ಮಂಡ್ಯ: ಶಿಕ್ಷಣ ಎಲ್ಲರಿಗೂ ದೊರೆಯುವಂತಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಹಿತ್ಯ ಲಯನ್ಸ್ ಸಂಸ್ಥೆ, ಮಂಡ್ಯ ಲಯನ್ಸ್ ಸಂಸ್ಥೆ, ಒಡನಾಡಿ ಲಯನ್ಸ್ ಸಂಸ್ಥೆ, ಬೆಳಕು ಲಯನ್ಸ್ ಸಂಸ್ಥೆ, ಮಂಡ್ಯ ಅಕ್ಷಯ ಲಯನ್ಸ್ ಸಂಸ್ಥೆ ಹಾಗೂ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆಯಲ್ಲಿ ಮಾತನಾಡಿದರು.
ಅನಕ್ಷರಸ್ಥರನ್ನು ಅಕ್ಷರಸ್ಥರಾಗಿ ಮಾಡುವುದು ಮುಖ್ಯವಾಗಬೇಕು. ಮಕ್ಕಳ ಶಿಕ್ಷಣ ಮೂಲಕ ಉನ್ನತ ಗುರಿಯನ್ನು ಮುಟ್ಟಬೇಕು. ಶಿಕ್ಷಣದ ಉದ್ದೇಶವನ್ನು ಮರೆತು ನಾವು ಸರ್ಕಾರದ ಕೆಲಸವನ್ನೇ ಉದ್ಯೋಗಕ್ಕಾಗಿ ಪಡೆಯುವ ಶಿಕ್ಷಣಕ್ಕೆ ಜೋತು ಬಿದ್ದಿದ್ದೇವೆ. ಇದರಲ್ಲಿ ಅಭಿವೃದ್ಧಿ ಎಂಬುದು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನ್ ಮಾತನಾಡಿ, ಸನಾತನ ಧರ್ಮವನ್ನು ಹೊಂದಿರುವ ದೇಶವೆಂದರೆ ಅದು ಭಾರತ. ಪ್ರತಿ ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಶಿಕ್ಷಕರು ಗುಣಮಟ್ಟದ ಬೋಧನೆ ಮಾಡುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.
ಲಯನ್ಸ್‌ನ ಕೆ.ಎಲ್.ರಾಜಶೇಖರ್, ಚಿಕ್ಕಸ್ವಾಮಿ, ಡಾ.ಕೃಷ್ಣೇಗೌಡ ಹುಸ್ಕೂರು, ವಿ.ಹರ್ಷ, ಟಿ.ನಾರಾಯಣಸ್ವಾಮಿ, ಚಂದ್ರಶೇಖರ್, ಎಲ್.ಕೃಷ್ಣ, ಪುಟ್ಟಸ್ವಾಮಿ, ಎಂ.ಸಿ.ಭಾಸ್ಕರ್, ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ಶ್ರೀನಿವಾಸ್, ಶೈಕ್ಷಣಿಕ ಪಾಲುದಾರ ಎಂ.ಆರ್.ಮಂಜು, ಚೇತನ್ ಕೃಷ್ಣ ಇತರರಿದ್ದರು. ಇದೇ ವೇಳೆ ಶಿಕ್ಷಕರು ಹಾಗೂ ಇಂಜಿನಿಯರ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.