ನಿಗದಿತ ಅವಧಿಯೊಳಗೆ ಟಿಸಿ ಕೊಡುತ್ತಿಲ್ಲ

ಚಾಮರಾಜನಗರ: ನಿಗದಿತ ಅವಧಿಯಲ್ಲಿ ಟ್ರಾನ್ಸ್‌ಫಾರ್ಮರ್ ಕೊಡುತ್ತಿಲ್ಲ, ಅಳವಡಿಸಿದ ಟಿಸಿ ಕಡಿಮೆ ಅವಧಿಯಲ್ಲೇ ಕೆಟ್ಟು ಹೋಗುತ್ತದೆ, ಟಿಸಿ ಕೊಡಲು ಲಂಚ ಕೇಳುತ್ತಾರೆ, ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುತ್ತಿಲ್ಲ, ವಿದ್ಯುತ್ ಬಿಲ್ ಮನ್ನಾ ಮಾಡಿ ಹೊಸ ಮೀಟರ್ ಅಳವಡಿಸಿ… ಇದು ನಗರದ ಸೆಸ್ಕ್ ಉಪವಿಭಾಗದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸೆಸ್ಕ್ ಜನ ಸಂಪರ್ಕ ಸಭೆಯಲ್ಲಿ ರೈತರು, ಸಾರ್ವಜನಿಕರಿಂದ ಕೇಳಿ ಬಂದ ದೂರುಗಳು.. ಮರಿಯಾಲ ಗ್ರಾಮದ ಲಿಂಗಪ್ಪ ಮಾತನಾಡಿ, ನಮ್ಮ ಗ್ರಾಮದಲ್ಲಿ ಮಳೆ ಬಿದ್ದರೆ 2 ದಿನವಾದರೂ ಕರೆಂಟ್ ಇರಲ್ಲ. ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಇದನ್ನು ಸರಿಪಡಿಸಲು ಮುಂದಾಗಿಲ್ಲ. ಟಿಸಿ ಕೆಟ್ಟಿದ್ದು ಬಾಳೆ ಫಸಲು ಒಣಗುತ್ತಿದೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲಕೃಷ್ಣ, ಈ ಕುರಿತು ಪರಿಶೀಲಿಸಿ ಮುಂದಿನ 15 ದಿನದೊಳಗೆ ಟಿಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತ ಮುಖಂಡ ದೇಮಹಳ್ಳಿ ಪ್ರಸಾದ್ ಮಾತನಾಡಿ, ಅಳವಡಿಸಿದ ಟ್ರಾನ್ಸ್‌ಫಾರ್ಮರ್ 15 ದಿನದ ಮೇಲೆ ಬಾಳಿಕೆ ಬರುತ್ತಿಲ್ಲ. ಒಂದು ಟಿಸಿಗೆ 35-40 ಸಾವಿರ ಹಣ ತಗೋತಾರೆ. ಲೈನ್‌ಮನ್‌ಗಳು ಗ್ರಾಮಗಳಿಗೆ ಬರುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ವ್ಯವಸ್ಥಾಪಕ ನಿರ್ದೇಶಕ ಉತ್ತರಿಸಿ, ಹವಾಮಾನ ವೈಪರೀತ್ಯದಿಂದ ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ. ಮುಂದಿನ 10 ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ತಾಪಂ ಸದಸ್ಯ ದಯಾನಿಧಿ ಮಾತನಾಡಿ, ತಾಲೂಕಿನ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಲಾಗಿದೆ. ಆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಯಾವುದೇ ಮನ್ನಾ ಮಾಡಿಲ್ಲ. 2006ರಲ್ಲಿ ಕರ ನಿರಾಕರಣೆ ಚಳವಳಿ ಪ್ರಾರಂಭವಾಗಿದ್ದೆ ಪುಟ್ಟನಪುರದಲ್ಲಿ. ಆದರೂ ಈ ಗ್ರಾಮದಲ್ಲಿ ವಿದ್ಯುತ್ ಬಿಲ್ ಮನ್ನಾ ಮಾಡಿಲ್ಲ. ಮಾಡಿದರೆ ಎಲ್ಲ ಗ್ರಾಮಗಳಿಗೂ ಮಾಡಿ ಎಂದು ತಿಳಿಸಿದರು.
ಸೆಸ್ಕ್ ಇಲಾಖೆಯಿಂದ ವಿದ್ಯುತ್ ಬಿಲ್ ಮನ್ನಾ ಮಾಡಲು ಸಾಧ್ಯವಿಲ್ಲ. ಬಾಕಿ ಇರುವ ಬಿಲ್ ಅನ್ನು ತಡೆ ಹಿಡಿಯಲಾಗಿದೆ. ಅದು ಖಾತೆಯಲ್ಲಿಯೇ ಇರುತ್ತದೆ. ಆ ನಂತರ ಹಣವನ್ನು ಕಟ್ಟಬೇಕಾಗುತ್ತದೆ ಎಂದು ಡಾ.ಗೋಪಾಲಕೃಷ್ಣ ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕರ ನಿರಾಕರಣ ಚಳವಳಿ ಹಿನ್ನೆಲೆ ಜಿಲ್ಲೆಯ 105 ಗ್ರಾಮಗಳ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಬೇಕು. ಇಲ್ಲದಿದ್ದರೆ ಇಡೀ ಜಿಲ್ಲೆಯಲ್ಲಿ ಕರ ನಿರಾಕರಣೆ ಚಳವಳಿ ಘೋಷಣೆ ಮಾಡಬೇಕಾಗುತ್ತದೆ. 72 ಗಂಟೆಯೊಳಗೆ ಟಿಸಿ ಕೊಡಬೇಕು. ಆದರೆ ಒಂದು ವಾರವಾದರೂ ಕೊಡುತ್ತಿಲ್ಲ. ಈ ಸಂಬಂಧ ಎಷ್ಟು ಜೆಇಗಳ ಮೇಲೆ ಪ್ರಕರಣ ದಾಖಲಿಸಿದ್ದೀರಾ ಎಂದು ಪ್ರಶ್ನಿಸಿದರು.
ಮಲೆಮಹದೇಶ್ವರಬೆಟ್ಟ ಸುತ್ತಮುತ್ತಲಿನ ಪೋಡುಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಹೋಗಿರುವ ಕಬ್ಬಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಟಿಸಿ ಕೊಡಲು ಲಂಚ ಪಡೆಯಲಾಗುತ್ತದೆ. ತೋಟದ ಮನೆಗಳಿಗೂ ನಿರಂತರವಾಗಿ ಕರೆಂಟ್ ಕೊಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಡಾ.ಗೋಪಾಲಕೃಷ್ಣ ಉತ್ತರಿಸಿ, 5 ಜಿಲ್ಲೆಗಳಲ್ಲಿ 60 ಸಾವಿರ ತೋಟದ ಮನೆಗಳಿವೆ. ಸರ್ವೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಲ್ಲಿಂದ ನಿರ್ದೇಶನ ಬಂದ ನಂತರ ಕ್ರಮವಹಿಸಲಾಗುವುದು ಎಂದರು.

ಆರಂಭಕ್ಕೆ ಚಿಂತನೆ: ವೈಫಲ್ಯವಾಗಿರುವ ಟ್ರಾನ್ಸ್ ಫಾರ್ಮರ್‌ಗಳನ್ನು ರಿಪೇರಿ ಮಾಡಿ ಇಡಲು ಒತ್ತು ಕೊಡಲಾಗಿದ್ದು, ಇದಕ್ಕಾಗಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ರಿಪೇರಿ ಕೇಂದ್ರಗಳನ್ನು ಆರಂಭಿಸಲು ಚಿಂತಿಸಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲಕೃಷ್ಣ ತಿಳಿಸಿದರು. ಸೆಸ್ಕ್ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ರಿಪೇರಿ ಕೇಂದ್ರಗಳಲ್ಲಿ 30-40 ಟಿಸಿಗಳನ್ನು ರಿಪೇರಿ ಮಾಡಲಾಗುವುದು. ಜಿಲ್ಲೆಯಲ್ಲಿ 85 ಟಿಸಿಗಳು ಕೆಟ್ಟಿರುವ ಬಗ್ಗೆ ಮಾಹಿತಿ ಇದೆ. ಜಿಲ್ಲೆಯಲ್ಲಿ 11 ಸಾವಿರ ಟಿಸಿಗಳಿದ್ದು ಬಫರ್ ಸ್ಟಾಕ್ ನಿರ್ವಹಣೆಗೆ ನಿರ್ದೇಶನ ನೀಡಲಾಗಿದೆ ಎಂದರು. ಕರ ನಿರಾಕರಣೆ ಚಳವಳಿಯ ಹಿನ್ನೆಲೆಯಲ್ಲಿ 20 ಕೋಟಿ ರೂ. ಅನ್ನು ತಡೆಹಿಡಿಯಲಾಗಿದೆ. ಈ ಚಳವಳಿಯ ಕುರಿತು 2006ರಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಸೆಸ್ಕ್‌ಗೆ 1200 ಕೋಟಿ ರೂ. ಸಾಲ ಇದೆ. ಪ್ರತಿ ತಿಂಗಳು 50-60 ಕೋಟಿ ರೂ.ಗಳ ಸಾಲ ತೀರಿಸಬೇಕಿದೆ. ಅರಣ್ಯದಲ್ಲಿರುವ ಗ್ರಾಮಗಳ ಪ್ರತಿ ಮನೆಗಳಿಗೆ 50 ಸಾವಿರ ರೂ. ಖರ್ಚು ಮಾಡಿ ಸೋಲಾರ್ ವ್ಯವಸ್ಥೆ ಮಾಡಿಕೊಡಲಾಗಿದೆ. ಇದನ್ನು 5 ವರ್ಷಗಳವರೆಗೆ ನಿರ್ವಹಣೆ ಮಾಡಲಾಗುತ್ತದೆ ಎಂದು ಹೇಳಿದರು.
ಸೆಸ್ಕ್‌ನ ಮುಖ್ಯ ಇಂಜಿನಿಯರ್ ಎಂ.ಟಿ.ಮಂಜುನಾಥ್, ಸೂಪರಿಡೆಂಟ್ ಇಂಜಿನಿಯರ್ ಮಹದೇವ ಪ್ರಸನ್ನ, ಎಕ್ಸಿಕ್ಯೂಟಿವ್ ಇಂಜಿನಿಯರ್ ಪೂರ್ಣಚಂದ್ರ, ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ್, ಲೆಕ್ಕ ನಿಯಂತ್ರಣಾಧಿಕಾರಿ ಶೇಖ್ ಮಹಮ್ಮದ್ ಮಹಿಮುಲ್ಲಾ, ರೈತ ಮುಖಂಡರಾದ ಮಹೇಶ್ ಪ್ರಭು, ಮಾಡ್ರಳ್ಳಿ ಮಹದೇವಪ್ಪ, ಜಯಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *