ಕಲಾದಗಿ: ಸಮೀಪದ ಖಜ್ಜಿಡೋಣಿಯ ಶ್ರೀ ತಾಯಮ್ಮದೇವಿಯ ಉಡಿತುಂಬುವ ಕಾರ್ಯಕ್ರಮ ಹಾಗೂ 9ನೇ ವರ್ಷದ ಜಾತ್ರಾ ಮಹೋತ್ಸವವು ಮೇ 12 ರಿಂದ 18ರ ವರೆಗೆ ನಡೆಯಲಿದೆ. ಈ ನಿಮಿತ್ತ ಗ್ರಾಮದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೇ 12 ರಂದು ಸಂಜೆ ಮಳಿಯಪ್ಪಯ್ಯ ಪೂಜೆಯೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಮೇ 13 ರಂದು ಮುಂಜಾನೆ ಬಿಸನಾಳ, ಯಡಹಳ್ಳಿಯ ಹಾಗೂ ಶಾರದಾಳ ಡೊಳ್ಳು ಕಲಾವಿದರಿಂದ ಡೊಳ್ಳಿನವಾಲಗ, ಸಂಜೆ 6 ಗಂಟೆಗೆ ತಾಯಮ್ಮದೇವಿ ಉಡಿತುಂಬುವುದು ಹಾಗೂ ಡೊಳ್ಳಿನ ಪದಗಳ ಗಾಯನ ನಡೆಯಲಿದೆ.
ಮೇ 14 ರಂದು ಬೆಳಗ್ಗೆ ಹೋಮ ಹಾಗೂ ಸಂಜೆ 5 ಗಂಟೆಗೆ ರಥೋತ್ಸವ ಜರುಗಲಿದೆ. ನಂತರ ಅರಕೇರಿ ಹಾಗೂ ಕೆ.ಡಿ. ಬುದ್ನಿ ಕಲಾವಿದರಿಂದ ಡೊಳ್ಳಿನವಾಲಗ ನಡೆಯಲಿದ್ದು, ರಾತ್ರಿ 10 ಗಂಟೆಗೆ ‘ಹೆಣ್ಣಿಗೆ ಶೀಲ ಸಿಂಗಾರ ಗಂಡಿಗೆ ಬುದ್ಧಿ ಬಂಗಾರ’ ನಾಟಕ ಪ್ರದರ್ಶನಗೊಳ್ಳಲಿದೆ.
ಮೇ 15 ರಂದು ಬೆಳಗ್ಗೆ 9 ಗಂಟೆಗೆ ಹಾಲಹಲ್ಲಿ ಕರ ಮತ್ತು ಒಂದು ಕುದುರೆ 3 ಕಿಮೀ ಸ್ಪರ್ಧೆ, 10 ಗಂಟೆಗೆ ಜೋಡು ಕುದುರೆ 5 ಕಿಮೀ ಸ್ಪರ್ಧೆ ಹಾಗೂ 10.30 ಕ್ಕೆ ರಂಗೋಲಿ ಸ್ಪರ್ಧೆ,12 ಗಂಟೆಗೆ ಜಿದ್ದಾಜಿದ್ದಿನ ಟಗರಿನ ಕಾಳಗ ಜರುಗುವುದು.
ಮೇ 16 ರಂದು ಮಧ್ಯಾಹ್ನ 12ಕ್ಕೆ ಜೋಡೆತ್ತಿನ ಸುತಬಂಡಿ ಸ್ಪರ್ಧೆ, ರಾತ್ರಿ 10 ಗಂಟೆಗೆ ಹುನುಗುಂದದ ಸೈನಿಕ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಮೇ 17 ರಂದು ಬೆಳಗ್ಗೆ 8ಗಂಟೆಗೆ 5 ಕಿಮೀ ಒಂದು ಎತ್ತು ಒಂದು ಕುದುರೆ ಓಟ, 9 ಗಂಟೆಗೆ ಜೋಡೆತ್ತಿನ ಕೂಡಬಂಡಿ 5 ಕಿಮೀ ಸ್ಪರ್ಧೆ ಆಯೋಜಿಸಲಾಗಿದೆ. ಮೇ 18 ರಂದು ಬೆಳಗ್ಗೆ 10 ಗಂಟೆಗೆ ಕಳಸ ಇಳಿಯುವ ಕಾರ್ಯಕ್ರಮ ನಡೆಯುವುದರೊಂದಿಗೆ ಜಾತ್ರೋತ್ಸವ ಸಂಪನ್ನವಾಗಲಿದೆ.