ಪಡುಬಿದ್ರಿ: ಒಂದು ವರ್ಷದ ಅವಧಿಗೆ ಗತ ವರ್ಷದ ತೆರಿಗೆಯನ್ನೇ ಮುಂದುವರಿಸುವಂತೆ ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಕಾಪು ಪುರಸಭೆ ಸದಸ್ಯರು 23 ತಿಂಗಳ ಬಳಿಕ ನೂತನ ಅಧ್ಯಕ್ಷ ಅನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು.
ಸಭೆ ಆರಂಭದಲ್ಲಿಯೇ ಕರೊನಾ ಸಂಕಷ್ಟದ ಸಂದರ್ಭ ಆಡಳಿತಾಧಿಕಾರಿ ಅವಧಿಯಲ್ಲಿ ತೆರಿಗೆ ಪರಿಷ್ಕರಿಸಿರುವ ಬಗ್ಗೆ ಕಾಂಗ್ರೆಸ್ ಸದಸ್ಯ ಶಾಬು ಸಾಹೇಬ್ ಪ್ರಸ್ತಾಪಿಸುತ್ತಿದ್ದಂತೆ ಕೆ.ಎಚ್. ಉಸ್ಮಾನ್, ಅಬ್ದುಲ್ ಹಮೀದ್, ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಸರ್ಕಾರದ ಕಾಯ್ದೆ ಪ್ರಕಾರ 3 ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಿಸುವುದು ಅನಿವಾರ್ಯ. ಇದು ಕಾಪು ಪುರಸಭೆಗೆ ಮಾತ್ರ ಸೀಮಿತವಲ್ಲ. ತೆರಿಗೆ ಪರಿಷ್ಕರಿಸದಿದ್ದಲ್ಲಿ ಪುರಸಭೆಗೆ ಬರುವ ಅನುದಾನ ಕಡಿತವಾಗಲಿದೆ ಎಂದು ಸ್ಪಷ್ಟನೆ ನೀಡಿದರೂ ಸದಸ್ಯರು ಒಪ್ಪಲಿಲ್ಲ. ಕೊನೆಗೆ ಸರ್ವ ಸದಸ್ಯರು ಒಂದು ವರ್ಷದ ಅವಧಿಗೆ ಹಿಂದಿನ ವರ್ಷದ ತೆರಿಗೆ ಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ತೀರ್ಮಾನಕ್ಕೆ ಬಂದರು.
ರಾಜ್ಯದ ಇತರ ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷತೆ ಮೀಸಲು ಪ್ರಶ್ನಿಸಿ 3 ಬಾರಿ ನ್ಯಾಯಾಲಯ ಮೆಟ್ಟಿಲೇರಿದ ಪರಿಣಾಮ ಕಾಪು ಪುರಸಭೆ ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ತೊಡಕಾಗಿ ಸದಸ್ಯರು 23 ತಿಂಗಳು ಅಧಿಕಾರದಿಂದ ವಂಚಿತರಾಗಿದ್ದು, ಅ ಅವಧಿಯನ್ನು ಸರಿದೂಗಿಸುವಂತೆ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಬಿಜೆಪಿ ಸದಸ್ಯ ಅರುಣ್ ಶೆಟ್ಟಿ ಪಾದೂರು ಸೂಚಿಸಿದರು. ಅದಕ್ಕೆಲ್ಲ ಸದಸ್ಯರು ಒಪ್ಪಿದರಾದರೂ, ಶಾಸಕ ಲಾಲಾಜಿ ಆರ್. ಮೆಂಡನ್ ಈ ಬಗ್ಗೆ ಸದಸ್ಯರೆಲ್ಲ ಅನೌಪಚಾರಿಕ ಸಭೆ ನಡೆಸಿ ಕಾನೂನು ತಜ್ಞರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು.
ವಾಗ್ವಾದಕ್ಕೆ ಕಾರಣವಾದ ಸ್ಥಾಯಿ ಸಮಿತಿ ರಚನೆ
ಕಾಪು ಪುರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಬಳಿಕದ ಪ್ರಥಮ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ವಿಪಕ್ಷ ಸದಸ್ಯರು ಎರಡೆರಡು ಬಾರಿ ಸಭಾತ್ಯಾಗಕ್ಕೆ ಯತ್ನಿಸಿದರು. 11 ಮಂದಿ ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿ ರಚನೆಗೆ ಹಿಂದಿನ ಅವಧಿಯಂತೆ ಆಡಳಿತ ಪಕ್ಷದಿಂದ 7 ವಿಪಕ್ಷದಿಂದ 4 ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ಆದರೆ ವಿಪಕ್ಷ ಕಾಂಗ್ರೆಸ್ 5 ಸದಸ್ಯರಿಗಾಗಿ ಪಟ್ಟು ಹಿಡಿದ ಪರಿಣಾಮ ಎರಡೂ ಕಡೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯಿಂದ ಕಿರಣ್ ಆಳ್ವ, ಶಾಂಭವಿ ಕುಲಾಲ್, ಮಮತಾ ಸಾಲ್ಯಾನ್, ಸುಧಾ ರಮೇಶ್, ರಮಾ ಶೆಟ್ಟಿ, ಮೋಹಿನಿ ಶೆಟ್ಟಿ, ಗುಲಾಬಿ ಪಾಲನ್ ಮತ್ತು ಕಾಂಗ್ರೆಸ್‌ನಿಂದ ಕೆ.ಎಚ್.. ಉಸ್ಮಾನ್, ಅಬ್ದುಲ್ ಹಮೀದ್, ಸುಲೋಚನಾ ಬಂಗೇರ, ಶಾಂತಲತಾ ಶೆಟ್ಟಿ, ಸೌಮ್ಯ ಹೆಸರನ್ನು ಸೂಚಿಸಲಾಯಿತು. ಆದರೆ ಎರಡೂ ಪಕ್ಷಗಳಲ್ಲಿ ಒಮ್ಮತ ಮೂಡದೆ ಬಿಜೆಪಿ ಸದಸ್ಯರು ಚುನಾವಣೆಗೆ ಪಟ್ಟು ಹಿಡಿದರು. ಮುಖ್ಯಾಧಿಕಾರಿ ಚುನಾವಣೆ ನಡೆಸುತ್ತಿದ್ದಂತೆ ಸಭಾತ್ಯಾಗ ಮಾಡಲು ಹೊರಟಿದ್ದ ವೇಳೆ ಅವರದೆ ಪಕ್ಷದ ಹಿರಿಯ ಸದಸ್ಯೆ ಸುಲೋಚನಾ ಬಂಗೇರ ತಮ್ಮ ಹೆಸರು ಕೈಬಿಡುವಂತೆ ಸೂಚಿಸಿ, ಪರಿಸ್ಥಿತಿ ತಿಳಿಗೊಳಿಸಿ ಸಭೆ ಮುಂದುವರಿಯಲು ಅವಕಾಶ ಮಾಡಿದರು. ಕೊನೆಗೆ ಬಿಜೆಪಿಯ 7 ಮಂದಿ ಮತ್ತು ಕಾಂಗ್ರೆಸ್ 4 ಮಂದಿ ಸದಸ್ಯರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಲಾಯಿತು.