ತಮಿಳುನಾಡಿಗೆ ಸಾರ್ವಕಾಲಿಕ ದಾಖಲೆ ನೀರು

| ಶಿವಾನಂದ ತಗಡೂರು

ಬೆಂಗಳೂರು: ಹೊಸ ವರ್ಷಕ್ಕೂ ಮುನ್ನವೇ ಕಾವೇರಿ ತಮಿಳುನಾಡಿನ ನೀರಿನ ದಾಹ ಪೂರ್ಣ ನೀಗಿಸಿದ್ದಾಳೆ. ಎರಡು ವರ್ಷದಿಂದ 55 ಟಿಎಂಸಿ ನೀರು ಕೂಡ ಹರಿಸಲು ಸಾಧ್ಯವಾಗದೆ ಪರದಾಡಿದ್ದ ರಾಜ್ಯಕ್ಕೆ ಈ ಬಾರಿ ಭರ್ಜರಿಯಾಗಿಯೇ ಕಾವೇರಿ ಕೃಪೆ ಸಿಕ್ಕಿದೆ.

ಕಾವೇರಿ ನ್ಯಾಯಾಧಿಕರಣ ತೀರ್ಪು ಪ್ರಕಾರ ತಮಿಳುನಾಡಿಗೆ ಪ್ರತಿ ಜಲವರ್ಷದಲ್ಲಿ 177 ಟಿಎಂಸಿ ನೀರು ಹರಿಸಬೇಕು. ಆದರೆ, ಈ ಬಾರಿ ಸಾರ್ವಕಾಲಿಕ ದಾಖಲೆ ಎನ್ನುವಂತೆ 395 ಟಿಎಂಸಿ ನೀರು ರಾಜ್ಯದ ಗಡಿ ಬಿಳಿಗುಂಡ್ಲು ಮಾಪನ ಕೇಂದ್ರವನ್ನುದಾಟಿ ಹೋಗಿದೆ.

ನೀರಿಗೆ ಬರ ಬಂದ ವರ್ಷ: ಕಳೆದ 10 ವರ್ಷಗಳಲ್ಲಿ ನೀರಿನ ಸಮಸ್ಯೆ ಬಾಧಿಸಿದ್ದು 4 ವರ್ಷ ಮಾತ್ರ. 2012-13ರಲ್ಲಿ 100 ಟಿಎಂಸಿ, 2015-16ರಲ್ಲಿ 156.40 ಟಿಎಂಸಿ, 2016-17ರಲ್ಲಿ 69.34 ಟಿಎಂಸಿ ನೀರು ಹರಿಸಲಾಗಿತ್ತು. 2007ರಿಂದ 2012 ತನಕ ಭರ್ಜರಿ ಮಳೆಯಾಗಿದ್ದರಿಂದ 192 ಟಿಎಂಸಿಗೂ ಹೆಚ್ಚು ನೀರುತಮಿಳುನಾಡಿಗೆ ಹರಿಸಲಾಗಿತ್ತು. ಅದನ್ನು ಬಿಟ್ಟರೆ ಈ ಬಾರಿಯೇ ಅತಿ ಹೆಚ್ಚು ನೀರು ಹರಿದು ಹೋಗಿರುವುದು ದಾಖಲೆ.

ಕಾವೇರಿ ಕಣಿವೆಯಲ್ಲಿ 512 ಟಿಎಂಸಿ: ಕಾವೇರಿ ಕಣಿವೆಯ ಕೆಆರ್​ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಿಗೆ ಈ ವರ್ಷ 512 ಟಿಎಂಸಿ ನೀರು ಹರಿದುಬಂದಿದೆ. ತಮಿಳುನಾಡಿಗೆ 395 ಟಿಎಂಸಿ ನೀರು ಹರಿಸಿದ್ದರೆ, ಇನ್ನು 117 ಟಿಎಂಸಿ ನೀರನ್ನು ನಾಡಿನ ಕಾವೇರಿ ಕಣಿವೆ ರೈತರ ಜಮೀನಿಗೆ ಹರಿಸಲಾಗಿದೆ.

2 ತಿಂಗಳಲ್ಲಿ 300 ಟಿಎಂಸಿ: ತಮಿಳುನಾಡಿಗೆ ಜುಲೈನಲ್ಲಿ 124.690 ಟಿಎಂಸಿ ನೀರು ಹರಿದಿದೆ. ಈ ತಿಂಗಳಲ್ಲಿ 31.24 ಟಿಎಂಸಿ ನೀರು ಹರಿಸಿದ್ದರೆ ಸಾಕಿತ್ತು. ಆಗಸ್ಟ್​ನಲ್ಲಿ ಅತಿ ಹೆಚ್ಚು 176 ಟಿಎಂಸಿ ಹರಿದಿದೆ. ಆ ತಿಂಗಳಲ್ಲಿ 45 ಟಿಎಂಸಿ ನೀರು ಹರಿಸಬೇಕಾಗಿತ್ತು. ಈ ಎರಡು ತಿಂಗಳಲ್ಲಿಯೇ 300 ಟಿಎಂಸಿ ನೀರು ಹರಿದಿರುವುದು ಹೊಸ ದಾಖಲೆಯಾಗಿದೆ.

ಜಲಾಶಯಗಳ ಸ್ಥಿತಿ: ಕೆಆರ್​ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ಸದ್ಯ 64 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 52 ಟಿಎಂಸಿ ನೀರಿತ್ತು. ಕೆಆರ್​ಎಸ್​ನಲ್ಲಿ ಅತಿ ಹೆಚ್ಚು 36 ಟಿಎಂಸಿ ನೀರಿದ್ದರೆ, ಹಾರಂಗಿಯಲ್ಲಿ ಅತಿ ಕಡಿಮೆ 1.585 ಟಿಎಂಸಿ ನೀರಿದೆ. ಇನ್ನು ಹೇಮಾವತಿಯಲ್ಲಿ 10.615 ಟಿಎಂಸಿ, ಕಬಿನಿಯಲ್ಲಿ 15 ಟಿಎಂಸಿ ನೀರಿನ ಸಂಗ್ರಹವಿದೆ.