ತಾಪ್ಸೀಗೆ ಮಣಿ ಸಿನಿಮಾದಲ್ಲಿ ನಟಿಸುವಾಸೆ

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಿನಿಮಾದಲ್ಲಿ ಸಣ್ಣ ಪಾತ್ರವನ್ನಾದರೂ ಮಾಡಬೇಕೆಂಬ ಆಸೆ, ಪ್ರತಿಯೊಬ್ಬ ನಟ-ನಟಿಯರಿಗೂ ಇದ್ದೇ ಇರುತ್ತದೆ. ಮುಖ್ಯಭೂಮಿಕೆ ಸಿಗದಿದ್ದರೂ ಪರವಾಗಿಲ್ಲ, ಪೋಷಕ ಪಾತ್ರದಲ್ಲಾದರೂ ಕಾಣಿಸಿಕೊಳ್ಳಬೇಕೆಂದು ಎಷ್ಟೋ ಜನ ಕನಸು ಕಂಡಿರುತ್ತಾರೆ. ಹಾಗೆಯೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟಿ ತಾಪ್ಸೀ ಪನ್ನು ಕೂಡ ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ, ‘ಯಾವ ನಿರ್ದೇಶಕರೊಂದಿಗೆ ಕೆಲಸ ಮಾಡಲು ಬಯಸುತ್ತೀರಿ’ ಎಂಬ ಪ್ರಶ್ನೆಗೆ ಉತ್ತರಿಸಿದ್ದ ತಾಪ್ಸೀ, ‘ನಾನು ಒಂದು ಬಾರಿಯಾದರೂ ಮಣಿರತ್ನಂ ಅವರ ಚಿತ್ರದ ನಾಯಕಿ ಆಗಬೇಕು. ನನ್ನ ಪಾಲಿಗೆ ಅದೊಂದು ಅಪರೂಪದ ಸಂಗತಿ. ಅವರ ಚಿತ್ರದಲ್ಲಿನ ಪ್ರತಿಯೊಂದು ಪಾತ್ರವೂ ತೆರೆಮೇಲೆ ಜೀವಿಸುತ್ತವೆ. ನೈಜತೆಗೆ ತುಂಬ ಹತ್ತಿರವಿರುತ್ತವೆ. ಹಾಗಾಗಿ ಅವರ ಚಿತ್ರದಲ್ಲಿ ನಟಿಸುವ ಅವಕಾಶಕ್ಕೆ ಕಾಯುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ದೆಹಲಿ ಮೂಲದ ತಾಪ್ಸೀ ದಕ್ಷಿಣ ಭಾರತದ ಚಿತ್ರರಂಗದಿಂದ ಗುರುತಿಸಿಕೊಂಡವರು. ತೆಲುಗು, ತಮಿಳಿನ ಸ್ಟಾರ್ ನಟರ ಜತೆ ನಟಿಸಿ ಸೈ ಎನಿಸಿಕೊಂಡು, ಇದೀಗ ಬಾಲಿವುಡ್​ನಲ್ಲಿ ನೆಲೆ ನಿಲ್ಲುತ್ತಿದ್ದಾರೆ. ಹೀಗಿರುವಾಗಲೇ, ಮಣಿರತ್ನಂ ನಿರ್ದೇಶನದ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಮತ್ತೆ ದಕ್ಷಿಣದತ್ತ ಮುಖ ಮಾಡುವ ಪ್ಲಾ್ಯನ್ ಅವರದ್ದು. ಸದ್ಯ ತೆಲುಗು-ತಮಿಳಿನಲ್ಲಿ ತಯಾರಾಗುತ್ತಿರುವ ‘ಗೇಮ್​ವರ್’ ಚಿತ್ರದಲ್ಲಿ ತಾಪ್ಸೀ ನಟಿಸುತ್ತಿದ್ದಾರೆ.