ಆರೋಗ್ಯ ಇಲಾಖೆಯಿಂದ ಕ್ಷಯ ಜಾಗೃತಿ

ಗಂಗಾವತಿ: ವಿಶ್ವ ಕ್ಷಯ ರೋಗ ದಿನಾಚರಣೆ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟಿಬಿ ವಿಭಾಗದಿಂದ ಮಂಗಳವಾರ ಜಾಗೃತಿ ಜಾಥಾ ನಡೆಯಿತು. ನಗರದ ಉಪವಿಭಾಗ ಆಸ್ಪತ್ರೆಯಿಂದ ಸಂಚರಿಸಿದ ಜಾಥಾದಲ್ಲಿ ಕ್ಷಯ ರೋಗ ಹರಡುವಿಕೆ ಮತ್ತು ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಯಿತು. ಕ್ಷಯ ರೋಗ ಕಾಡುವ ಭೂತದ ರೂಪಕ ಗಮನ ಸೆಳೆಯಿತು. ಈ ವೇಳೆ ಜಾಗೃತಿ ಗೀತೆ ಮೂಲಕ ಜನರಿಗೆ ತಿಳಿವಳಿಕೆ ನೀಡಲಾಯಿತು.
ನೇತೃತ್ವ ವಹಿಸಿದ್ದ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಈಶ್ವರ ಸವಡಿ ಮಾತನಾಡಿ, ನಿರಂತರ ಚಿಕಿತ್ಸೆ ಮೂಲಕ ಕ್ಷಯ ರೋಗ ನಿಯಂತ್ರಿಸಬಹುದು. ಸರ್ಕಾರದಿಂದ ಸಹಾಯಧನ ದೊರೆಯಲಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗ ಬಾಧಿತರು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಡ್ಡಾಯ ಮತದಾನದ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಎಂ.ನದಾಫ್ ಮಾತನಾಡಿದರು. ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ, ನಗರಸಭೆ ಪೌರಾಯುಕ್ತ ಡಾ.ಡಿ.ಟಿ.ದೊಡ್ಮನಿ, ತಾಪಂ ಇಒ ಡಾ.ಮೋಹನ್, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್, ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ, ಶಿವಾನಂದ ನಾಯ್ಕರ್, ತಾಲೂಕು ವೈದ್ಯಾಧಿಕಾರಿ ಡಾ. ಶರಣಪ್ಪ ಚಕೋಟಿ, ಡಾ.ಲಿಂಗರಾಜ, ಡಾ.ಜಂಬಯ್ಯ, ಆಶಾ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು ಸೇರಿ ಇತರರು ಇದ್ದರು.