More

    ಕಲೂತಿ ನಗರ ಶಾಲೆಯಲ್ಲಿ ತಗ್ಗು-ಗುಂಡಿಗಳ ದರ್ಬಾರ್

    ತೇರದಾಳ: ಹತ್ತು ವರ್ಷವಾದರೂ ಸ್ಥಳೀಯ ಕಲೂತಿ ನಗರದಲ್ಲಿರುವ ಸರ್ಕಾರಿ ಎಲ್‌ಪಿಎಸ್ ಶಾಲೆ ಆವರಣ ಸಮತಟ್ಟ ಮಾಡದ ಕಾರಣ ಮಂಗಳವಾರ ಅಕ್ಕನ ಜತೆಗೆ ಶಾಲೆಗೆ ಹೋಗಿದ್ದ ಬಾಲಕನೊಬ್ಬ ಆವರಣದಲ್ಲಿ ಬಿದ್ದು ತಲೆಗೆ ಗಾಯವಾಗಿದೆ.

    ಕಲೂತಿ ನಗರದ ಎಲ್‌ಪಿಎಸ್ ಶಾಲೆಯಲ್ಲಿ 50 ಮಕ್ಕಳಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಆನಂದ ಭಜಂತ್ರಿ ಅವರ ಮಗಳು ಸಂಗೀತಾ ಭಜಂತ್ರಿ 3ನೇ ತರಗತಿ ಓದುತ್ತಾಳೆ. ಅವಳ ಜತೆ ಸಹೋದರ ಉದಯಚಂದ್ರ ಶಾಲೆಯಲ್ಲಿ ನೋಂದಣಿ ಇರದಿದ್ದರೂ ಪ್ರತಿದಿನ ಶಾಲೆಗೆ ಹೋಗುತ್ತಾನೆ. ಒಂದನೇ ತರಗತಿಯಲ್ಲಿ ಕುಳಿತು ಬರುತ್ತಾನೆ. ಎಂದಿನಂತೆ ಮಂಗಳವಾರವೂ ತನ್ನ ಅಕ್ಕನೊಂದಿಗೆ ಶಾಲೆಗೆ ಹೋಗಿದ್ದ ಉದಯಚಂದ್ರ ಮಧ್ಯಾಹ್ನ ಆಟವಾಡುವ ವೇಳೆ ಆವರಣದ ತಗ್ಗಿನಲ್ಲಿ ಬಿದ್ದಿದ್ದಾನೆ. ಇದರಿಂದ ತಲೆಗೆ ಗಾಯವಾಗಿ ರಕ್ತ ಬಂದಿದೆ. ಕೂಡಲೇ ಬಾಲಕನ ಪಾಲಕರು ಹಾಗೂ ಶಾಲೆ ಶಿಕ್ಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

    ಪ್ರತಿದಿನ ಒಂದಲ್ಲ ಒಂದು ಮಗು ಬೀಳುತ್ತದೆ. ಪಾಲಕರು ತೀವ್ರ ಆತಂಕಕ್ಕೆ ಒಳಗಾಗಿ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸಿದ ಉದಾಹರಣೆಗಳು ಸಾಕಷ್ಟಿವೆ. ಶಾಲೆ ಆವರಣ ಸಮತಟ್ಟು ಮಾಡುವಂತೆ ಹಲವಾರು ಬಾರಿ ಹೇಳಿದ್ದರೂ ಸಂಬಂಧಿತ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಲೂತಿ ನಗರದ ಶಾಲೆ ಆವರಣ ತಗ್ಗು ದಿನ್ನೆ ಸಮಸ್ಯೆ ಕುರಿತು ಇಲಾಖೆಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳಿಗೆ ಆಟವಾಡಲು ಜಾಗವೇ ಇಲ್ಲದಂತಾಗಿದೆ. ತಗ್ಗು-ಗುಂಡಿಗಳಲ್ಲಿಯೇ ಆಡಲು ಹೋಗಿ ಬೀಳುತ್ತಾರೆ. ಮೂಲಸೌಲಭ್ಯ ಇಲ್ಲದ ಕಾರಣ ಕಲೂತಿ ನಗರದ ಹಲವು ಮಕ್ಕಳು ಬೇರೆ ಶಾಲೆಗೆ ಹೋಗುತ್ತಾರೆ.
    – ಆನಂದ ಭಜಂತ್ರಿ ಎಸ್‌ಡಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts