣ ಕಲ್ಪಿಸುವತ್ತ ಚಿತ್ತ ಹರಿಸುತ್ತಿಲ್ಲ. ಬದಲಾಗಿ ತಮಗೆ ಬೇಕಾದಂತೆ ಕೆಲಸ ಕಾರ್ಯ ಮಾಡಿಕೊಳ್ಳುತ್ತಿದ್ದರಿಂದ ಜನತೆ ಸರ್ಕಾರಿ ಶಾಲೆ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವೆ ಕಂದಕ ಹೆಚ್ಚಾಗಲು ಈ ಮೂರು ವರ್ಗಗಳೇ ಕಾರಣ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶೀಘ್ರ ಸಮಾನ ಶಿಕ್ಷಣ ನೀತಿ ರೂಪಿಸುವ ಅಗತ್ಯವಿದೆ.

| ಎಂ.ಎಸ್. ಮನೋಹರ ಸಹಶಿಕ್ಷಕ, ಜ್ಯಾಂತಿ (ಬೀದರ್ ಜಿಲ್ಲೆ)

ಬಿಸಿಯೂಟಕ್ಕೆ ಪ್ರತ್ಯೇಕ ಇಲಾಖೆ ಅಗತ್ಯ

ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲು ಕೊಡುವುದು ಸ್ವಾಗತಾರ್ಹ. ಆದರೆ ಇದರ ನಿರ್ವಹಣೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸುವ ಮೂಲಕ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತ. ಶಿಕ್ಷಕರ ಮೇಲಿರುವ ಬಿಸಿಯೂಟದ ಹೊಣೆಗಾರಿಕೆಯಿಂದಾಗಿ ಪಾಠ ಬೋಧನೆ ಮೇಲೆ ಪರಿಣಾಮವಾಗುತ್ತಿದೆ. ಒಬ್ಬ ಶಿಕ್ಷಕ ಅದಕ್ಕಾಗಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಸೇರಿ ಮಕ್ಕಳಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳ ನಿರ್ವಹಣೆಗಾಗಿ ಪ್ರತ್ಯೇಕ ಇಲಾಖೆ ಸ್ಥಾಪಿಸುವುದು ಅಗತ್ಯ.

| ರಾಮಣ್ಣ ಕುಲಕರ್ಣಿ ಮುಖ್ಯಶಿಕ್ಷಕ, ಸ.ಹಿ.ಪ್ರಾ. ಶಾಲೆ ಕೋಳಕೂರ ತಾ.ಜೇವರ್ಗಿ ಜಿ. ಕಲಬುರಗಿ

ಅನಗತ್ಯ ಕಾರ್ಯಕ್ರಮಗಳನ್ನು ಕೈಬಿಡಿ

ಪ್ರಾಥಮಿಕ ಶಾಲೆಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ, ಅನಗತ್ಯ ಕಾರ್ಯಕ್ರಮಗಳನ್ನು ಪಟ್ಟಿಯಿಂದ ಕೈಬಿಡಬೇಕು. ಆಗ ಮಾತ್ರ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಕಾಣಲು ಸಾಧ್ಯ. ಬಿಸಿಯೂಟ ಸೇರಿ ಇತರೆ ಕಾರ್ಯಕ್ರಮಗಳಿಂದ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರ ಮೇಲೆ ಒತ್ತಡ ಹೆಚ್ಚಿದೆ. ಇದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಶಿಕ್ಷಕರು ಶಾಲೆಯಲ್ಲಿ ಬೋಧನೆ ಮಾಡá-ವುದರ ಬದಲು ಬಿಇಒ ಹಾಗೂ ಸಿಆರ್​ಸಿ, ಬಿಆರ್​ಸಿ ಹೆಸರಲ್ಲಿ ಶಿಕ್ಷಣಾಧಿಕಾರಿ ಕಚೇರಿ ಇತರೆಡೆ ಅಲೆಯá-ತ್ತ ಕಾಲಹರಣ ಮಾಡá-ತ್ತಾರೆ. ಬೋಧಕೇತರ ಕರ್ತವ್ಯದ ಹೊರೆಯನ್ನು ನಿರ್ವಹಿಸá-ವ ಅನಿವಾರ್ಯತೆ ಕೆಲ ಶಿಕ್ಷಕರದು. ಇದರ ಪರಿಣಾಮ ಇತರೆ ಶಿಕ್ಷಕರ ಮೇಲೆ ಬೋಧನೆಯ ಹೊರೆ ಬೀಳá-ತ್ತಿದೆ. ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳಬೇಕು.

| ಹೆಸರು ಹೇಳಲಿಚ್ಛಿಸದ ಶಿಕ್ಷಕ ಜಗಳೂರು

ಅವೈಜ್ಞಾನಿಕ ಚಟುವಟಿಕೆಗಳು

ಶಿಕ್ಷಕರ ಗುಣಾತ್ಮಕ ಸಮಯವನ್ನು ಕೊಲ್ಲುತ್ತಿರುವ ವಿವಿಧ ಚಟುವಟಿಕೆಗಳಲ್ಲಿ ಕಳೆದ ವರ್ಷದಿಂದ ಜಾರಿಯಾಗಿರುವ ‘ಓದು ಕರ್ನಾಟಕ’ ಎನ್ನುವುದೂ ಒಂದು. ಇದು ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಮಾತ್ರ ಅನ್ವಯವಾಗಿದ್ದರೆ ಸಾಕಿತ್ತು. ಆದರೆ, ಇದರಡಿ ಎಲ್ಲ ಮಕ್ಕಳಿಗೂ ಓದುವ, ಬರೆಯುವ ಚಟುವಟಿಕೆಗಳನ್ನು ಮಾಡಿಸಬೇಕು. ಪ್ರತಿದಿನ ಬೆಳಗ್ಗೆ ಮಧ್ಯಾಹ್ನ ನಮಗೆ ಇದೇ ಕೆಲಸ. ಇನ್ನೊಂದು ಅನಗತ್ಯ ಪದ್ಧತಿ ಎಂದರೆ ಸಿಸಿಇ. (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ). ಕ್ಲಾಸಿನಲ್ಲಿ ಯಾವ ಮಗು ಓದಿನಲ್ಲಿ ಹಿಂದುಳಿದಿದೆ ಎನ್ನುವುದು ಶಿಕ್ಷಕರಾದ ನಮಗೆ ತಿಳಿಯುತ್ತದೆ. ಆದರೆ, ಅದಕ್ಕಾಗಿ ಪರೀಕ್ಷೆ ಮಾಡಿ, ಅದನ್ನು ದಾಖಲೀಕರಿಸುವ ಕ್ರಮ ತೀರ ಅವೈಜ್ಞಾನಿಕ. ಈಗ ಕೇವಲ ದಾಖಲೆ ಮಾಡೋದಷ್ಟೇ ಮುಖ್ಯ. ಮಕ್ಕಳು ಹೇಗೆ ಕಲಿಯುತ್ತಿದ್ದಾರೆಂದು ಸರ್ಕಾರಕ್ಕೆ ಬೇಕಾಗಿಲ್ಲ.

| ಹೆಸರು ಹೇಳಲಿಚ್ಛಿಸದ ಶಿಕ್ಷಕರು ಬಳ್ಳಾರಿ

ಒಂದು ದಿನದ ವಿಶೇಷ ಅಧಿವೇಶನ ಕರೆದು ಚರ್ಚಿಸಲಿ

ಪ್ರೀತಿಯಿಂದ ಅಪ್ಪಿಕೊಂಡ ಶಿಕ್ಷಕ ವೃತ್ತಿ ನಿಜಕ್ಕೂ ನನ್ನನ್ನು ಹೈರಾಣಾಗಿಸಿದೆ. ಇಪ್ಪತ್ತು ವರ್ಷಗಳಿಂದ ದಣಿವರಿಯದೆ ದುಡಿದರೂ ಬಡ್ತಿ ಮರೀಚಿಕೆಯಾಗಿಯೇ ಉಳಿದಿದೆ. ಗುಮಾಸ್ತನಾಗಿ ಕೆಲಸಕ್ಕೆ ಸೇರಿದ ಗೆಳೆಯ ಅಧಿಕಾರಿಯಾಗಿ ಬಡ್ತಿ ಹೊಂದಿದ್ದಾನೆ. ಸಿಕ್ಕಾಗಲೆಲ್ಲ ‘ನಿನಗಿನ್ನೂ ಪ್ರಮೋಷನ್ ಸಿಕ್ಕಿಲ್ಲವೆ?’ ಎಂದು ಕೇಳಿದಾಗ ನಾಚಿಕೆಯಾಗುತ್ತದೆ, ತೀವ್ರ ವೇದನೆಯಾಗುತ್ತದೆ. ಸಮಸ್ಯೆಗಳ ಉದ್ದನೆಯ ಪಟ್ಟಿ ನೀಡಬಹುದು. ಆದರೆ ಅದರಿಂದ ಪ್ರಯೋಜನವಿಲ್ಲವೆಂದು ನನಗೆ ಮನವರಿಕೆಯಾಗಿದೆ. ನಿಜಕ್ಕೂ ಸರ್ಕಾರಕ್ಕೆ ಶಿಕ್ಷಕರ ಬಗ್ಗೆ ಕಾಳಜಿ ಇದ್ದಲ್ಲಿ ಒಂದು ದಿನದ ವಿಶೇಷ ಅಧಿವೇಶನ ಕರೆದು ಸುದೀರ್ಘವಾಗಿ ರ್ಚಚಿಸಿ ಸೂಕ್ತ ನಿರ್ಧಾರ ಕೈಗೊಂಡು ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಲಿ.

| ಪುಟ್ಟದಾಸು ಮಂಡ್ಯ