ವಂಚನೆ ದಾರಿತೋರಿದ ಜಾಹೀರಾತು

ತರೀಕೆರೆ: ಗೋಲ್ಡ್ ಕಂಪನಿ ಉದ್ಯೋಗಿಗೆ ವಂಚಿಸಿ ಆತನ ಕಿಸೆಯಲ್ಲಿದ್ದ ಕಾಸಿಗೆ ಕನ್ನಾ ಹಾಕಿದ್ದ ಖದೀಮರು ಖಾಕಿ ಪಡೆ ಬೀಸಿದ ಗಾಳಕ್ಕೆ ಬಿದ್ದು ಕಂಬಿ ಎಣಿಸುತ್ತಿದ್ದಾರೆ. ಪ್ರಕರಣದಲ್ಲಿ ವಂಚನೆಗೆ ಮಾರ್ಗ ತೋರಿಸಿದ್ದು ಅಡವಿಟ್ಟ ಬಂಗಾರ ಖರೀದಿಸುವ ಜಾಹೀರಾತು!

ಹೌದು, ಆ.13ರಂದು ಬೆಂಗಳೂರಿನ ಗೋಲ್ಡ್ ಕಂಪನಿ ಉದ್ಯೋಗಿ ಸತೀಶ್ ಅವರನ್ನು ಬೆದರಿಸಿ 64 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದ ಸೋಂಪುರದ ಮಣಿಕಂಠ ಮತ್ತು ಪಂಪಾಪತಿ ಲಕ್ಕವಳ್ಳಿ ಪೊಲೀಸರ ಅತಿಥಿ.

ಮಣಿಕಂಠ ಮತ್ತು ಪಂಪಾಪತಿ ನಿತ್ಯ ಮೋಜಿಗಾಗಿ ಈ ಹಿಂದೆ ಗ್ರಾಮದಲ್ಲಿ ಸಣ್ಣ ಪುಟ್ಟ ಮರಳು ದಂಧೆ, ಇನ್ನಿತರ ಅಕ್ರಮ ಚಟುವಟಿಕೆ ನಡೆಸಿ ಹಣ ಸಂಪಾದಿಸುತ್ತಿದ್ದರು. ಪೊಲೀಸರ ಕಿರಿಕಿರಿ ಹೆಚ್ಚಾಗಿದ್ದರಿಂದ ಸುಲಭ ಮಾರ್ಗದಲ್ಲಿ ಹಣಗಳಿಸಲು ಸುದ್ದಿ ವಾಹಿನಿಗಳಲ್ಲಿ ಅಡವಿಟ್ಟ ಚಿನ್ನ ಬಿಡಿಸಿ ಮಾರುಕಟ್ಟೆ ಬೆಲೆಗೆ ಗ್ರಾಹಕರಿಂದ ಕೊಂಡುಕೊಳ್ಳವ ಕುರಿತು ಬಿತ್ತರಗೊಳ್ಳುತ್ತಿದ್ದ ಜಾಹೀರಾತು ಗಮನಿಸಿದ ಆರೋಪಿಗಳು ಚಿನ್ನ ಮಾರಾಟ ಮಾಡುವುದಾಗಿ ವಂಚಿಸಿದ್ದಾರೆ.

ಅಡವಿಟ್ಟ ಚಿನ್ನ ಬಿಡಿಸಿ ಮಾರುಕಟ್ಟೆ ಬೆಲೆಗೆ ಗ್ರಾಹಕರಿಂದ ಕೊಂಡುಕೊಳ್ಳವ ಕುರಿತು ಬಿತ್ತರಗೊಳ್ಳುತ್ತಿದ್ದ ಜಾಹೀರಾತು ವೀಕ್ಷಿಸಿದ ಕೂಡಲೇ ಆರೋಪಿಗಳು ಗೋಲ್ಡ್ ಕಂಪನಿಗೆ ಕರೆ ಮಾಡಿ ವೈಯಕ್ತಿಕ ಕಾರಣಗಳಿಂದ ನಮ್ಮಲಿರುವ 30 ಗ್ರಾಂ ಚಿನ್ನವನ್ನು ರಂಗೇನಹಳ್ಳಿಯ ವಿಜಯಾ ಬ್ಯಾಂಕ್​ನಲ್ಲಿ ಅಡವಿಲಾಗಿದೆ. ಬ್ಯಾಂಕ್​ಗೆ ಬಡ್ಡಿ ಸೇರಿ 60 ಸಾವಿರ ರೂ.ಹಣ ಪಾವತಿಸಿ ಚಿನ್ನಾಭರಣ ಬಿಡಿಸಬೇಕಾಗಿದೆ. ಆ ಹಣ ಪಾವತಿಸಿದಲ್ಲಿ ನಾವು ಅಡವಿಟ್ಟ ಚಿನ್ನವನ್ನು ಬ್ಯಾಂಕ್​ನಿಂದ ಬಿಡಿಸಿ ನಿಮ್ಮ ಕಂಪನಿಗೆ ಮಾರಾಟ ಮಾಡುವುದಾಗಿ ನಂಬಿಸಿದ್ದಾರೆ.

ಆರೋಪಿ ಮಣಿಕಂಠನ ಮಾತಿಗೆ ಮರುಳಾದ ಗೋಲ್ಡ್ ಕಂಪನಿ ಉದ್ಯೋಗಿ ಸತೀಶ್ ಎಂಬಾತನಿಗೆ 66 ಸಾವಿರ ರೂ. ಕೊಟ್ಟು ಚಿನ್ನ ಬಿಡಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಅದರಂತೆ ಆ.13ರಂದು ಬೆಳಗ್ಗೆ 5 ಕ್ಕೆ ತರೀಕೆರೆಗೆ ಬಂದ ಸತೀಶ್​ನನ್ನು ರಂಗೇನಹಳ್ಳಿ ವಿಜಯಾ ಬ್ಯಾಂಕ್​ಗೆ ಹೋಗೋಣ ಎಂದು ನಂಬಿಸಿ ಆಟೋದಲ್ಲಿ ಕೂರಿಸಿಕೊಂಡು ಬೆದರಿಸಿ 66 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳಿಂದ ಮೋಜು ಮಸ್ತಿ:  ಗೋಲ್ಡ್ ಕಂಪನಿ ಉದ್ಯೋಗಿ ಸತೀಶ್​ನಿಂದ 66 ರೂ. ಪಡೆದ ಮಣಿಕಂಠ ಮತ್ತು ಪಂಪಾಪತಿ ಶಿವಮೊಗ್ಗಕ್ಕೆ ತೆರಳಿ ಮೋಜು ಮಸ್ತಿ ನಡೆಸಿ ರಾತ್ರಿ ತರೀಕೆರೆಗೆ ಬಂದು ಲಾಡ್ಜವೊಂದರಲ್ಲಿ ಉಳಿದುಕೊಂಡಿದ್ದಾರೆ. ಮಾರನೇ ದಿನ ಉಳಿದ ಹಣದಲ್ಲಿ ಪಂಪಾಪತಿ ಹಿಂದೆ ಪಟ್ಟಣದ ಗಿರವಿ ಅಂಗಡಿಯೊಂದರಲ್ಲಿ ಇಟ್ಟಿದ್ದ ಒಡವೆ ಬಿಡಿಸಲು ಹೋದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಗಳು ಗಿರವಿ ಅಂಗಡಿಯಲ್ಲಿ ಇಟ್ಟಿದ್ದ ಚಿನ್ನ ಎಲ್ಲಿಂದ ಬಂತು ಎಂಬುವುದು ಯಕ್ಷ ಪ್ರಶ್ನೆಯಾಗಿದೆ.