#MeToo ಚಳವಳಿ ನನ್ನನ್ನು ಅವಲಂಬಿಸಿರಬಾರದು ಎಂದ ಬಾಲಿವುಡ್‌ ನಟಿ ತನುಶ್ರೀ ದತ್ತಾ

ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ತಾ ನಿರ್ದೇಶಕ ಮತ್ತು ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #ಮೀ ಟೂ ಅಭಿಯಾನ ಚುರುಕು ಪಡೆದುಕೊಂಡಿತ್ತು. ಇದೀಗ ಅಮೆರಿಕದಿಂದ ವಾಪಸಾಗಿರುವ ತನುಶ್ರೀ ಮತ್ತೆ ಮೀ ಟೂ ಚಳವಳಿಯು ನನ್ನನ್ನು ಅವಲಂಬಿಸಿರಬಾರದು ಎಂದು ಹೇಳಿದ್ದಾರೆ.

10 ವರ್ಷಗಳ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಜೀವ ತುಂಬಿದ್ದ ತನುಶ್ರೀ, ಯಾವುದೂ ಕೂಡ ನನ್ನ ಮೇಲೆ ಅವಲಂಬಿತವಾಗಿರಬಾರದು. ಏಕೆಂದರೆ ಯಾವುದೇ ವಿಷಯ ಉದ್ದೇಶವನ್ನು ಬಿಟ್ಟು ವ್ಯಕ್ತಿಯನ್ನು ಅವಲಂಬಿಸಿದರೆ ಅದು ಬದ್ಧವಾಗುತ್ತದೆ ಮತ್ತು ಮುಕ್ತವಾಗಿ ಅದು ಏಳಿಗೆ ಕಾಣುವುದಿಲ್ಲ ಎಂದು ಹೇಳಿದ್ದಾರೆ.

ಓರ್ವ ಸಾಮಾನ್ಯ ವ್ಯಕ್ತಿಯನ್ನು ಮಾಧ್ಯಮಗಳು ನಾಯಕಿಯನ್ನಾಗಿ ಮಾಡುತ್ತಿವೆ. ನಾನು ಆ ಕೆಲಸಗಾರಳಾಗಿರಲಿಲ್ಲ. ಆದರೆ, ಒಂದು ವಾಹಿನಿಯ ಮೂಲಕ ಸಮಾಜದಲ್ಲಿ ಸ್ವಲ್ಪ ಬದಲಾವಣೆ ಅಥವಾ ಜಾಗೃತಿ ಮೂಡಬೇಕಾಗಿತ್ತು. ಒಂದು ಅರ್ಥದಲ್ಲಿ ನನ್ನ ವೃತ್ತಿ ಜೀವನದಲ್ಲಿ ಹಲವಾರು ವರ್ಷಗಳ ಕಾಲ ನನ್ನನ್ನು ಹಿಂದಕ್ಕೆ ತಳ್ಳಿದ್ದ ಆ ಘಟನೆಗೆ ನನಗೆ ಪ್ರತೀಕಾರ ಬೇಕಾಗಿತ್ತು ಎಂದು ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದೆ 2008ರಲ್ಲಿ ಬಾಲಿವುಡ್​ನ ‘ಹಾರ್ನ್​ ಓಕೆ ಪ್ಲೀಸ್​’ ಚಿತ್ರದ ಚಿತ್ರೀಕರಣ ವೇಳೆ ನಿರ್ದೇಶಕ ನಾನಾ ಪಾಟೇಕರ್​ ಹಾಗೂ ನೃತ್ಯ ನಿರ್ದೇಶಕ ಗಣೇಶ್​ ಆಚಾರ್ಯ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ತನುಶ್ರೀ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಆರೋಪ ಮಾಡಿದ್ದರು.

ತನುಶ್ರೀ ದತ್ತಾ ಆರೋಪ ಮಾಡುತ್ತಲೇ ಮೀ ಟೂ ಚಳುವಳಿಯು ದೇಶಾದ್ಯಂತ ವೇಗ ಪಡೆದುಕೊಂಡಿತ್ತು. ಚಿತ್ರರಂಗ ಸೇರಿದಂತೆ ಹಲವು ಕ್ಷೇತ್ರದ ಮಹಿಳೆಯರು ತಮ್ಮ ಕತೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಬಾಲಿವುಡ್‌ನ ಸೆಲೆಬ್ರಿಟಿಗಳಾದ ಅಲೋಕ್‌ ನಾಥ್‌, ನಿರ್ದೇಶಕ ವಿಕಾಸ್‌ ಬಹ್ಲಾ, ಹೌಸ್‌ಫುಲ್‌ 4 ನಿರ್ದೇಶಕ ಸಜಿದ್‌ ಖಾನ್‌, ಚಿತ್ರ ನಿರ್ಮಾಪಕ ಸುಭಾಶ್‌ ಘಾಯ್‌, ಕವಿ, ಬರಹಗಾರ ವೈರಮತ್‌ ಮತ್ತು ಇತರರ ಹೆಸರು ಕೇಳಿಬಂದಿತ್ತು. (ಏಜೆನ್ಸೀಸ್)