ಚಿಕ್ಕಮಗಳೂರು: ತಾಲೂಕಿನ ಕೆ.ಆರ್.ಪೇಟೆ ಸಮೀಪದ ಕಂಚೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಶುಕ್ರವಾರ ತಮಿಳುನಾಡು ಮೂಲದ ಕಾರ್ಮಿಕ ಶ್ರೀಧರ್ ಮೃತಪಟ್ಟಿದ್ದಾನೆ.
ಕಂಚೇನಹಳ್ಳಿ ಗ್ರಾಮದ ರಮೇಶ್ ಎಂಬುವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಒಂಟಿ ಸಲಗ ದಾಳಿ ಮಾಡಿದೆ. ಆಗ ತಾನೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ. ಆದರೆ ಶ್ರೀಧರ್ ಆನೆ ಬರುತ್ತಿದ್ದ ಕಡೆಗೆ ಓಡಿದ್ದರಿಂದ ಆನೆಗೆ ಸಿಕ್ಕಿಕೊಂಡಿದ್ದಾರೆ. ಹೀಗೆ ಆನೆ ದಾರಿಗೆ ಅಡ್ಡಸಿಕ್ಕ ಶ್ರೀಧರ್ ಅವರನ್ನು ಆನೆ ತುಳಿದು ಸಾಯಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶ್ರೀಧರ್ ಮೂಲತಃ ತಮಿಳುನಾಡು ಮೂಲದವರಾಗಿದ್ದು, ಕೂಲಿ ಕೆಲಸ ಅರಸಿ ಕಾಫಿನಾಡಿಗೆ ಬಂದಿದ್ದರು. ಶ್ರೀಧರ್ ತನ್ನ ಕುಟುಂಬದೊಂದಿಗೆ ತಾಲೂಕಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದರು. ಮೃತರಿಗೆ ಪತ್ನಿ, ಐದು ಮಂದಿ ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.
