ಕ್ಷಯ ರೋಗ ಮುಕ್ತ ಭಾರತಕ್ಕೆ ಪಣ

ಬೀದರ್: ಕ್ಷಯ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಸಿಇಒ ಮಹಾತೇಂಶ ಬೀಳಗಿ ಮಾತನಾಡಿ, ಕ್ಷಯ ರೋಗ ಪೀಡಿತರನ್ನು ತಾರತಮ್ಯದಿಂದ ಕಾಣದೇ ಅವರಲ್ಲಿರುವ ರೋಗ ಗುಣಪಡಿಸಲು ಪ್ರಯತ್ನಿಸಬೇಕು. ರೋಗ ದೂರವಾಗಬೇಕೆ ಹೊರತು ರೋಗಿಯಲ್ಲ ಎಂದು ಹೇಳಿದರು.
ಕ್ಷಯ ರೋಗ ನಿರ್ಮೂಲನೆಗೆ ಸರ್ಕಾರವು ಸಾಕಷ್ಟು ಕಾರ್ಯಕ್ರಮ ಜಾರಿಗೆ ತಂದಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ದೇಶವನ್ನು ಕ್ಷಯ ಮುಕ್ತವಾಗಿಸಲು ಸಹಕರಿಸಬೇಕು ಎಂದು ಹೇಳಿದರು.
ರ್ಯಾಲಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಿಂದ ಹೊರಟು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ಕಚೇರಿಗೆ ಬಂದು ಮುಕ್ತಾಯಗೊಂಡಿತು. ರ್ಯಾಲಿಯುದ್ದಕ್ಕೂ ಕ್ಷಯ ರೋಗ ಪತ್ತೆ ಮತ್ತು ಉಚಿತ ಚಿಕಿತ್ಸೆ, ಕ್ಷಯ ರೋಗ ಮುಕ್ತ ಭಾರತ ಎನ್ನುವ ನಾನಾ ಜಾಗೃತಿ ಸಂದೇಶಗಳು ಗಮನ ಸೆಳೆದವು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ದೀಪಾ ಕೊಂಡಾ, ಆರೋಗ್ಯ ಇಲಾಖೆಯ ವ್ಶೆದ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.