ಶಿವಮೊಗ್ಗ: ಸಮಾಜಕ್ಕೆ ಸುಶಿಕ್ಷಿತರ ಜತೆಗೆ ಸುಸಂಸ್ಕೃತ ಯುವಸಮೂಹ ಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ಕಸ್ತೂರಬಾ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಸಂಸ್ಕೃತಿ, ಸಂಸ್ಕಾರಗಳಿಂದ ಭಾರತ ಬಲಿಷ್ಠವಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವಸಮೂಹದ ಮೇಲಿದೆ. ಸ್ಪರ್ಧೆಯಲ್ಲಿ ಸೋಲು-ಗೆಲುವನ್ನು ಸಹಜವಾಗಿ ಎದುರಿಸಬೇಕು ಎಂದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಕ್ಕಳಿಗೆ ಇಂತಹ ವೇದಿಕೆಗಳು ಶಾಲಾ ಹಂತದಲ್ಲಿ ದೊರಕಬೇಕು. ಇದರಿಂದ ಪಠ್ಯದ ಜತೆಗೆ ಸೃಜನಶೀಲತೆ ಎಂಬುದು ಆಕಾರ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಪ್ರಾಚಾರ್ಯ ಎಸ್.ಆರ್.ವೆಂಕಟೇಶ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ಪಂಡರಿನಾಥ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗೀಶ್ ಇತರರಿದ್ದರು.