ಪಾಂಡವಪುರ: ಮನೆ ವಾತಾವರಣದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಶಾಲೆಯಲ್ಲಿ ಉತ್ತಮ ಶಿಕ್ಷಣ ಕಲಿತು ಉನ್ನತ ವ್ಯಕ್ತಿಗಳಾಗುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.
ತಾಲೂಕಿನ ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಠದ ಡಿಎಂಎಸ್ ಶಾಲೆಯಲ್ಲಿ ಆಯೋಜಿಸಿದ್ದ ಶಾರದಾ ಪೂಜೆ ಹಾಗೂ ಲಿಂಗೈಕ್ಯ ಮರಿದೇವರು ಸ್ವಾಮೀಜಿಯ ಗುರುಪಾದಕಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಬದಲಾಗಿ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಅಂತಹ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳು ಸಮಾಜವನ್ನು ಮಾದರಿಯಾಗಿ ತೆಗೆದುಕೊಂಡು ಬದುಕಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ ಪಾಲಕರನ್ನೇ ಮಾದರಿಯಾಗಿ ಸ್ವೀಕರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಓದಿ ಅಂಕ ಗಳಿಸುವುದಕ್ಕಿಂತ ಸಮಾಜದಲ್ಲಿ ನಡೆ-ನುಡಿಯ ಮೂಲಕ ಅಂಕಗಳಿಸುವುದು ಮುಖ್ಯ ಎಂದು ಹೇಳಿದರು.
ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿ ಮೊಬೈಲ್ ಸಂಸ್ಕೃತಿ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಹೀಗಾಗಿ, ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾವಿ ಬಟ್ಟೆ ಧರಿಸಿದವರೆಲ್ಲ ಸ್ವಾಮೀಜಿಗಳಾಗುವುದಿಲ್ಲ. ಸ್ವಾಮೀಜಿ ಆದವರಿಗೆ ಸಮಾಜದ ಬಗ್ಗೆ ಕಾಳಜಿ, ಕಳಕಳಿ ಇರಬೇಕು, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಿ ಜನರಿಗೆ ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು. ಡಾ ಶ್ರೀ ತ್ರಿನೇತ್ರ ಮಹಾಂತ ಸ್ವಾಮೀಜಿ ಇಂತಹ ಸಮಾಜ ನಿರ್ಮಿಸುವ ಜತೆಗೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಹೊಟ್ಟೆಕಿಚ್ಚು ಬೆಳೆಸುವುದಕ್ಕಿಂತ, ದೇಶಭಕ್ತಿ, ಸಾಧನೆಯ ಕಿಚ್ಚು ಬೆಳೆಸಬೇಕು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಬೆಳೆಯಲು ಪಾಲಕರು ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ನಿವೃತ ಉಪನಿರ್ದೇಶಕ ಎಂ.ಡಿ.ಶಿವಕುಮಾರ್, ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆನಂದ್, ಬಿಇಒ ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ, ಸದಸ್ಯರಾದ ಚಂದ್ರಶೇಖರ್, ಶಾಂತಮ್ಮ, ಮಂಗಳಮ್ಮ, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ಶಿಕ್ಷಕರಾದ ಎಂ.ರಮೇಶ್, ಮಹೇಶ್, ಪರಶಿವಮೂರ್ತಿ ಇತರರು ಇದ್ದರು.
