ಒಂದೇ ಲೈಸೆನ್ಸ್, ಚಾಲಕರಿಗೆ ಟೆನ್ಶನ್!

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ರಾಜ್ಯದ ಟ್ಯಾಕ್ಸಿ, ಆಟೋ ಚಾಲಕರ ಸ್ಥಿತಿ. ಈ ಎರಡೂ ವಾಹನ ಓಡಿಸಲು ಪ್ರತ್ಯೇಕ ಲೈಸೆನ್ಸ್ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸೂಚಿ ಸಿದ್ದರೂ ಅದನ್ನು ಪಾಲಿಸಲು ರಾಜ್ಯ ಸಾರಿಗೆ ಇಲಾಖೆ ತಯಾರಿಲ್ಲ. ಈ ಬಗ್ಗೆ ಓದುಗರೊಬ್ಬರು ಕಳುಹಿಸಿದ ಪತ್ರ ಮಾಹಿತಿ ಮುಂದಿಟ್ಟುಕೊಂಡು ಈ ವಿಶೇಷ ವರದಿ ಸಿದ್ಧಪಡಿಸಲಾಗಿದೆ.

|ಅಭಿಲಾಷ್ ಪಿಲಿಕೂಡ್ಲು 

ಲಘು ಮೋಟಾರು ವಾಹನ ಚಾಲನಾ ಪರವಾನಗಿ ಇದ್ದವರು ಟ್ಯಾಕ್ಸಿ, ಆಟೋ, ಇ ರಿಕ್ಷಾ ಓಡಿಸಲು ಪ್ರತ್ಯೇಕ ಲೈಸೆನ್ಸ್ ಪಡೆಯಬೇಕಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದ್ದರೂ ಸಾರಿಗೆ ಇಲಾಖೆಯ ಮೀನಮೇಷದಿಂದಾಗಿ ಈ ನಿಯಮವಿನ್ನೂ ರಾಜ್ಯದಲ್ಲಿ ಜಾರಿಯಾಗಿಲ್ಲ. ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಆದೇಶ ನೀಡಿ 2 ತಿಂಗಳು ಕಳೆದಿದ್ದರೂ ಅದನ್ನು ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆಗೆ ಸಾಧ್ಯವಾಗಿಲ್ಲ. ಇದರಿಂದ ಚಾಲಕರು ವಿನಾಕಾರಣ ಕಷ್ಟ ಅನುಭವಿಸುವಂತಾಗಿದೆ. 2011ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮುಕುಂದ್ ದೇವ್​ಗನ್ ಮತ್ತು ಓರಿಯೆಂಟಲ್ ವಿಮಾ ಕಂಪನಿ ಪ್ರಕರಣದ ಆದೇಶ 2017ರ ಜುಲೈನಲ್ಲಿ ಹೊರಬಂದಿತ್ತು. ‘ಮಧ್ಯಮ ಮತ್ತು ಭಾರಿ ಗಾತ್ರದ ಸರಕು ಹಾಗೂ ಪ್ಯಾಸೆಂಜರ್ ವಾಹನಗಳಿಗಷ್ಟೇ ಟ್ರಾನ್ಸ್​ಪೋರ್ಟ್ ಲೈಸೆನ್ಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು.

ಉಳಿದ ಯಾವುದೇ ವಾಹನಗಳಿಗೂ (ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡರೂ)ಟ್ರಾನ್ಸ್​ಪೋರ್ಟ್ ಲೈಸೆನ್ಸ್ ಅಗತ್ಯವಿಲ್ಲ. ಗೇರ್ ಇರುವ ಮತ್ತು ರಹಿತ ಮೋಟಾರು ಸೈಕಲ್, 7,500 ಕೆ.ಜಿ.ಗಿಂತ ಕಡಿಮೆ ಇರುವ ಲಘು ಮೋಟಾರು ವಾಹನ (ಸರಕು ಮತ್ತು ಪ್ಯಾಸೆಂಜರ್), ಇ-ರಿಕ್ಷಾ, ಇ-ಕಾರ್ಟ್ ವಾಹನ ಓಡಿಸಲು ಕೇವಲ ಎಲ್​ಎಂವಿ ಲೈಸೆನ್ಸ್ ಸಾಕು’ ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು.

ಜಾರಿಯಾಗದ ಆದೇಶ

ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ಎಲ್ಲ ರಾಜ್ಯದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ 2018ರಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ರವಾನಿಸಿತ್ತು. ಮಧ್ಯಮ, ಭಾರಿ ಗೂಡ್ಸ್, ಪ್ಯಾಸೆಂಜರ್ ವಾಹನ ಚಾಲನೆಗಷ್ಟೇ ಟ್ರಾನ್ಸ್​ಪೋರ್ಟ್ ಲೈಸೆನ್ಸ್ ಇರಬೇಕು ಎಂದು ತಿಳಿಸಿತ್ತು. ಅಚ್ಚರಿಯೆಂದರೆ ಆ ಆದೇಶ ಈವರೆಗೆ ಸಾರಿಗೆ ಆಯುಕ್ತರ ಕಚೇರಿಯನ್ನು ತಲುಪಿಲ್ಲ.

ನಗರದಲ್ಲಿ ಮಹಿಳಾ ಚಾಲಕರಿಗೆ ಬೇಡಿಕೆಯಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ಯುವತಿಯರು ಚಾಲನಾ ಕ್ಷೇತ್ರಕ್ಕೆ ಧುಮುಕಲು ಸಿದ್ಧರಾಗಿದ್ದಾರೆ. ಸುಪ್ರೀಂ ಆದೇಶ ಅನುಷ್ಠಾನದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ.

|ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ಬೆಂಗಳೂರು ನಗರ ಪ್ರವಾಸಿ ವಾಹನ ಮಾಲೀಕರ ಸಂಘ.

ಉದ್ಯೋಗ ಸೃಷ್ಟಿಗೆ ಕುತ್ತು

ಪ್ರಸ್ತುತ ಸರಕು ಮತ್ತು ಪ್ಯಾಸೆಂಜರ್ ಟ್ಯಾಕ್ಸಿ ಓಡಿಸಲು ಚಾಲಕರು ಎಲ್​ಎಂವಿ ಲೈಸೆನ್ಸ್ ಪಡೆದು 1 ವರ್ಷ ಕಾಯಬೇಕು. ಬಳಿಕ ಎಲ್​ಎಂವಿ ಕ್ಯಾಬ್ ಲೈಸೆನ್ಸ್​ಗೆ ಅರ್ಜಿ ಸಲ್ಲಿಸಬೇಕು. ಕಲಿಕಾ ಚಾಲನಾ ಪರವಾನಗಿ ಪಡೆದು ನಂತರ ಮತ್ತೊಮ್ಮೆ ಚಾಲನಾ ಪರೀಕ್ಷೆ ಎದುರಿಸಿದರಷ್ಟೇ ಸಾರಿಗೆ ವಾಹನ ಓಡಿಸಲು ‘ಎಂ-ಕ್ಯಾಬ್ ಬ್ಯಾಡ್ಜ್’ ನೀಡಲಾಗುತ್ತಿದೆ. ಹೊಸ ಆದೇಶ ಅನುಷ್ಠಾನಕ್ಕೆ ಬಂದಲ್ಲಿ ಎಲ್​ಎಂವಿ ಲೈಸೆನ್ಸ್ ಹೊಂದಿರುವ ವ್ಯಕ್ತಿಯೂ ಟ್ರಾನ್ಸ್​ಪೋರ್ಟ್ ವಾಹನ ಚಲಾಯಿಸಲು ಅರ್ಹನಾಗಲಿದ್ದಾನೆ. ಆದೇಶ ಅನುಷ್ಠಾನ ವಿಳಂಬದಿಂದಾಗಿ ಸೃಷ್ಟಿಯಾಗಬೇಕಿದ್ದ ಉದ್ಯೋಗಕ್ಕೂ ಕುತ್ತಾಗಿದೆ.