ಬತ್ತಿದ ಹುಚ್ಚುರಾಯನ ಕೆರೆ, ಕೊಪ್ಪದಲ್ಲಿ ನೀರಿಗೆ ಹಾಹಾಕಾರ

ಕೊಪ್ಪ: ನಿಗದಿತ ಸಮಯಕ್ಕೆ ಮುಂಗಾರು ಮಳೆ ಬಾರದಿರುವುದರಿಂದ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿಗೆ ತತ್ವಾರ ಉಂಟಾಗಿದ್ದು ಜೂನ್​ನಲ್ಲಿಯೇ ನೀರಿಗೆ ಬರ ಎದುರಾಗಿದೆ.

ಕೊಪ್ಪಕ್ಕೆ ನೀರೊದಗಿಸುವ ಹುಚ್ಚುರಾಯನ ಕೆರೆ ಸಂಪೂರ್ಣ ಬರಿದಾಗಿರುವುದರಿಂದ ಪಟ್ಟಣಕ್ಕೆ ಅವಶ್ಯಕ ನೀರು ಪೂರೈಸಲು ನೀರಿಲ್ಲದಂತಾಗಿದೆ. ತುಂಗಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಸುವ ಸಿಗದಾಳು ಪಂಪ್ ಹೌಸ್​ನಲ್ಲಿ ವಾಟರ್ ಲಿಪ್ಟಿಂಗ್ ಪಂಪ್ ಪದೇ ಪದೆ ಹಾಳಾಗುತ್ತಿರುವುದರಿಂದ ಪಟ್ಟಣದ ಜನತೆಗೆ ನೀರಿನ ಸಮಸ್ಯೆ ಕಾಡುತ್ತಿದೆ.

ಬ್ರಾಹ್ಮಿ ನದಿ ಬತ್ತಿರುವುದರಿಂದ ಗ್ರಾಮಾಂತರ ಗ್ರಾಪಂ ವ್ಯಾಪ್ತಿಯ ನೇತಾಜಿ ನಗರ, ಗಾಯತ್ರಿ ನಗರದ ಪ್ರದೇಶಗಳಿಗೂ ನೀರಿನ ಅಭಾವ ಕಾಡುತ್ತಿದೆ. ಪರ್ಯಾಯವಾಗಿ ಗ್ರಾಪಂನಿಂದ ಹೆಚ್ಚುವರಿಯಾಗಿ ಬೋರ್​ವೆಲ್​ಗಳನ್ನು ಕೊರೆಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಾರದಿರುವುದರಿಂದ ಎರಡು ದಿನಗಳಿಂದ ನೀರಿಲ್ಲದೆ ಇಲ್ಲಿನ ವಾಸಿಗಳು ಪರಿತಪಿಸುತ್ತಿದ್ದಾರೆ.

ಕಳೆದ ವರ್ಷ ಪಟ್ಟಣದಲ್ಲಿ 45 ಮಿ.ಮೀ ಮಳೆಯಾಗಿದ್ದರೆ, ಈ ಬಾರಿ 4.40 ಮಿ.ಮೀ ಮಳೆಯಾಗಿದೆ. ಎರಡು ದಿನದಿಂದ ಪಟ್ಟಣದ ಕೆಲ ವಾರ್ಡ್​ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ಪಪಂ ಇದುವರೆಗೂ ಯೋಜನೆ ರೂಪಿಸದಿರುವುದೆ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಬಾರದಿರುವುದರಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ.

Leave a Reply

Your email address will not be published. Required fields are marked *