ಹೆಚ್ಚುವರಿ ಶಿಕ್ಷಕರ ನೇಮಕ ವಿರೋಧಿಸಿ ಅತ್ತಿಗೆರೆ ಸರ್ಕಾರಿ ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

ಬಣಕಲ್: ಬೇರೆ ಶಾಲೆಯಲ್ಲಿ ಅಮಾನತುಗೊಂಡ ಶಿಕ್ಷಕಿಯನ್ನು ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಶಾಲಾ ಸಮಿತಿ, ಪಾಲಕರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಾಜರಾತಿಗೆ ತಕ್ಕಂತೆ ಆರ್​ಟಿಇ ಪ್ರಕಾರ ಎಲ್​ಪಿಎಸ್ ವಿಭಾಗದಲ್ಲಿ 51 ವಿದ್ಯಾರ್ಥಿಗಳಿಗೆ 2 ಶಿಕ್ಷಕರು ಹಾಗೂ ಎಚ್​ಪಿಎಸ್ ವಿಭಾಗದಲ್ಲಿ 47 ಮಕ್ಕಳಿಗೆ ಇಬ್ಬರು ಸಮರ್ಪಕ ಶಿಕ್ಷಕರಿದ್ದರೂ ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಅಮಾನತುಗೊಂಡ ಶಿಕ್ಷಕಿಯನ್ನು ಈ ಶಾಲೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಶಾಲೆಯಲ್ಲಿ ಸಮರ್ಪಕ ಶಿಕ್ಷಕರಿರುವಾಗ ಹೆಚ್ಚುವರಿ ಶಿಕ್ಷಕರ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕರ ಸಂಘದ ಕಾರ್ಯದರ್ಶಿ ಮಂಜಪ್ಪ ಹಾಗೂ ಅಧ್ಯಕ್ಷ ಪುಟ್ಟರಾಜು ಸ್ಥಳಕ್ಕಾಗಮಿಸಿ ಪಾಲಕರು ಹಾಗೂ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಶಾಲಾ ಸಮಿತಿ, ಪಾಲಕರು ಪಟ್ಟು ಸಡಿಲಿಸದೆ ಅಮಾನತುಗೊಂಡ ಶಿಕ್ಷಕರನ್ನು ಈ ಶಾಲೆಗೆ ನೇಮಿಸಬಾರದು ಎಂದು ಪುಟ್ಟರಾಜು ಹಾಗೂ ಮಂಜಪ್ಪಗೆ ಮನವಿ ಸಲ್ಲಿಸಿದರು.

ಅತ್ತಿಗೆರೆ ಸರ್ಕಾರಿ ಶಾಲೆ ಶಿಕ್ಷಕರಿಂದ ಅಭಿವೃದ್ಧಿಯಗುತ್ತಿದೆ. ಅನವಶ್ಯಕವಾಗಿ ಅಮಾನತುಗೊಂಡ ಶಿಕ್ಷಕರ ನೇಮಕಾತಿಯಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರಭಾವ ಬೀರಲಿದ್ದು, ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಶಾಲಾ ಸಮಿತಿ, ಪಾಲಕರ ತೀವ್ರ ವಿರೋಧದಿಂದ ವರ್ಗಾವಣೆಯಾಗಿ ಬಂದ ಶಿಕ್ಷಕಿ ಶಾಲೆಗೆ ಪ್ರವೇಶ ಪಡೆಯದೆ ವಾಪಸ್ ತೆರಳಿದರು.