ಬೆಂಗಳೂರು: ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುವ ಜತೆಗೆ ರಾಜಸ್ವ ಸಂಗ್ರಹಕ್ಕೂ ಆಘಾತ ನೀಡಿರುವ ಇ-ಖಾತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಂಟಿ ಕಾರ್ಯಪಡೆ ರಚಿಸಲು ಸರ್ಕಾರ ತೀರ್ವನಿಸಿದೆ. ಇ-ಸ್ವತ್ತು, ಇ-ವಿನ್ಯಾಸ ಹಾಗೂ ಇ-ಆಸ್ತಿ ಸುಗಮವಾಗಿ ವಿತರಿಸಲು ಅನುಕೂಲವಾಗುವಂತೆ ವರದಿ ಸಲ್ಲಿಸುವುದು ಜಂಟಿ ಕಾರ್ಯಪಡೆಯ ಜವಾಬ್ದಾರಿಯಾಗಿದ್ದು, ವರದಿ ನೀಡುವುದಕ್ಕೆ ಎರಡು ತಿಂಗಳ ಗಡುವು ವಿಧಿಸಲಾಗಿದೆ. ಇದರಿಂದಾಗಿ ಇನ್ನೆರಡು ತಿಂಗಳು ಇ-ಖಾತಾ ಸಮಸ್ಯೆಗೆ ಪರಿಹಾರ ಇಲ್ಲ ಎಂಬುದು ಖಾತ್ರಿಯಾದಂತಾಗಿದೆ.
ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ರಹೀಂ ಖಾನ್ ಸಮಕ್ಷಮ ವಿಕಾಸಸೌಧದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅಪರ ಮುಖ್ಯ ಕಾರ್ಯದರ್ಶಿಯೂ ಆದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಜಂಟಿ ಕಾರ್ಯಪಡೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗಳ ಉನ್ನತ ಅಧಿಕಾರಿಗಳು ಇರುತ್ತಾರೆ. ಎರಡು ತಿಂಗಳೊಳಗೆ ವರದಿ ಸಲ್ಲಿಸುವುದು ಸೇರಿ ಇ-ಖಾತಾ ವಿತರಣೆ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸಲು ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಅಧ್ಯಕ್ಷತೆಯ ಜಂಟಿ ಕಾರ್ಯ ಪಡೆಗೆ ಸಚಿವತ್ರಯರು ಸಲಹೆ ನೀಡಿದರು.
ಅಕ್ರಮಕ್ಕೆ ಅಂಕುಶ ಉದ್ದೇಶ: ಸ್ಥಿರಾಸ್ತಿ ವಹಿವಾಟು ಅಕ್ರಮಕ್ಕೆ ಅಂಕುಶ ಹಾಗೂ ನಕಲಿ ನೋಂದಣಿ ನಿಯಂತ್ರಿಸುವುದು ಇ-ಖಾತಾ ಕಡ್ಡಾಯದ ಮುಖ್ಯ ಉದ್ದೇಶವೆಂದು ಸಚಿವ ಕೃಷ್ಣಬೈರೇಗೌಡ ಅಧಿಕಾರಿ ವರ್ಗಕ್ಕೆ ಮನದಟ್ಟು ಮಾಡಿಕೊಟ್ಟರು. ಎಲ್ಲ ರೀತಿಯ ವಸತಿ, ಕೃಷಿ ಅಥವಾ ವಾಣಿಜ್ಯ ಸ್ವತ್ತುಗಳಿಗೆ ಖಾತೆಯು ಕಾನೂನಿನ ಪ್ರಕಾರ ಅಗತ್ಯವಿದೆ. ವಿವಿಧ ನ್ಯಾಯಾಲಯಗಳ ನಿರ್ದೇಶನಗಳಲ್ಲಿಯೂ ಸಹ ನೋಂದಣಿಗೆ ಇ-ಖಾತಾ ಅವಶ್ಯವಿದೆ. ನೋಂದಣಿ ವಹಿವಾಟುಗಳು ಈ ಹಿಂದಿನಿಂದಲೂ ಕಾನೂನುಬದ್ಧ ಅಥವಾ ಅರೆ ಕಾನೂನುಬದ್ಧವಾಗಿ ನೋಂದಣಿಯಾಗುತ್ತಿವೆ. ಎಲ್ಲ ರೀತಿಯ ಆಸ್ತಿ ನೋಂದಣಿಗಳಿಗೆ ಇ-ಖಾತೆಯು ಕಡ್ಡಾಯವಾಗಿದೆ. ಇದರಿಂದ ನಕಲಿ ಖಾತಾಗಳನ್ನು ಬಳಸಿಕೊಂಡು ನಕಲು ವಹಿವಾಟುಗಳನ್ನು ತಪ್ಪಿಸಬಹುದಾಗಿದೆ. ಕಾನೂನಿನಲ್ಲಿ ಲಭ್ಯ ಅವಕಾಶ, ಕೋರ್ಟ್ಗಳ ನಿರ್ದೇಶನ, ಅವ್ಯವಹಾರ ಹಾಗೂ ಅಕ್ರಮಗಳ ದೂರು ಗಂಭೀರವಾಗಿ ಪರಿಗಣಿಸಿ, ಇ-ಖಾತಾ ಕಡ್ಡಾಯ ಮಾಡಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಿನ್ನೆಲೆಯಲ್ಲಿ ನಿಂತು ಇ-ಖಾತಾಗೆ ಒತ್ತಾಸೆ ನೀಡಿದ್ದು, ಆರ್ಡಿಪಿಆರ್, ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.
ರಾಷ್ಟ್ರೀಯ ಇನ್ಫಾರ್ವಟಿಕ್ಸ್ ಕೇಂದ್ರಕ್ಕೆ ಸೂಚನೆ
- ಯಾವುದೇ ನಿರ್ದಿಷ್ಟ ಹೊಂದಿಲ್ಲದ ಆಸ್ತಿಗಳನ್ನು ಉಲ್ಲೇಖಿಸಿ ಆಯಾಮವನ್ನು ಸೆರೆಹಿಡಿಯಲು ಇ-ಆಸ್ತಿ ಅಪ್ಲಿಕೇಶನ್ನಲ್ಲಿ ಅವಕಾಶ
- ಕಾನೂನಿನಲ್ಲಿ ಲಭ್ಯ ಅವಕಾಶದಂತೆ ಡೆವಲಪರ್ ಹೆಸರಿನಲ್ಲಿ ರಿಲಿಂಕ್ವಿಶ್ವೆುಂಟ್ ಡೀಡ್ಗೆ ಖಾತಾ ಮಾಡಲು, ಕಾರ್ಯಗತಗೊಳಿಸಲು ಇ-ಆಸ್ತಿಯಲ್ಲಿ ನಿಬಂಧನೆ ಅಳವಡಿಕೆ
- ಇ-ಆಡಳಿತ ಇಲಾಖೆ ಜವಾಬ್ದಾರಿ
- ಇ-ಆಸ್ತಿ/ಇ-ಸ್ವತ್ತುಗಳಂತೆ ಪ್ರತ್ಯೇಕ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ, ಟಿಡಿಆರ್ ಅಡಿಯಲ್ಲಿ ಅನೇಕ ಅನಿಯಮಿತ ವಹಿವಾಟುಗಳ ನಿರ್ವಹಣೆಗೆ ಪಿಐಡಿಗಳನ್ನು ನೀಡುವುದು.
ಪರಿಶೀಲನೆ, ಸೂಚನೆ
ಕರ್ನಾಟಕ ಗೃಹ ಮಂಡಳಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಸ್ವತ್ತುಗಳಿಗೂ ಇ-ಖಾತಾ ವಿತರಿಸುವ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ರ್ಚಚಿಸಲಾಯಿತು.
ಇ-ಆಸ್ತಿ ತಂತ್ರಾಂಶವನ್ನು 2-5-2016ರಿಂದ ಬಳಕೆ ಮಾಡಿ ನಮೂನೆ-3ರ ಸೃಜನೆ ಮತ್ತು ಹಕ್ಕು ವರ್ಗಾವಣೆ ಕೈಗೊಳ್ಳಲು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದು, ಇದುವರೆಗೆ 18.89 ಲಕ್ಷ ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಸೃಜಿಸಿರುವುದರ ಪರಿಶೀಲನೆ ಹಾಗೂ ಸಂಬಂಧಿಸಿದ ಆಸ್ತಿ ಮಾಲೀಕರಿಂದ ಅಗತ್ಯ ದಾಖಲೆಗಳೊಂದಿಗೆ ನಮೂನೆ-3ನ್ನು ಕೋರಿ ಅರ್ಜಿ ಸಲ್ಲಿಸಿದ ಏಳು ದಿನಗಳೊಳಗೆ ವಿತರಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಯಿತು.
ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿರುವ ಸ್ವತ್ತುಗಳಿಗೆ ನಮೂನೆ-3 ವಿತರಿಸುವ ಸಂಬಂಧ ಮುನ್ಸಿಪಲ್ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯಡಿ ರೂಪಿಸಿರುವ ನಿಯಮಗಳಿಗೆ ತಿದ್ದುಪಡಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿರುವುದರ ಪರಿಶೀಲನೆಗೆ ನಿರ್ಧರಿಸಲಾಯಿತು.
ಇ-ಆಸ್ತಿ ತಂತ್ರಾಂಶದಲ್ಲಿ ವಿತರಿಸಲಾಗಿರುವ ನಮೂನೆ-3ರ ಶೇ.10ರಷ್ಟು ಮಾತ್ರ ತಿದ್ದುಪಡಿ ಮಾಡಲು ಅವಕಾಶವಿದೆ. ಅಳತೆ ತಿದ್ದುಪಡಿ ಮಾಡುವ ಸಂಬಂಧ ಸದರಿ ಮಿತಿಯನ್ನು 8-11-2024ರಿಂದ ತೆಗೆದು ಹಾಕಿ, ಅಳತೆ ಸಮಸ್ಯೆ ಇತ್ಯರ್ಥಪಡಿಸಿರುವುದನ್ನು ಸಭೆ ಪರಾಮಶಿಸಿತು.
ಉದ್ಯಾನವನ ಮತ್ತು ರಸ್ತೆ ಜಮೀನುಗಳಿಗೆ ನಮೂನೆ-3 ಸೃಜಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲು ರಾಷ್ಟ್ರೀಯ ಇನ್ಫಾರ್ವಟಿಕ್ಸ್ ಕೇಂದ್ರ (ಎನ್ಐಸಿ)ಕ್ಕೆ ಸೂಚಿಸಲಾಗಿದೆ.
ಯಾವುದೇ ಸ್ವತ್ತನ್ನು ವಿಭಜಿಸುವ ಅಥವಾ ಒಟ್ಟುಗೂಡಿಸುವ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಅಗತ್ಯವಿದೆ. ನಕ್ಷೆ ಅನುಮೋದನೆಯಂತೆ ಸ್ವತ್ತಿನ ವಿಭಜನೆ ಅಥವಾ ಒಟ್ಟುಗೂಡಿಸುವಿಕೆಗೆ ಕ್ರಮ
ಭೂ ಪರಿವರ್ತನೆಯ ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಲೇಔಟ್ ಪ್ಲಾ್ಯನ್ಗೆ ಅನುಮೋದನೆ ಪಡೆದ ನಂತರದಲ್ಲಿ ಒಟ್ಟು ನಿವೇಶನ/ ನಿವೇಶನಗಳಿಗೆ ಖಾತಾ ನೀಡಲು ಕ್ರಮವಹಿಸಲಾಗುತ್ತಿದೆ. ಭೂಪರಿವರ್ತನೆ ಆಧಾರದ ಮೇಲೆ ಯೋಜನಾ ಪ್ರಾಧಿಕಾರದ ಅನುಮೋದನೆಯಿಲ್ಲದೇ ಖಾತಾ ನೀಡಲು ಕೆಎಂಎ 1964 ಸೆಕ್ಷನ್ 106 (ಎ)ರಡಿ ಅವಕಾಶವಿಲ್ಲ ಎಂಬುದನ್ನು ಸಭೆ ಅವಲೋಕಿಸಿತು.
ನಗರಾಭಿವೃದ್ಧಿ ಇಲಾಖೆ ಹೊಣೆಗಾರಿಕೆ ಏನು?
- ಇ-ಖಾತಾಗೆ ಸಂಬಂಧಿಸಿದಂತೆ ಅಗತ್ಯ ನಿರ್ದೇಶನಗಳನ್ನು ನೀಡಿ ಸುತ್ತೋಲೆ ಹೊರಡಿಸಿದ್ದು, ಇ-ಖಾತಾ ನೀಡುವ ಪ್ರಕ್ರಿಯೆ ತ್ವರಿತಗೊಳಿಸುವುದು
- ನಗರ ಸ್ಥಳೀಯ ಸಂಸ್ಥೆಗಳ ರೀತಿಯಲ್ಲಿ ಮುಡಾದಂತಹ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಇ-ಆಸ್ತಿಗೆ ಒಳಪಡಿಸಿ, ಇ-ಖಾತಾ ವಿತರಣೆ ಸುಗಮಗೊಳಿಸುವುದು
- ಬಿಬಿಎಂಪಿಯಲ್ಲಿ ಚಾಲ್ತಿಯಲ್ಲಿರುವ ನಿಬಂಧನೆ ಮತ್ತು ಕಾರ್ಯವಿಧಾನದಂತೆಯೇ ಪಾಲಿಕೆ, ಪುರಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಸತಿ ಮತ್ತು ವಾಣಿಜ್ಯ ಆಸ್ತಿಗಳಿಗೆ ಖಾತಾ ನೀಡುವುದು
- ಪಾಲಿಕೆ, ಪುರಸಭೆ ವ್ಯಾಪ್ತಿಯ ವಸತಿ, ವಾಣಿಜ್ಯ ಆಸ್ತಿ ಮಾಲಿಕರು ಒಮ್ಮೆ ಖಾತಾ ಪಡೆದ ನಂತರ ಮಾರಾಟ ನೋಂದಣಿ ನಡೆಯಬಹುದು
ಜಂಟಿ ಕಾರ್ಯಪಡೆ ಕೆಲಸವೇನು?
- ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು, ಹಾಸನ, ಉತ್ತರಕನ್ನಡ, ಕರಾವಳಿಯ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಇ-ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ
- ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣಾ ವ್ಯಾಪ್ತಿಯ ವಿಸ್ತರಣೆ ಮುಂತಾದ ಸಮಸ್ಯೆಗಳಿಗೆ ಪರಿಹಾರೋಪಾಯಗಳ ಶಿಫಾರಸು
- ಇ-ಖಾತಾ ವಿತರಣೆ ಪ್ರಕ್ರಿಯೆ ಸುಗಮಗೊಳಿಸುವುದು, ಚಾಲ್ತಿ ಅಡೆತಡೆಗಳ ನಿವಾರಣೆ, ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಲಖನೌ ತಂಡದಲ್ಲಿ ನಾನು…LSG ಮಾಲೀಕ ಸಂಜೀವ್ ಜೊತೆಗಿನ ವಿವಾದದ ಕುರಿತು ಮೌನಮುರಿದ KL Rahul
Orange ಜ್ಯೂಸ್ನಿಂದಾಗಿ ಬದಲಾಯ್ತು ಮಹಿಳೆಯ ಬದುಕು; ಲಾಟರಿಯಲ್ಲಿ ಗೆದ್ದಿದ್ದು ಕೋಟಿ ಕೋಟಿ