ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಾನಾ ಪಾಟೇಕರ್​ಗೆ ಕ್ಲೀನ್​ ಚಿಟ್​: ಪ್ರಧಾನಿ ಬಳಿ ಅಸಹಾಯಕತೆ ತೋಡಿಕೊಂಡ ನಟಿ ತನುಶ್ರೀ

ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಾಲಿವುಡ್​ ಹಿರಿಯ ನಟ ನಾನಾ ಪಾಟೇಕರ್​ಗೆ ಮುಂಬೈ ಪೊಲೀಸರು ಕ್ಲೀನ್​ ಚಿಟ್​ ನೀಡಿದ ಬೆನ್ನಲ್ಲೇ ನಟಿ ತನುಶ್ರೀ ದತ್ತಾ ಮುಂಬೈ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಕರಣ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ನಟಿ ತನುಶ್ರೀ, ಹಿರಿಯ ನಟ ನಾನಾ ಪಾಟೇಕರ್​ರಿಂದ ಲಂಚವನ್ನು ಪಡೆದು ಪೊಲೀಸರು ಸರಿಯಾಗಿ ತನಿಖೆ ನಡೆಸದೇ ನನ್ನ ಪ್ರಕರಣದ ದಿಕ್ಕನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿರುವ ತನುಶ್ರೀ, ನಾನು ದೇಶಕ್ಕಾಗಿಯೇ ಇರುವುದಾಗಿ ಪ್ರಧಾನಿ ಮೋದಿ ಹೇಳುತ್ತಾರೆ. ಯಾವಾಗಲೂ ಪ್ರಧಾನಿ ಅವರು ರಾಮರಾಜ್ಯ ಕಲ್ಪನೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶದ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ತಿಳಿಯದ ನಿಮ್ಮ ನೇತೃತ್ವದಲ್ಲಿ ನಾವು ಮುಂದುವರಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮೋದಿ ಜಿ ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಏನಾಯಿತು? ಸರಣಿ ಅಪರಾಧದಿಂದ ನಾನು ಕಿರುಕುಳಕ್ಕೆ ಒಳಗಾಗಿದ್ದೇನೆ. ಸಾರ್ವಜನಿಕರ ನಡುವೆ ಗುಂಪಿನಿಂದ ಹಲ್ಲೆಗೆ ಒಳಗಾಗಿದ್ದೇನೆ. ಪದೇ ಪದೆ ನ್ಯಾಯಯವನ್ನು ನಿರಾಕರಿಸುವ ಮೂಲಕ ನನ್ನ ಹೆಸರಿಗೆ ಕಳಂಕ ತರಲಾಗಿದೆ.ನನ್ನನ್ನು ಬೆದರಿಸಲಾಯಿತು. ಒತ್ತಡ ಏರಲಾಯಿತು. ನನ್ನ ವೃತ್ತಿ ಜೀವನವನ್ನು ಹಾಳುಗೆಡುವಲಾಯಿತು. ಕೊನೆಗೆ ಜೀವವನ್ನು ಉಳಿಸಿಕೊಳ್ಳಲು ನಾನು ದೇಶವನ್ನು ಬಿಟ್ಟು ಅನಾಮಧೇಯಳಂತೆ ಬದುಕಿದೆ. ಇದೀಗ ನಿಮ್ಮ ಪೊಲೀಸ್​ ಪಡೆ ನಾನು ಕೊಟ್ಟ ದೂರನ್ನು ತಪ್ಪು ಎಂದು ಹೇಳುತ್ತಿದೆ. ಇದೇನಾ ನಿಮ್ಮ ರಾಮರಾಜ್ಯ ಎಂದು ಪ್ರಧಾನಿ ಮೋದಿ ಅವರನ್ನು ನಟಿ ತನುಶ್ರೀ ದತ್ತಾ ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *