ತಾಂಬಾ ಗ್ರಾಪಂಗೆ ಮಹಿಳೆಯರ ಮುತ್ತಿಗೆ

ತಾಂಬಾ: ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ 8ನೇ ವಾರ್ಡ್ ಮಹಿಳೆಯರು, ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯಿತಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿ ಗ್ರಾಪಂ ಸದಸ್ಯರು ಹಾಗೂ ಪಿಡಿಒ ವಿರುದ್ಧ ಘೋಷಣೆ ಕೂಗಿದರು.
ಮುಖಂಡ ನಾಗೇಶ ಬಂಕಲಗಿ ಮಾತನಾಡಿ, ಹಲವಾರು ದಿನಗಳಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. 1 ಕೊಡ ನೀರಿಗಾಗಿ 2 ಕಿ.ಮೀ. ವರೆಗೆ ನಡೆಯಬೇಕು. ಗ್ರಾಮದಲ್ಲಿರುವ ಕುಡಿಯುವ ನೀರಿನ ಮೂಲಗಳು ಬತ್ತಿದ್ದು ಇಡಿ ದಿವಸ ನೀರಿಗಾಗಿ ಅಲೆದಾಡುವಂತಾಗಿದೆ ಎಂದು ಗ್ರಾಪಂ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು.
ಮಹಾದೇವಿ ಮಠ, ಗುರುಬಾಯಿ ಹೊನ್ನಳ್ಳಿ, ಸುನಂದಾ ಕಾಬನೂರ, ದಾನಮ್ಮ ನಾವಿ, ಗಂಗವ್ವ ಪತ್ತಾರ, ಶಾರದಾ ನಾವಿ, ಅಂಬವ್ವ ನಾವಿ, ಕಸ್ತೂರಿ ಬ್ಯಾಕೋಡ, ಶಿವಮ್ಮ ಆಸಂಗಿ, ಶಂಕ್ರಮ್ಮ ಮಠ, ಜೈನಾ ಮೋಮಿನ ಇತರರು ಇದ್ದರು.

ಇಂಡಿ ತಾಲೂಕಿನ ಗೂಗಿಹಾಳ ಕೆರೆಯಿಂದ ಶೀಘ್ರ ತಾಂಬಾ ಹಾಗೂ ಸುತ್ತಲಿನ ವಿವಿಧ ಗ್ರಾಮಗಳಿಗೆ ನೀರು ಪೂರೈಸಲಾಗುವುದು. ಜನತೆ ಆತಂಕಪಡುವ ಅವಶ್ಯಕತೆ ಇಲ್ಲ.
ಎಂ.ಸಿ. ಮನಗೂಳಿ, ತೋಟಗಾರಿಕೆ ಸಚಿವ

ಈ ಬಾರಿ ಮಳೆ ಕೊರತೆ ಕಾರಣ ಗೂಗಿಹಾಳ ಕೆರೆಯಲ್ಲಿ ನೀರಿಲ್ಲ. ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ನಲ್ಲಿ ನೀರಿಲ್ಲ. ಈ ಕುರಿತು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾವುದೇ ರೀತಿಯಲ್ಲಿ ಗ್ರಾಮಕ್ಕೆ ಅನ್ಯಾಯವಾದರೆ ನಾನು ಗ್ರಾಮದ ಮಹಿಳೆಯರು ಮತ್ತು ಸಾರ್ವಜನಿಕರ ಪರ ಪ್ರತಿಭಟನೆ ಮಾಡುತ್ತೇನೆ.
ಜಗದೇವಿ ಬಾಗಲಕೋಟ, ತಾಂಬಾ ಗ್ರಾಪಂ ಅಧ್ಯಕ್ಷೆ