ದ್ರಾವಿಡನಿಧಿ ವಿಧಿವಶ

ಚೆನ್ನೈ: ತೀವ್ರ ಅನಾರೋಗ್ಯಕ್ಕೀಡಾಗಿ ಕಳೆದ ಎರಡು ವಾರಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನೇತಾರ ಎಂ.ಕರುಣಾನಿಧಿ (94) ಮಂಗಳವಾರ ಸಂಜೆ 6.10ಕ್ಕೆ ವಿಧಿವಶರಾಗಿದ್ದಾರೆ. ಆ ಮೂಲಕ ದಕ್ಷಿಣ ಭಾರತದ ದ್ರಾವಿಡ ಚಳವಳಿಯ ಕೊಂಡಿಯೊಂದು ಕಳಚಿದಂತಾಗಿದೆ.

ಕಳೆದ ಕೆಲವು ವರ್ಷ ಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲು ತ್ತಿದ್ದ ಕರುಣಾನಿಧಿ ಅವರನ್ನು, ಮೂತ್ರನಾಳದ ಸೋಂಕು ಮತ್ತು ವಿಪರೀತ ಜ್ವರಕ್ಕೆ ತುತ್ತಾಗಿ ರಕ್ತದೊತ್ತಡ ಕುಸಿದ ಪರಿಣಾಮ ಜು.27ರ ತಡರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಿಢೀರ್ ದಾಖಲಿಸಲಾಗಿತ್ತು. ಸತತ 11 ದಿನ ತೀವ್ರ ನಿಗಾ ಘಟಕದಲ್ಲಿರಿಸಿ ತಜ್ಞ ವೈದ್ಯರು ಚಿಕಿತ್ಸೆ ನೀಡಿದರಾದರೂ ಪ್ರಯೋಜನವಾಗದೆ ಮಂಗಳವಾರ ಸಂಜೆ ಕೊನೆಯುಸಿರೆಳೆದರೆಂದು ವೈದ್ಯರು ತಿಳಿಸಿದ್ದಾರೆ. ಕೊನೆಯ 24 ಗಂಟೆಗಳಿಂದ ಕರುಣಾನಿಧಿ ಆರೋಗ್ಯ ತೀವ್ರ ಹದಗೆಟ್ಟಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ಕಾವೇರಿ ಆಸ್ಪತ್ರೆ ಪ್ರಕಟಣೆ ಹೊರಡಿಸಿತ್ತು. ಬಳಿಕ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್, ಪುತ್ರ ಸ್ಟಾಲಿನ್, ಪುತ್ರಿ ಕನಿಮೊಳಿ ಸಹಿತ ಕುಟುಂಬದ ಪ್ರಮುಖ ಸದಸ್ಯರು ಆಸ್ಪತ್ರೆಯತ್ತ ದೌಡಾಯಿಸಿದರು. ಕರುಣಾ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಮಂಗಳವಾರ ಮಧ್ಯಾಹ್ನದವರೆಗೂ ಇದೇ ಸ್ಥಿತಿ ಇತ್ತು. ಬಳಿಕ ಸಂಜೆ ಮತ್ತೊಂದು ಪ್ರಕಟಣೆ ಹೊರಡಿಸಿದ ವೈದ್ಯರು, ದೇಹದ ಅಂಗಾಂಗಗಳು ಸ್ಪಂದಿಸುತ್ತಿಲ್ಲ ಎಂದು ಘೋಷಿಸಿದರು. ಬಳಿಕ ಕೆಲವೇ ಕ್ಷಣಗಳಲ್ಲಿ ಕರುಣಾ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತ ಆಸ್ಪತ್ರೆಯಿಂದ ಹೊರಬಂದರು. ನಂತರ ಕರುಣಾ ನಿಧನ ಸುದ್ದಿ ಪ್ರಕಟವಾಯಿತು. ಸುದ್ದಿ ತಿಳಿಯುತ್ತಲೇ ಆಸ್ಪತ್ರೆ ಹೊರಗೆ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟಿತು.

ರಾಜ್ಯಾದ್ಯಂತ ಭಾರಿ ಭದ್ರತೆ: ತಮಿಳುನಾಡಿನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಎಂ ಪಳನಿಸ್ವಾಮಿ ಹಾಗೂ ಡಿಎಂಕೆ ನಾಯಕ ಸ್ಟಾಲಿನ್ ಪ್ರತ್ಯೇಕ ಸಭೆ ನಡೆಸಿ ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ರ್ಚಚಿಸಿದ್ದರು. ಸಂಜೆ 6ರ ನಂತರ ಮುಂದಿನ ಆದೇಶದ ವರೆಗೆ ಮದ್ಯದ ಅಂಗಡಿ, ಬಾರ್​ಗಳನ್ನು ಸ್ಥಗಿತಗೊಳಿಸುವಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ಅಂತ್ಯಕ್ರಿಯೆ

ಕಾವೇರಿ ಆಸ್ಪತ್ರೆಯಿಂದ ಕರುಣಾನಿಧಿ ಪಾರ್ಥಿವ ಶರೀರವನ್ನು ಪುತ್ರಿ ಕನಿಮೊಳಿ ನಿವಾಸಕ್ಕೆ ಮೊದಲು ತರಲಾಯಿತು. ಬಳಿಕ ಗೋಪಾಲಪುರ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಬುಧವಾರ ಬೆಳಗ್ಗೆ ಚೆನ್ನೈನ ರಾಜಾಜಿ ಹಾಲ್​ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಅಘೋಷಿತ ಬಂದ್

ಕರುಣಾನಿಧಿ ನಿಧನ ಬೆನ್ನಲ್ಲೇ ಚೆನ್ನೈ ಸಹಿತ ತಮಿಳುನಾಡಿನ ಹಲವೆಡೆ ಅಘೋಷಿತ ಬಂದ್ ವಾತಾವರಣ ನಿರ್ವಣವಾಗಿದೆ. ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದ್ದು, ಪ್ರಮುಖ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಆಸ್ಪತ್ರೆ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ನಿವಾಸಕ್ಕೂ ಭದ್ರತೆ: ಗೋಪಾಲಪುರಂನಲ್ಲಿರುವ ಕರುಣಾನಿಧಿ ವಿವಾಸಕ್ಕೂ ಭದ್ರತೆ ಹೆಚ್ಚಿಸಲಾಗಿದೆ. ಈ ಪ್ರದೇಶಕ್ಕೆ ಸಂರ್ಪಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ತ್ವರಿತ ಕಾರ್ಯ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಾವೇರಿದ ಆಸ್ಪತ್ರೆ: ಕರುಣಾನಿಧಿ ಆರೋಗ್ಯ ಹದಗೆಡುತ್ತಿರುವ ವಿಚಾರ ಹೊರಬೀಳುತ್ತಿದ್ದಂತೆ ಕಾವೇರಿ ಆಸ್ಪತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಕಣ್ಣೀರಿಡುತ್ತ ಆಸ್ಪತ್ರೆಯತ್ತ ಬರತೊಡಗಿದರು. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಆಸ್ಪತ್ರೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಆಸ್ಪತ್ರೆಯ ಮುಖ್ಯದ್ವಾರದಲ್ಲೇ ಬ್ಯಾರಿಕೇಡ್​ಗಳನ್ನು ಹಾಕಿ ಜನರನ್ನು ತಡೆಯಲಾಯಿತು. ಈ ವೇಳೆ ಡಿಎಂಕೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸಣ್ಣ ಘರ್ಷಣೆಯೂ ನಡೆಯಿತು.

ಪ್ರಧಾನಿ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿ ದ್ದಾರೆ. ಕರುಣಾನಿಧಿ ನಿಧನದಿಂದ ತೀವ್ರ ದುಃಖವಾಗಿದೆ. ಅವರು ದೇಶದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಜನನಾಯಕ, ಚಿಂತಕ, ಬರಹಗಾರ ಹಾಗೂ ದಿಟ್ಟ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ. ಬಡವರು ಹಾಗೂ ಹಿಂದುಳಿದವರ ಅಭಿವೃದ್ಧಿಗೆ ಅವರು ಜೀವನವನ್ನೇ ಮುಡಿಪಾಗಿಟ್ಟಿದ್ದರು. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಆಶಯದ ಪರ ಅವರು ನಿಲ್ಲುತ್ತಿದ್ದರು. ಕರುಣಾನಿಧಿ ಕುಟುಂಬ ಅವರ ಬೆಂಬಲಿಗರ ಪರ ನಾನಿದ್ದೇವೆ. ಕರುಣಾನಿಧಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕಾವೇರಿಗಿಲ್ಲ ಕುಸ್ತಿ ಕರುನಾಡಿನ ದೋಸ್ತಿ

ಕಾವೇರಿ ಹೆಸರು ಬಂದಾಗಲೆಲ್ಲ ಕನ್ನಡಿಗರಿಗೆ ತಮಿಳುನಾಡಿನ ಕಡೆಗೆ ದೃಷ್ಟಿ ಹಾಯುತ್ತದೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಶೀತಲ ಸಮರ ಕಣ್ಣ ಮುಂದೆ ಬರುತ್ತದೆ. ನದಿ ನೀರಿಗಿಂತ ಕಾವೇರಿ ವಿವಾದದಲ್ಲಿ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ಇತಿಹಾಸ ನೆನಪಾಗುತ್ತದೆ. ಆದರೆ, ಕರುಣಾನಿಧಿ ಈ ವಿಚಾರದಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಅವರು ಮುಖ್ಯಮಂತ್ರಿ ಆಗಿದ್ದ ಎಲ್ಲ ಅವಧಿಯಲ್ಲೂ ಕಾವೇರಿ ವಿವಾದ ಕಾವೇರದಂತೆ ನೋಡಿಕೊಂಡಿದ್ದರು. ಹಿಂಸೆಗೂ ಆಸ್ಪದವಾಗದಂತೆ ಎಚ್ಚರವಹಿಸುತ್ತಿದ್ದರು. ಕಾವೇರಿ ವಿಚಾರದಲ್ಲಿ ಅವರೇ ಖುದ್ದು ಬೆಂಗಳೂರಿಗೆ ಬಂದು ಇಲ್ಲಿನ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು! ರಾಜ್ಯದ ಜತೆ ಮಾತುಕತೆಗೆ ಆಗಮಿಸಿದ್ದರೂ ಎಂದೂ ಬೇಕಾಬಿಟ್ಟೆ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸುತ್ತಿರಲಿಲ್ಲ. ವೀರೇಂದ್ರ ಪಾಟೀಲರು ಸಿಎಂ ಆಗಿದ್ದಾಗ ಮೈಸೂರಿನ ಲಲಿತ್​ವುಹಲ್ ಪ್ಯಾಲೇಸ್​ಗೆ ಬಂದು ಸಭೆಯಲ್ಲಿ ಭಾಗವಹಿಸಿದ್ದರು. ಇನ್ನು ಕೆಲವು ಬಾರಿ ಬೆಂಗಳೂರಿನ ಸಭೆಯಲ್ಲೂ ಭಾಗವಹಿಸಿದ್ದರು. ರಾಜ್ಯದ ನಾಯಕರಾದ ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಅವರನ್ನು ತಮಿಳುನಾಡಿಗೆ ಕರೆಸಿಕೊಂಡು ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ ಅದೆಷ್ಟೋ ಉದಾಹರಣೆಗಳಿವೆ. ಕಾವೇರಿ ವಿಚಾರದಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಅವರು ರಾಜ್ಯದ ರಾಜಕೀಯ ನೇತಾರರಾದ ಎಚ್.ಡಿ.ದೇವೇಗೌಡ, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಎಸ್.ಎಂ.ಕೃಷ್ಣ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೇದಪ್ಪ ಅವರ ಮನೆಗೆ ಆಗಾಗ್ಗೆ ಬಂದು ಉಭಯಕುಶಲೋಪರಿ ನಡೆಸಿ, ಹೋಗುತ್ತಿದ್ದರು. ಮಗಳು ಸೆಲ್ವಿ ಮನೆ ಬೆಂಗಳೂರಿನಲ್ಲೇ ಇದ್ದುದರಿಂದ ಆಗಾಗ್ಗೆ ಇಲ್ಲಿಗೆ ಬರುತ್ತಿದ್ದರು. ಮಗಳ ತೋಟದ ಮನೆಗೂ ವಿಶ್ರಾಂತಿ ಪಡೆಯಲು ಆಗಮಿಸುತ್ತಿದ್ದರು. ಸಿನಿಮಾ ವಿಚಾರವಾಗಿ ಬೆಂಗಳೂರಿಗೆ ಬಂದಾಗ ವುಡ್​ಲ್ಯಾಂಡ್, ಐಲ್ಯಾಂಡ್ ಹೋಟೆಲ್​ನಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಅಲ್ಲಿಯೇ ಅನೇಕ ಸಿನಿಮಾಗಳಿಗೆ ಸ್ಕ್ರಿಪ್ಟ್ ಕೂಡ ಬರೆಯುತ್ತಿದ್ದರು. ಅವರ ಕಾದಂಬರಿಗಳಿಗೆ ಕೃಷ್ಣರಾಜಸಾಗರ ಸ್ಪೂರ್ತಿಯ ಸೆಲೆಯಾಗಿತ್ತಂತೆ!!

ರಾಜ್ ಅಭಿಮಾನಿ

ಕನ್ನಡದ ಮೇರುನಟ ಡಾ.ರಾಜ್​ಕುಮಾರ್ ಅವರ ಅಭಿಮಾನಿಯಾಗಿದ್ದ ಕರುಣಾನಿಧಿಯವರು ಬೆಂಗಳೂರಿಗೆ ಬಂದಾಗ ರಾಜ್​ಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದರು. ಡಾ. ರಾಜ್​ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದಾಗ ಅವರ ಬಿಡುಗಡೆಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದರು. ಕರ್ನಾಟಕದಲ್ಲಿ ತಿರುವಳ್ಳುವರ್ ಹಾಗೂ ತಮಿಳುನಾಡಿನಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣ ನನೆಗುದಿಗೆ ಬಿದ್ದಿದ್ದವು. ಇದರಿಂದ ಉಭಯ ರಾಜ್ಯಗಳಲ್ಲಿ ವಿವಾದ ಭುಗಿಲೆದ್ದಿತ್ತು. ಅನೇಕ ವರ್ಷಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣಕ್ಕೆ ಕರುಣಾನಿಧಿ ಮುಖ್ಯಮಂತ್ರಿಯಾದಾಗ ಮುಕ್ತಿ ಸಿಕ್ಕಿತು. ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ ತಮಿಳುನಾಡಿಗೆ ತೆರಳಿ ಸರ್ವಜ್ಞನ ಪ್ರತಿಮೆ ಉದ್ಘಾಟಿಸಿದರೆ, ಬೆಂಗಳೂರಿನ ಹಲಸೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಕರುಣಾನಿಧಿ ಅನಾವರಣಗೊಳಿಸಿ ಸೌಹಾರ್ದತೆಗೆ ದಾರಿ ದೀಪವಾದರು. ಕರ್ನಾಟಕದ ಬಗ್ಗೆ ಕರುಣಾನಿಧಿ ಅವರಿಗೆ ಎಲ್ಲಿಲ್ಲದ ಪ್ರೀತಿ, ಗೌರವವಿತ್ತು.

ಧೀಮಂತ ನಾಯಕನನ್ನು ದೇಶ ಕಳೆದುಕೊಂಡಿದೆ. ಈ ದಿನ ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಿದ್ದೇನೆ. ನಾನು ಪ್ರಧಾನಮಂತ್ರಿ ಆಗಬೇಕಾದರೆ ಕರುಣಾನಿಧಿ ಅವರ ಪಾತ್ರ ಬಹಳ ದೊಡ್ಡದು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

 


ಚನ್ನೈನಲ್ಲಿ ಸರ್ವಜ್ಞ ಪ್ರತಿಮೆ ಮತ್ತು ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅವರ ಸಹಕಾರ ಮರೆಯಲಾರೆ. ಎರಡು ರಾಜ್ಯಗಳ ಬೆಸುಗೆಗೆ ಪ್ರಯತ್ನ ಪಟ್ಟಿದ್ದರು. ತಮಿಳುನಾಡಿನ ಅಸ್ಮಿತೆಯ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

 


ಕರುಣಾನಿಧಿ ಸಾವಿನಿಂದ ಅತೀವ ದುಃಖವಾಗಿದೆ. ಸಾರ್ವಜನಿಕ ಜೀವನಕ್ಕೆ ನಾಮವಾಚಕದಂತೆ ಬದುಕಿದ್ದರು. ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದ ನಾಯಕನನ್ನು ಕಳೆದುಕೊಂಡ ದುಃಖದಲ್ಲಿ ದೇಶವಿದೆ.

| ರಾಮನಾಥ ಕೋವಿಂದ ರಾಷ್ಟ್ರಪತಿ

 

 


ಹಲವು ಬಾರಿ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ನನಗೆ ಮನವರಿಕೆ ಮಾಡಿಕೊಡುತ್ತಿದ್ದರು. ಅವರ ರಾಜಕೀಯ ಸಿದ್ಧಾಂತ ನಮಗೆಲ್ಲರಿಗೂ ಮಾದರಿ. ತಮಿಳುನಾಡು ಒಬ್ಬ ದಾರ್ಶನಿಕ ನಾಯಕನನ್ನು ಕಳೆದುಕೊಂಡಿದೆ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

 


ತಮಿಳರ ಪ್ರೀತಿ ಪಾತ್ರರಾಗಿದ್ದ ಕರುಣಾನಿಧಿ ತಮಿಳು ರಾಜಕೀಯವನ್ನು 6 ದಶಕ ಆಳಿದರು. ದೇಶವು ಇಂದು ಉತ್ತಮ ರಾಜಕಾರಣಿಯನ್ನು ಕಳೆದು ಕೊಂಡಿದೆ. ಆ ಕುಟುಂಬದ ದುಃಖದಲ್ಲಿ ಕೋಟ್ಯಂತರ ಜನರು ಭಾಗಿಯಾಗಿದ್ದಾರೆ.

| ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ

 


ರಾಜ್ಯದಲ್ಲೂ ಶೋಕಾಚರಣೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನಕ್ಕೆ ಸಂತಾಪ ಸೂಚಿಸಿರುವ ಕರ್ನಾಟಕ ಸರ್ಕಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ. ಮಂಗಳವಾರ ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸದಂತೆ ಸೂಚನೆ ನೀಡಿದೆ. ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲೂ ಸಹ ಸೂಚನೆ ನೀಡಲಾಗಿದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಇರುವುದಿಲ್ಲ. ಕೇಂದ್ರ ಸರ್ಕಾರ ಕೂಡ ಒಂದು ದಿನದ ಶೋಕಾಚರಣೆ ಘೋಷಿಸಿದೆ.

6 ದಶಕಗಳಿಂದ ಶಾಸಕ

# ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿ.

# 1969ರ ಫೆ. 10ರಿಂದ 1971ರ ಜ. 4.

# 1971ರ ಮಾರ್ಚ್ 15ರಿಂದ 1976ರ ಜ. 31

# 1989ರ ಜ. 27ರಿಂದ 1991ರ ಜ.30

# 1996ರ ಮೇ 13ರಿಂದ 2001ರ ಮೇ 13

# 2006ರ ಮೇ 13ರಿಂದ 2011ರ ಮೇ 15

# ತಮಿಳುನಾಡಿನ ರಾಜಕಾರಣ ಮತ್ತು ಸಿನಿಮಾ ರಂಗದ ದಿಗ್ಗಜ ಕರುಣಾನಿಧಿ ಕಲೈಜ್ಞರ್ ಎಂದೇ ಹೆಸರುವಾಸಿ. ಮೂಲತಃ ಚಿತ್ರ ಸಾಹಿತಿ, ಗೀತರಚನೆಕಾರ.

# ಕರುಣಾಗೆ ಮೂವರು ಪತ್ನಿಯರು ಪದ್ಮಾವತಿ ಅಮ್ಮಾಳ್, ದಯಾಳು ಅಮ್ಮಾಳ್, ರಾಜಥಿ ಅಮ್ಮಾಳ್. ಮಕ್ಕಳು ಮುತ್ತು, ಅಳಗಿರಿ, ಸ್ಟಾಲಿನ್, ತಮಿಳರಸು, ಸೆಲ್ವಿ, ಕನಿಮೋಳಿ

ಸಮಾಧಿ ಸ್ಥಳ ಎಲ್ಲಿ?

ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್, ಮಾಜಿ ಸಿಎಂ ಜಯಲಲಿತಾ, ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ ಸಮಾಧಿಯನ್ನು ಮರೀನಾ ಬೀಚ್​ನಲ್ಲಿ ನಿರ್ವಿುಸಲಾಗಿದೆ. ಅದೇ ರೀತಿ ಕರುಣಾನಿಧಿ ಸಮಾಧಿಯನ್ನು ಇಲ್ಲೇ ನಿರ್ವಿುಸಬೇಕು ಎಂದು ಹಲವು ನಾಯಕರು ಆಗ್ರಹಿಸಿದ್ದರು. ಅಣ್ಣಾದೊರೈ ಸ್ಮಾರಕ ಪಕ್ಕದಲ್ಲೇ ಕರುಣಾನಿಧಿ ಸಮಾಧಿ ಸ್ಥಾಪಿಸಲು ಡಿಎಂಕೆ ನಾಯಕ ಮುರುಗದೊರೈ ಸಿಎಂಗೆ ಮನವಿ ಮಾಡಿದ್ದರು. ಆದರೆ ತಮಿಳುನಾಡು ಸರ್ಕಾರ ಇದನ್ನು ತಿರಸ್ಕರಿಸಿದೆ. ಮರೀನಾ ಬೀಚ್​ನಲ್ಲಿ ಸಮಾಧಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಈಗ ಇಲ್ಲಿ ಮತ್ತೊಂದು ಸಮಾಧಿ ಇಲ್ಲವೇ ಸ್ಮಾರಕ ಸ್ಥಾಪನೆಗೆ ಅವಕಾಶ ನೀಡಿದರೆ ಕಾನೂನು ತೊಡಕು ಎದುರಾಗುತ್ತದೆ ಎಂದು ತಮಿಳುನಾಡಿನ ರಾಜ್ಯಪಾಲರು ಹೇಳಿದ್ದಾರೆ. ಮರೀನಾ ಬೀಚ್ ಬದಲು ಗಣೇಶಮಂಟಪ ಬಳಿ ಸ್ಥಳ ನೀಡುವುದಾಗಿ ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *