ವಿಂಗ್​ ಕಮಾಂಡರ್​ ಅಭಿನಂದನ್​ಗೆ ಪರಮವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಮನವಿ

ನವದೆಹಲಿ: ಪಾಕಿಸ್ತಾನದ ಎಫ್​-16 ವಿಮಾನವನ್ನು ಹೊಡೆದುರುಳಿಸುವ ಮೂಲಕ ಅಪ್ರತಿಮ ಶೌರ್ಯ ಮೆರೆದ ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಗೆ ಪರಮವೀರ ಚಕ್ರ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಮನವಿ ಮಾಡಿದ್ದಾರೆ.

ಪಾಕಿಸ್ತಾನದ ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸುವ ಮೂಲಕ ಅಭಿನಂದನ್​ ಅಪ್ರತಿಮ ಶೌರ್ಯ ಮೆರೆದಿದ್ದಾರೆ. ಅವರು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಅದ್ಭುತ ಮಾನಸಿಕ ಸಮತೋಲನ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದಾರೆ. ಇವರ ಈ ಗುಣಗಳು ದೇಶದ ಕೋಟ್ಯಂತರ ಜನರ ಹೃದಯವನ್ನು ಕದ್ದಿದೆ. ಭಾರತೀಯ ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರ ನೀಡಬೇಕು ಎಂದು ಕೋರಿ ಪಳನಿಸ್ವಾಮಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದ ವೇಳೆ ಮನವಿ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಾಕೋಟ್​ ಬಳಿ ಜೈಷ್​ ಉಗ್ರರ ನೆಲೆಯ ಮೇಲೆ ಭಾರತೀಯ ವಾಯುಪಡೆಯ ವಿಮಾನಗಳು ದಾಳಿ ಮಾಡಿದ ನಂತರ ಪಾಕ್​ ಯುದ್ಧ ವಿಮಾನಗಳು ನಮ್ಮ ವಾಯುಗಡಿ ದಾಟಿ ಬಂದು ದಾಳಿ ಮಾಡಲು ಪ್ರಯತ್ನಿಸಿದ್ದವು. ಈ ಸಂದರ್ಭದಲ್ಲಿ ಪಾಕ್​ ವಿಮಾನಗಳನ್ನು ಹಿಂಭಾಲಿಸಿ ಹೋದ ಅಭಿನಂದನ್​ ಎಫ್​-16 ವಿಮಾನವನ್ನು ಹೊಡೆದುರುಳಿಸಿದ್ದರು. ಈ ಪ್ರಯತ್ನದಲ್ಲಿ ಅವರ ವಿಮಾನ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಪತನವಾಗಿತ್ತು. ನಂತರ ಪಾಕ್​ ಸೇನೆ ಅವರನ್ನು ಬಂಧಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಕಾರಣ ಪಾಕಿಸ್ತಾನ ಸರ್ಕಾರ 2 ದಿನಗಳ ಬಳಿಕ ಅಭಿನಂದನ್​ ಅವರನ್ನು ಬಿಡುಗಡೆ ಮಾಡಿತ್ತು. (ಏಜೆನ್ಸೀಸ್​)