ಮೌಲ್ಯಮಾಪನ-ಚುನಾವಣೆ ನಡುವೆ ಶಿಕ್ಷಕರು ಕಂಗಾಲು

>

– ಭರತ್ ಶೆಟ್ಟಿಗಾರ್ ಮಂಗಳೂರು
ಈ ಬಾರಿಯ ಶೈಕ್ಷಣಿಕ ವರ್ಷದ ಅಂತ್ಯದ ಅವಧಿ ಪ್ರೌಢಶಾಲಾ ಶಿಕ್ಷಕರು ನೆಮ್ಮದಿಗೆ ಭಂಗ ತಂದಿದೆ ಎಂದರೆ ತಪ್ಪಾಗಲ್ಲ. ಒಂದೆಡೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಇನ್ನೊಂಡೆಡೆ ಚುನಾವಣಾ ಕರ್ತವ್ಯ, ಇದರ ನಡುವೆ ಇತರ ಕೆಲಸಗಳು. ಒಟ್ಟಿನಲ್ಲಿ ಶಿಕ್ಷಕರ ಒದ್ದಾಟ ಖಚಿತ.
ಪ್ರಸ್ತುತ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಏ.4ರಂದು ಕೊನೆಗೊಳ್ಳಲಿದೆ. ಬಳಿಕ ಏ.10-15ರವರೆಗೆ ಮೌಲ್ಯಮಾಪನಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಇದರ ಜತೆಯಲ್ಲಿ ಚುನಾವಣಾ ತರಬೇತಿ ಕಾರ್ಯಕ್ರಮಕ್ಕೂ ಶಿಕ್ಷಕರು ಹಾಜರಾಗಬೇಕಿದ್ದು, ಏ.17 ಮತ್ತು 18ರಂದು ಚುನಾವಣಾ ಕರ್ತವ್ಯ. ಖಾಸಗಿ ಶಾಲೆ ಸೇರಿದಂತೆ ಸರ್ಕಾರಿ ಶಾಲೆಗಳ ಹೆಚ್ಚಿನ ಶಿಕ್ಷಕರು ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವು ಕಡ್ಡಾಯವಾಗಿದ್ದು ಇದು ಶಿಕ್ಷಕರ ನಿದ್ದೆಗೆಡಿಸಿದೆ.
ಏ.10ರಂದು ಶೈಕ್ಷಣಿಕ ವರ್ಷದ ಅಂತ್ಯವಾದರೂ, ಏ.14ರಂದು ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಸಬೇಕಾಗಿದ್ದು, ಅದರಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಏಪ್ರಿಲ್ ತಿಂಗಳಲ್ಲೇ ಹೊರಬರುವುದರಿಂದ ಮೌಲ್ಯಮಾಪನವನ್ನೂ ಬೇಗ ಮುಗಿಸಲು ಇಲಾಖೆ ಸೂಚಿಸಿದೆ. ಇದರಿಂದಾಗಿ ಚುನಾವಣಾ ಕರ್ತವ್ಯ ಮುಗಿದ ಬಳಿಕ ಫಲಿತಾಂಶ ವಿಚಾರದಲ್ಲಿ ಸಿದ್ಧರಾಗಬೇಕು, ಬಳಿಕ ವಿದ್ಯಾರ್ಥಿಗಳ ವರ್ಗಾವಣೆ, ಹೊಸ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಚುನಾವಣಾ ಕರ್ತವ್ಯದಲ್ಲಿರುವ ಮುಖ್ಯಶಿಕ್ಷಕರಿಗಂತೂ ಇದು ದೊಡ್ಡ ಹೊರೆಯಾಗಲಿದೆ.

ಕ್ರಿಶ್ಚಿಯನ್ ಶಿಕ್ಷಕರಿಂದ ಮನವಿ:ಕ್ರಿಶ್ಚಿಯನ್ನರಿಗೆ ಏ.18 ಶುಭ ಶುಕ್ರವಾರದ ಮುನ್ನಾದಿನದ ಪವಿತ್ರ ಗುರುವಾರ (ಮೊಂಡಿ ಥರ್ಸ್‌ಡೇ) ಆಚರಣೆ ಇರುವುದರಿಂದ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ. ಆದರೆ ಚುನಾವಣಾ ಆಯೋಗ ಈ ಕುರಿತು ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಚುನಾವಣಾ ಕರ್ತವ್ಯ ಮಾಡುತ್ತಿರುವ ಹೆಚ್ಚಿನ ಶಿಕ್ಷಕರು ಅನುಭವಿಗಳು. ಜತೆಗೆ ಮೌಲ್ಯಮಾಪನವೂ ದೊಡ್ಡ ಹೊರೆಯಲ್ಲ. ಇದು ಚುನಾವಣಾ ಆಯೋಗದ ಆದೇಶವಾಗಿರುವುದರಿಂದ ಪಾಲಿಸಲೇಬೇಕು. ಒಂದಿಬ್ಬರಿಗೆ ರಿಯಾಯಿತಿ ಸಿಗಬಹುದು ಅಷ್ಟೇ.
ವೈ.ಶಿವರಾಮಯ್ಯ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ, ದ.ಕ.

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ- ಚುನಾವಣೆ ಎರಡೂ ಒಟ್ಟಿಗೆ ಬಂದಿರುವುದು ನಮ್ಮ ನಿದ್ದೆಗೆಡಿಸಿದೆ. ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶವೇ ಇಲ್ಲ. ಒಂದು ಕೆಲಸ ಮುಗಿಯುತ್ತಲೇ ಇನ್ನೊಂದು ಕೆಲಸಕ್ಕೆ ಸಿದ್ಧರಾಗಬೇಕು. ಸರ್ಕಾರಿ ಕೆಲಸ ಆಗಿರುವುದರಿಂದ ಮಾಡಲೇಬೇಕು.
ಹೆಸರು ಹೇಳಲು ಇಚ್ಛಿಸದ ಪ್ರೌಢಶಾಲಾ ಶಿಕ್ಷಕ