ತಮಿಳುನಾಡು ರಾಜಕೀಯ ಕರುಣಾಜನಕ!

ದ್ರಾವಿಡ ರಾಜನೀತಿ ಮೂಲಕ ಎಂಟು ದಶಕಗಳ ಕಾಲ ಸಾರ್ವಜನಿಕ ಜೀವನ ನಡೆಸಿದ ಎಂ. ಕರುಣಾನಿಧಿ ಯುಗಾಂತ್ಯವಾಗಿದೆ. ಈಗ ತಮಿಳುನಾಡು ರಾಜಕೀಯ ಯಾವೆಲ್ಲ ತಿರುವುಗಳನ್ನು ಪಡೆಯಲಿದೆ? ಎರಡನೇ ಸಾಲಿನ ನಾಯಕರು ಮುಂಚೂಣಿಗೆ ಬಂದು ಜನಮಾನಸವನ್ನು ತಲುಪಬಲ್ಲರೆ? ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿವೆ. ಜಯಲಲಿತಾ, ಕರುಣಾನಿಧಿ ಇಲ್ಲದ ಮೊದಲ ಲೋಕಸಭಾ ಚುನಾವಣೆ 2019ರಲ್ಲಿ ನಡೆಯಲಿದ್ದು, ರಾಜಕೀಯ ಭವಿಷ್ಯ ಏನಾದೀತು ಎಂಬ ಕುತೂಹಲವನ್ನು ಅದು ಮೂಡಿಸಿದೆ.

ಕರುಣಾನಿಧಿ ನಂತರ ಮುಂದೇನು? ಡಿಎಂಕೆ ಪಕ್ಷ ಸೇರಿದಂತೆ ತಮಿಳುನಾಡು ರಾಜಕೀಯಕ್ಕೆ ಸದ್ಯ ಕಾಡುತ್ತಿರುವ ಪ್ರಶ್ನೆ ಇದು. ಕಾಮರಾಜ್, ಅಣ್ಣಾ ದೊರೈ, ಎಂ.ಜಿ. ರಾಮಚಂದ್ರನ್, ಜಯಲಲಿತಾರಂಥ ದಿಗ್ಗಜ ನಾಯಕರನ್ನು ಕಂಡ ತಮಿಳುನಾಡಿನಲ್ಲಿಗ ಕರುಣಾನಿಧಿಯವರ ಯುಗಾಂತ್ಯವಾಗಿದೆ. ಐದು ದಶಕಗಳ ಕಾಲ ಪಕ್ಷದ ಚುಕ್ಕಾಣಿಯನ್ನು ನಿರ್ವಹಿಸಿದ ಈ ನಾಯಕನ ಬಳಿಕ ಡಿಎಂಕೆಯನ್ನು ಮುನ್ನಡೆಸುವವರು ಯಾರು? ಪಕ್ಷದ ಆಂತರಿಕ ಸಂರಚನೆಯನ್ನು ಕಾಪಾಡುವವರು ಯಾರು? ಹಳೆ-ಹೊಸ ನಾಯಕನ ನಡುವಿನ ಶೀತಲಸಮರ ಕೊನೆಗಾಣಿಸುವವರಾರು? ಹೀಗೆ ಉತ್ತರ ದೊರೆಯದ ಹಲವು ಪ್ರಶ್ನೆಗಳು ಉದ್ಭವವಾಗಿವೆ.

ಅನಾರೋಗ್ಯ ತೀವ್ರವಾಗಿ ಕಾಡಿದಾಗ ಕರುಣಾನಿಧಿ 2016ರಲ್ಲಿ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್​ರನ್ನು ಉತ್ತರಾಧಿಕಾರಿಯಾಗಿ ಘೋಷಿಸಿದರು. ಆ ಮೊದಲೇ ಮುನಿಸಿಕೊಂಡಿದ್ದ ಕರುಣಾ ಹಿರಿಯ ಪುತ್ರ ಅಳಗಿರಿ ಈ ಬೆಳವಣಿಗೆ ಬಳಿಕ ಪಕ್ಷದಿಂದಲೇ ದೂರವಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಕೆಲವೆಡೆ, ಅಳಗಿರಿ-ಸ್ಟಾಲಿನ್ ಬೆಂಬಲಿಗರ ನಡುವೆ ಘರ್ಷಣೆಯೂ ನಡೆಯಿತು. ಅಲ್ಲದೆ, ಪಕ್ಷಕ್ಕೆ ‘ಕುಟುಂಬ ರಾಜಕಾರಣ’ದ ಹಣೆಪಟ್ಟಿಯೂ ಹತ್ತಿಕೊಂಡಿತು. ಕನಿಮೋಳಿ ‘ಡಿಎಂಕೆಗೆ ಸ್ಟಾಲಿನ್ ಉತ್ತರಾಧಿಕಾರಿ’ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ.

ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಜನರು ಡಿಎಂಕೆ ಪಕ್ಷವನ್ನು ಸಾರಾಸಗ ಟಾಗಿ ತಿರಸ್ಕರಿಸಿದ್ದಾರೆ. ‘ದ್ರಾವಿಡ ಆದರ್ಶವಾದ’ವನ್ನು ಯುವಪೀಳಿಗೆ ಒಪು್ಪತ್ತಿಲ್ಲ. ಕರುಣಾ ರೂಪಿಸಿದ ‘ಸೋಷಿಯಲ್ ಇಂಜಿನಿಯರಿಂಗ್’ ಈಗ ಕೆಲಸ ಮಾಡುತ್ತಿಲ್ಲ. ಆದ್ದರಿಂದ, ದ್ರಾವಿಡ ಆಂದೋಲನ ಅಸ್ತಿತ್ವ ಕಳೆದುಕೊಳ್ಳಲಿದೆಯೇ? ಸ್ಟಾಲಿನ್ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರೆ? ಎಂಬೆಲ್ಲ ಅನುಮಾನಗಳಿಗೆ ಪ್ರಾಯಶಃ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ದೊರೆಯಲಿದೆ.

ಕರುಣಾಗಿಂತ ಸ್ಟಾಲಿನ್ ಸ್ವಲ್ಪ ಭಿನ್ನ ನಿಲುವು, ರಾಜಕೀಯ ದೃಷ್ಟಿಕೋನ ಹೊಂದಿದ್ದಾರೇನೋ ನಿಜ. ಆದರೆ ಪಕ್ಷದ ಹಲವು ನಾಯಕರೇ ಅವರನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂಬುದು ಸತ್ಯ. ಹೀಗಿರುವಾಗ ಡಿಎಂಕೆ ಮತ್ತೆ ಜನಮನ ಗೆಲ್ಲಬೇಕಾದರೆ ಸಾಕಷ್ಟು ಕಸರತ್ತಿನ ಜತೆಗೆ ತಾಜಾ ಚಿಂತನೆಗಳನ್ನು ಮಂಡಿಸಬೇಕಾದ, ಅಭಿವೃದ್ಧಿಯನ್ನೇ ಪ್ರಮುಖ ಕಾರ್ಯಸೂಚಿಯಾಗಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.

ಕಾಂಗ್ರೆಸ್​ನ ಸಂಘಟನೆ ಕೂಡ ಈ ರಾಜ್ಯದಲ್ಲಿ ನೆಲಕಚ್ಚಿದ್ದು, ಹೊಸ ಪದಾಧಿಕಾರಿಗಳನ್ನು ನೇಮಿಸಿ ಮರುಸಂಘಟನೆ ಮಾಡುವ ಒಲವನ್ನು ಪಕ್ಷದ ಹೈಕಮಾಂಡ್ ಜೂನ್ ತಿಂಗಳಲ್ಲೇ ತೋರಿತು. ಆ ಬಳಿಕ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಜಿ.ಕೆ. ವಾಸನ್ 2016ರಲ್ಲಿ ಕಾಂಗ್ರೆಸ್ ತೊರೆದು ತಮಿಳು ಮನಿಲಾ ಕಾಂಗ್ರೆಸ್ ಸ್ಥಾಪಿಸಿದ ಮೇಲೆ ಕಾಂಗ್ರೆಸ್​ನ ಕೆಲ ಪ್ರಮುಖ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಉಳಿದಿರುವ ಕೆಲ ನಾಯಕರಲ್ಲೇ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಸಂಘಟನೆ ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಪ್ರಾಬಲ್ಯವಿದ್ದ ರಾಜ್ಯಗಳನ್ನೇ ಕಳೆದುಕೊಂಡ ಬಳಿಕ ಕಾಂಗ್ರೆಸ್ ತ.ನಾಡಿನ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಆದರೂ, ಚಿತ್ರನಟ ಕಮಲ್ ಹಾಸನ್ ‘ಕೈ’ಯತ್ತ ವಾಲುವರೇ ಎಂಬ ನಿರೀಕ್ಷೆಯನ್ನು ಪಕ್ಷದ ಹಲವು ನಾಯಕರು ಇರಿಸಿಕೊಂಡಿದ್ದಾರೆ.

ರಜನಿ ಸಸ್ಪೆನ್ಸ್

ರಾಜಕೀಯ ರಂಗಕ್ಕೆ ಪ್ರವೇಶಿಸುವುದಾಗಿ ಹೇಳಿ ಭಾರಿ ಸಂಚಲನ ಮೂಡಿಸಿದ ಚಿತ್ರನಟ ರಜನಿಕಾಂತ್ ಆ ಬಳಿಕ ಮಹತ್ವದ ಹೆಜ್ಜೆಗಳನ್ನು ಇರಿಸಿಲ್ಲ. ರಜನಿ ಅಭಿಮಾನಿಗಳು ಹಲವಾರು ವರ್ಷಗಳಿಂದಲೂ ಅವರು ರಾಜಕೀಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸುತ್ತಲೇ ಬಂದಿದ್ದರು. ಈ ಬಗ್ಗೆ ಹೆಚ್ಚೇನೂ ಒಲವು ತೋರದ ರಜನಿ ಈಗ ನಿಲುವು ಬದಲಿಸಿ ರಾಜಕೀಯದೆಡೆಗೆ ಮುಖಮಾಡಿದ್ದಾರೆ ನಿಜ. ಆದರೆ, ಅವರ ಪಕ್ಷ ಯಾವಾಗ ಸ್ಥಾಪನೆಗೊಳ್ಳಲಿದೆ? ಅಥವಾ ಯಾವುದಾದರೂ ರಾಜಕೀಯ ಪಕ್ಷ ಸೇರುವರೋ? ಯಾವುದೂ ಸ್ಪಷ್ಟಗೊಂಡಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಜನಿ ಸ್ಪಷ್ಟ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದ್ದು, ಸಿನಿಮಾದಲ್ಲಿ ಸ್ಟಾರ್ ಪಟ್ಟ ಏರಿದಂತೆ ರಾಜಕೀಯದಲ್ಲೂ ಕಮಾಲ್ ಮಾಡಬಲ್ಲರೆ? ಕಾದುನೋಡಬೇಕು.

ಹುಮ್ಮಸ್ಸಿನಲ್ಲಿ ಕಮಲ ಪಾಳಯ

2014ರ ಲೋಕಸಭಾ ಚುನಾವಣೆ ಬಳಿಕ ಹಲವು ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡಿರುವ ಬಿಜೆಪಿ ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ. 20 ತಿಂಗಳ ಅವಧಿಯಲ್ಲೇ ಇಬ್ಬರು ದಿಗ್ಗಜ ನಾಯಕರನ್ನು (ಜಯಲಲಿತಾ, ಕರುಣಾನಿಧಿ) ಕಳೆದುಕೊಂಡಿರುವ ತಮಿಳುನಾಡಿಗೆ ಈಗ ‘ರಾಜಕೀಯ ಖಾಲಿತನ’ ಕಾಡುತ್ತಿದ್ದು, ಬಿಜೆಪಿ ಅದನ್ನು ತುಂಬಲಿದೆಯೇ ಎಂಬ ವಿಶ್ಲೇಷಣೆ ರಾಜಕೀಯ ಅಂಗಳದಲ್ಲಿ ಆರಂಭವಾಗಿದೆ. ಪಕ್ಷದ ಬಲವೇನೂ ಇಲ್ಲದ ಪಶ್ಚಿಮ ಬಂಗಾಳದಲ್ಲಿ ಕೂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರ‍್ಯಾಲಿ ನಡೆಸಲಿದ್ದು, ಅಲ್ಲಿ ಬಿಜೆಪಿಪರ ವಾತಾವರಣ ರೂಪುಗೊಳ್ಳಲು ಯತ್ನಿಸಲಿದ್ದಾರೆ. ಆದರೆ, ತ.ನಾಡಿನ ಪರಿಸ್ಥಿತಿಯೇ ಭಿನ್ನ. ಕಮಲ ಪಾಳಯದ ಪಾಲಿಗೆ ಉಳಿದ ರಾಜ್ಯಗಳಲ್ಲಿ ಇದ್ದ ಅನುಕೂಲಗಳು ಇಲ್ಲಿಲ್ಲ. ಮುಖ್ಯವಾಗಿ, ಪ್ರಭಾವಿ ನಾಯಕರ ಕೊರತೆ. ಸುಬ್ರಮಣಿಯನ್ ಸ್ವಾಮಿ ರಾಷ್ಟ್ರ ರಾಜಕಾರಣದಲ್ಲಿ ಬಿಜಿಯಾಗಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತ.ನಾಡಿನವರೇ ಆಗಿದ್ದು, ಅವರನ್ನು ರಾಜ್ಯ ರಾಜಕೀಯಕ್ಕೆ ತರಬಹುದಾದರೂ ಅದಕ್ಕೆ ನಿರ್ಮಲಾ ಅವರು ಸಮ್ಮತಿಸುವುದು ಕಷ್ಟಕರ. ಕನ್ಯಾಕುಮಾರಿಯಿಂದ ಸಂಸದರಾಗಿರುವ ಪೊನ್ನ ರಾಧಾಕೃಷ್ಣನ್​ಗೆ ಹೇಳಿಕೊಳ್ಳುವಂಥ ವರ್ಚಸ್ಸಿಲ್ಲ. ಪ್ರಸಕ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ತಮಿಳಸಾಯಿ ಸೌಂದರ್ಯರಾಜನ್ ತಮ್ಮ ವಿಚಿತ್ರ ಹೇಳಿಕೆಗಳಿಂದ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿರುವುದೇ ಹೆಚ್ಚು.

2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡ 6.8 ಮತ ಪಡೆದರೆ ಬಿಜೆಪಿ ಶೇ.2.8 ಮತಗಳನ್ನಷ್ಟೇ ಗಿಟ್ಟಿಸಿದೆ. ಸಂಘಟನೆ ತುಂಬ ದುರ್ಬಲವಾಗಿದ್ದು, ರಣೋತ್ಸಾಹದಿಂದಲೇ ಪ್ರವೇಶ ಮಾಡಬೇಕಿದೆ.ರಜನಿಯನ್ನು ಬಿಜೆಪಿಗೆ ಕರೆತಂದು, ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಿದರೆ… ಈ ಸಾಧ್ಯತೆ ಬಗ್ಗೆ ಈಗ ಷಾ-ಮೋದಿ ಜೋಡಿ ತಲೆ ಕೆಡಿಸಿಕೊಂಡಿದೆ. ರಜನಿಗೆ ‘ಸ್ಟಾರ್​ಗಿರಿ’ ಇದ್ದು, ಅವರನ್ನು ಪಕ್ಷಕ್ಕೆ ಕರೆತಂದರೆ ತ.ನಾಡಿನಲ್ಲಿ ನೆಲೆ ಕಂಡುಕೊಳ್ಳಬಹುದೆಂಬ ಚಿಂತನೆ ಪಕ್ಷವಲಯದಲ್ಲಿದೆ. ಇದಕ್ಕೆ ರಜನಿ ಹೇಗೆ ಸ್ಪಂದಿಸಲಿದ್ದಾರೆ ಎಂಬುದು ರಹಸ್ಯವಾದರೂ ಕ್ಷಿಪ್ರ ಬೆಳವಣಿಗೆಯಲ್ಲಿ ಕಮಲದ ಕೈ ಹಿಡಿದರೂ ಅಚ್ಚರಿಯೇನಿಲ್ಲ. ಹಾಗೇನಾದರೂ ಆದಲ್ಲಿ, ರಾಜಕೀಯ ಸಮೀಕರಣ ತಿರುವುಮುರುವು ಆಗುವುದಂತೂ ಖಚಿತ. ತಮಿಳುನಾಡಿನ ರಾಜಕೀಯ ಸಿದ್ಧಾಂತಗಳು ಬಿಜೆಪಿ ಪಾಲಿಗೆ ಅಡ್ಡಿಯಾಗಿವೆ. ದ್ರಾವಿಡ ಆಂದೋಲನದ ಭೂಮಿಯಲ್ಲಿ ‘ಹಿಂದುತ್ವ’ದ ಬೀಜ ಮೊಳಕೆಯೊಡೆಯುವುದು ಕಷ್ಟಕರ. ಅದೇನಿದ್ದರೂ, ಬಿಜೆಪಿ ಪಾಲಿಗೆ ತಮಿಳುನಾಡು ಎಂಟ್ರಿ ಮಾಡಲು ಈಗ ಸೂಕ್ತ ಕಾಲ.

ಅಮ್ಮನಿಲ್ಲದ ಮನೆ

ಜಯಲಲಿತಾ ನಿಧನದ ಆಘಾತದಿಂದ ಎಐಎಡಿಎಂಕೆ ಇನ್ನೂ ಹೊರಬಂದಿಲ್ಲ. ಜಯಲಲಿತಾ ನಿಧನದ ಬೆನ್ನಲ್ಲೇ, ಶಶಿಕಲಾ ಮುಖ್ಯಮಂತ್ರಿ ಆಗಲು ಯತ್ನಿಸಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಪ್ರತ್ಯೇಕಗೊಂಡಿದ್ದ ಜಯಲಲಿತಾ ಬಣ, ಶಶಿಕಲಾ ಬಣ ಒಗ್ಗೂಡಿವೆ. ಇ.ಕೆ. ಪಳನಿಸ್ವಾಮಿ ಸಿಎಂ ಆಗಿದ್ದು, ಮುಖ್ಯಮಂತ್ರಿಯಾಗಿದ್ದ ಪನ್ನೀರಸೆಲ್ವಂ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಬಹುಮತ ಬಂದಿರುವುದರಿಂದ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಎಐಎಡಿಎಂಕೆ ನಾಯಕತ್ವಕ್ಕೆ ನಿಜವಾದ ಪರೀಕ್ಷೆ ಕಾದಿದೆ. ಪಳನಿ, ಪನ್ನೀರ್ ‘ಮಾಸ್ ಲೀಡರ್’ಗಳಾಗಿ ಹೊರಹೊಮ್ಮಿಲ್ಲ. ಹೀಗಾಗಿ ಪಕ್ಷದ ಭವಿಷ್ಯದ ಬಗ್ಗೆ ಹಲವು ನೆಲೆಗಳಲ್ಲಿ ವಿಶ್ಲೇಷಣೆ ಕೇಳಿಬರುತ್ತಿದ್ದು, ಮುಂದಿನ ದಿನಗಳು ಎಐಎಡಿಎಂಕೆ ಪಾಲಿಗೆ ಸವಾಲಿನಿಂದ ಕೂಡಿರಲಿವೆ ಎಂಬುದಂತೂ ನಿಜ.

ಮೋಡಿ ಮಾಡದ ಕಮಲ್

ನಟ ಕಮಲ್ ಹಾಸನ್ ‘ಮಕ್ಕಳ್ ನೀತಿ ಮೈಯಮ್ ಪಕ್ಷ ಸ್ಥಾಪಿಸಿದ್ದು, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಪಿಣರಾಯಿ ವಿಜಯನ್ ಸೇರಿ ಹಲವು ಮುಖಂಡರನ್ನು ಭೇಟಿಯಾಗಿದ್ದಾರೆ. ಅವರ ಪಕ್ಷ ತ.ನಾಡಿನಲ್ಲಿ ಹೇಳಿಕೊಳ್ಳುವಂಥ ಸಂಚಲನವನ್ನೇನೂ ಸೃಷ್ಟಿಸಿಲ್ಲ. ಪ್ರಮುಖ ನಾಯಕರಾರೂ ಇವರ ಪಕ್ಷದತ್ತ ಹೊರಳಿಲ್ಲ. ರಾಜಕೀಯ ಇನ್ನಿಂಗ್ಸ್​ನ ಆರಂಭದಲ್ಲೇ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾದ ಕಮಲ್ ಈಗ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದ್ದು, ಮುಂದಿನ ನಡೆಯನ್ನು ಇನ್ನೂ ಸ್ಪಷ್ಟಪಡಿಸಿಲ್ಲ.