ಟಿಬಿ ಡ್ಯಾಂಗೆ ಕೃಷ್ಣಾ ನದಿ ಜೋಡಿಸಿ – ಸಿಎಂ ಬಿಎಸ್‌ವೈಗೆ ಶಾಸಕ ಸೋಮಶೇಖರರೆಡ್ಡಿ ಮನವಿ

ವರದಿ ಪಡೆದು ಮುಂದಿನ ಬಜೆಟ್ ಅನುದಾನ ಘೋಷಣೆ ಭರವಸೆ

ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆಗೆ ಕೃಷ್ಣಾ ನದಿ ಜೋಡಿಸಬೇಕೆಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದರು.

ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸಿಎಂರನ್ನು ಸೋಮಶೇಖರರೆಡ್ಡಿ ಭೇಟಿ ಮಾಡಿ ಚರ್ಚಿಸಿದರು. ತುಂಗಭದ್ರಾ ಅಣೆಕಟ್ಟೆಗೆ ಕೃಷ್ಣಾ ನದಿ ಜೋಡಣೆಯಿಂದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಮತ್ತು ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿವರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಅಣೆಕಟ್ಟೆಗೆ ಕೃಷ್ಣಾ ನದಿ ಜೋಡಣೆ ಬಗ್ಗೆ ವಿಸ್ತೃತ ಯೋಜನಾ ವರದಿ ಪಡೆದು ಮುಂದಿನ ಬಜೆಟ್‌ನಲ್ಲಿ ಅನುದಾನ ಘೋಷಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಆದರೆ, ತುಂಗಭದ್ರಾ ಅಣೆಕಟ್ಟೆಯಲ್ಲಿ ಕೇವಲ 33 ಟಿಎಂಸಿ ನೀರಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ಕಷ್ಟದಲ್ಲಿದ್ದಾರೆ. ಆಂಧ್ರಪ್ರದೇಶ ಆಲಮಟ್ಟಿಯಿಂದ ಬುಕ್ಕಪಟ್ಟಣಂ ಬಳಿ ಪೆನ್ನಾರ್ ನದಿಗೆ ನೀರು ಪಡೆಯಲು ಯೋಜನೆ ರೂಪಿಸಿದೆ. ಈ ಯೋಜನೆ ತುಂಗಭದ್ರಾ ಅಣೆಕಟ್ಟೆಯ ಕೆಳಭಾಗದ ಮೂಲಕ ಹಾದು ಹೋಗುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಉಪಯೋಗವಿಲ್ಲ ಎಂದರು.

ಕೊಪ್ಪಳ ಜಿಲ್ಲೆಯ ಹಿರೇಹಳ್ಳ ಮೂಲಕ ತುಂಗಭದ್ರಾ ಅಣೆಕಟ್ಟೆಗೆ ನೀರು ಪಡೆಯುವ ಬಗ್ಗೆ ಯೋಜನೆ ರೂಪಿಸಬೇಕಿದೆ. ಕೃಷ್ಣಾ ನದಿಯಿಂದ ಕರ್ನಾಟಕ 800 ಟಿಎಂಸಿ ನೀರು ಬಳಸಬಹುದಾಗಿದೆ. ಆದರೆ, ಪ್ರಸ್ತುತ ಕೇವಲ 125 ಟಿಎಂಸಿ ನೀರು ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಿಂದ ತುಂಗಭದ್ರಾ ಅಣೆಕಟ್ಟೆಗೆ ನೀರು ಪಡೆಯಲು ಯಾವುದೇ ಸಮಸ್ಯೆಯಿಲ್ಲ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.