ಕಳೆದ ವಾರ ತೆರೆಕಂಡ ಧೀರಜ್ ಸರ್ನಾ ನಿರ್ದೇಶನದ, ವಿಕ್ರಾಂತ್ ಮೆಸ್ಸಿ, ರಾಶಿ ಖನ್ನಾ, ರಿಧೀ ದೋಗ್ರಾ ನಟಿಸಿರುವ ‘ದ ಸಬರಮತಿ ರಿಪೋರ್ಟ್’ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಗುಜರಾತ್ ಗೋದ್ರಾ ಹತ್ಯಾಕಾಂಡದ ವಿಷಯ ಹಿನ್ನೆಲೆಯಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಖುಷಿಯಲ್ಲಿರುವಾಗಲೇ ಚಿತ್ರತಂಡಕ್ಕೆ ಮತ್ತೊಂದು ಶುಭ ಸುದ್ದಿ ಬಂದಿದೆ. ಮಧ್ಯಪ್ರದೇಶ ಸರ್ಕಾರವು ‘ದ ಸಬರಮತಿ ರಿಪೋರ್ಟ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ‘‘ದ ಸಬರಮತಿ ರಿಪೋರ್ಟ್’ ಒಳ್ಳೆಯ ಸಿನಿಮಾವಾಗಿದೆ. ಈ ಚಿತ್ರವನ್ನು ನಾನು ನೋಡುವೆ, ಜತೆಗೆ ನಮ್ಮ ಸಚಿವರು, ಶಾಸಕರು, ಸಂಸದರಿಗೆ ನೋಡುವಂತೆ ತಿಳಿಸುವೆ. ರಾಜ್ಯದ ಗರಿಷ್ಠ ಜನರು ಈ ಸಿನಿಮಾ ನೋಡಲಿ ಎಂಬ ಉದ್ದೇಶಕ್ಕಾಗಿ ತೆರಿಗೆ ವಿನಾಯಿತಿ ನೀಡುತ್ತಿದ್ದೇವೆ’ ಎಂದು ೋಷಿಸಿದ್ದಾರೆ. -ಏಜೆನ್ಸೀಸ್
ಗೃಹಮಂತ್ರಿ ಅಮಿತ್ ಷಾ ಮೆಚ್ಚುಗೆ: ಪ್ರಧಾನಿ ಮೋದಿ ‘ದ ಸಬರಮತಿ ರಿಪೋರ್ಟ್’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನೆಲ್ಲೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಚಿತ್ರತಂಡದ ಕಾರ್ಯವನ್ನು ಕೊಂಡಾಡಿದ್ದಾರೆ. ಅಲ್ಲದೇ ‘ಸತ್ಯವನ್ನು ಕತ್ತಲಿನಿಂದ ಬೆಳಕಿಗೆ ತಂದಿದ್ದಾರೆ’ ಎಂದಿದ್ದಾರೆ. ‘ಯಾರೇ ಎಷ್ಟೇ ಪ್ರಯತ್ನಿಸಿದರೂ, ಕತ್ತಲೆಯಲ್ಲಿರುವ ಸತ್ಯವನ್ನು ಬೆಳಕಿಗೆ ತರುವುದನ್ನು ತಡೆಯಲು ಸಾಧ್ಯವಿಲ್ಲ. ‘ದ ಸಬರಮತಿ ರಿಪೋರ್ಟ್’ ಚಿತ್ರವು ಅಪ್ರತಿಮ ಧೈರ್ಯದಿಂದ ಸತ್ಯವನ್ನು ಬೆಳಕಿಗೆ ತಂದಿದೆ.’ ಎಂದಿದ್ದಾರೆ.