ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್ ಶನಿವಾರ ತಡರಾತ್ರಿ ತುಂಡಾಗಿದ್ದು ಭಾರಿ ಪ್ರಮಾಣದ ನೀರು ನದಿಗೆ ಹರಿದು ಪೋಲಾಗುತ್ತಿದೆ. ಇದರಿಂದ ಹಂಪಿ ಸೇರಿದಂತೆ ನದಿಪತ್ರದ ಜನರಿಗೆ ಆತಂಕದ ಮನೆಮಾಡಿದೆ.
ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕುಸಿದ ಪರಿಣಾಮ ಶುಕ್ರವಾರ ಅಣೆಕಟ್ಟೆಯ ಗರಿಷ್ಠ ಮಟ್ಟಕ್ಕೆ ನೀರು ನಿಲ್ಲಿಸಲಾಗಿತ್ತು. 9 ಗೇಟ್‌ಗಳ ಮೂಲಕ 28 ಸಾವಿರ ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿತ್ತು. ಆದರೆ, 19ನೇ ಕ್ರಸ್ಟ್‌ಗೇಟ್‌ನ ಚೈನ್ ತುಂಡಾಗಿದ್ದರಿಂದ ನದಿಗೆ 35ರಿಂದ 48 ಸಾವಿರ ಕ್ಯೂಸೆಕ್ ವರೆಗೆ ನೀರು ನದಿಗೆ ಹರಿದು ಹೋಗುತ್ತದೆ. ಜಲಾಶಯ ತುಂಬಿರುವುದರಿಂದ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದೆ. ಜಲಾಶಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ದುರಂತ ಸಂಭವಿಸಿದ್ದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಇದರಿಂದಾಗಿ ನದಿಪಾತ್ರದ ಹಂಪಿ ಸೇರಿದಂತೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. 5 ಲಕ್ಷದ ವರೆಗೆ ನದಿಗೆ ನೀರು ಹರಿದು ಬರುತ್ತಿದೆ. ಊರುಗಳು ಕೊಚ್ಚಿ ಹೋಗುತ್ತವೆ ಎಂದು ಜನರು ಮನೆಯಿಂದ ಹೊರಗೆ ಬಂದಿದ್ದಾರೆ.
ಜಲಾಶಯಕ್ಕೆ ಸದ್ಯ ಒಳಹರಿವು ಕಡಿಮೆಯಾಗಿದೆ. 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಿಂದ ಪ್ರತಿದಿನ ಇದೇ ಪ್ರಮಾಣದಲ್ಲಿ ನೀರು ಹರಿದು ಹೋದರೆ, 40 ಟಿಎಂಸಿಗೆ ಕುಸಿಯಬಹುದು.