ವಿಜಯವಾಣಿ ಸಂದರ್ಶನದಲ್ಲಿ ನಟರಾದ ಪುನೀತ್​, ಯಶ್​ ಬಗ್ಗೆ ನಟಿ ತಮನ್ನಾ ಹೇಳಿದ್ದೇನು?

ಭಾರತೀಯ ಚಿತ್ರರಂಗದಲ್ಲಿ ತಮನ್ನಾ ಭಾಟಿಯಾ ದೊಡ್ಡಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೊಸ ಬಗೆಯ ಪಾತ್ರಗಳು ಅವರನ್ನು ಅರಸಿಬರುತ್ತಿವೆ. ಚಂದನವನದಲ್ಲಿ ಅವರು ನಾಯಕಿಯಾಗಿ ನಟಿಸಿಲ್ಲವಾದರೂ ಐಟಂ ಡಾನ್ಸ್ ಮತ್ತು ‘ಬಾಹುಬಲಿ’ಯಂತಹ ಸಿನಿಮಾಗಳ ಮೂಲಕ ಕರುನಾಡ ಜನತೆಗೆ ಅವರು ಪರಿಚಿತ. ಇತ್ತೀಚೆಗೆ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಿದ್ದ ತಮನ್ನಾ ವಿಜಯವಾಣಿ ಜತೆ ಮಾತನಾಡಿದರು.

# ಸ್ಯಾಂಡಲ್​ವುಡ್​ನಲ್ಲಿ ನೀವು ನಾಯಕಿಯಾಗಿ ಯಾವಾಗ ಎಂಟ್ರಿ ನೀಡುತ್ತೀರಿ? ಪುನೀತ್​ರಾಜ್​ಕುಮಾರ್ ಜತೆ ನಟಿಸುತ್ತೀರಿ ಎಂಬ ಸುದ್ದಿ ಈಚೆಗೆ ಹರಿದಾಡಿತ್ತು…

ಅನೇಕ ಬಾರಿ ಈ ಪ್ರಶ್ನೆ ನನಗೆ ಎದುರಾಗಿದೆ. ಸದ್ಯ ತಮಿಳು, ತೆಲುಗಿನಲ್ಲೇ ಸಿಕ್ಕಾಪಟ್ಟೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಇದರ ಮಧ್ಯೆ ಕನ್ನಡ ಚಿತ್ರರಂಗಕ್ಕೆ ಬರಬೇಕು ಎಂಬ ಆಸೆಯೂ ಇದೆ. ಇದುವರೆಗೂ ಎರಡು ಕನ್ನಡ ಹಾಡುಗಳಲ್ಲಿ ನೃತ್ಯ ಮಾಡಿದ್ದೇನೆ. ಕೇವಲ ನೃತ್ಯ ಮಾಡುವುದರಿಂದ ಕನ್ನಡ ಚಿತ್ರದಲ್ಲಿ ನಟಿಸಿದಷ್ಟು ಅನುಭವ ದೊರೆಯುವುದಿಲ್ಲ. ಆದರೆ, ಸ್ಯಾಂಡಲ್​ವುಡ್​ನಿಂದ ಯಾವುದೇ ಆಫರ್ ಇಲ್ಲಿಯವರೆಗೂ ಬಂದಿಲ್ಲ! ಬಂದಿದ್ದರೆ ಖಂಡಿತವಾಗಿಯೂ ನಾನು ನಿರಾಕರಿಸುತ್ತಿರಲಿಲ್ಲ. ಪುನೀತ್ ರಾಜ್​ಕುಮಾರ್ ಅವರನ್ನು ನಾನು ಭೇಟಿಯಾಗಿದ್ದೇನೆ, ಮಾತುಕತೆ ನಡೆಸಿದ್ದೇನೆ. ಪುನೀತ್ ಅವರು ಕನ್ನಡ ಚಿತ್ರರಂಗದ ಸೂಪರ್​ಸ್ಟಾರ್ ಆಗಿದ್ದರೂ, ತುಂಬ ಸರಳ ವ್ಯಕ್ತಿ.

# ‘ಕೆಜಿಎಫ್’ ಸಿನಿಮಾ ದೊಡ್ಡಮಟ್ಟದ ಯಶಸ್ಸು ಕಂಡಿದೆ. ನೀವು ಅದರ ಭಾಗವಾಗಿದ್ದಕ್ಕೆ ಏನನ್ನಿಸುತ್ತಿದೆ?

‘ಕೆಜಿಎಫ್’ನಲ್ಲಿ ನಾನು ನಟಿಸಿದ್ದ ಹಾಡು ಹಿಟ್ ಆಗಿರುವುದಕ್ಕೆ ಖುಷಿ ಇದೆ. ಕನ್ನಡ ಮಾತ್ರವಲ್ಲದೆ ಹಿಂದಿ ಸೇರಿ ಎಲ್ಲ ಭಾಷೆಗಳಲ್ಲೂ ‘ಕೆಜಿಎಫ್’ಗೆ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿತ್ತು. ವಾಣಿಜ್ಯ ದೃಷ್ಟಿಯಿಂದಲೂ ಹಾಗೂ ವಿಮರ್ಶಾತ್ಮಕ ದೃಷ್ಟಿಯಿಂದಲೂ ‘ಕೆಜಿಎಫ್’ ಹಿಟ್ ಆಗಿತ್ತು. ದೊಡ್ಡ ಬಜೆಟ್​ನ ಚಿತ್ರಕ್ಕೆ ಈ ರೀತಿ ಪ್ರತಿಕ್ರಿಯೆ ದೊರೆತಿದ್ದು ಸಂತೋಷ ನೀಡಿತು. ‘ಕೆಜಿಎಫ್’ ಮೊದಲ ಭಾಗಕ್ಕಿಂತಲೂ 2ನೇ ಭಾಗ ಅದ್ಭುತವಾಗಿರಲಿದೆ ಎಂಬ ಮಾತು ಕೇಳಿದ್ದೇನೆ. ಆ ಚಿತ್ರದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಯಶ್ ಅದ್ಭುತ ನಟ. ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಅಭಿನಯಿಸಬಲ್ಲ ಸಾಮರ್ಥ್ಯವನ್ನು ಯಶ್ ಹೊಂದಿದ್ದಾರೆ.

# ಸದ್ಯ ನಿಮಗೆ ವಿಭಿನ್ನವಾದ ಪಾತ್ರಗಳೇ ಹೆಚ್ಚು ಬರುತ್ತಿವೆಯಲ್ಲವೇ?

‘ಬಾಹುಬಲಿ’ ಚಿತ್ರದ ನಂತರದಲ್ಲಿ ನಿರ್ದೇಶಕರು ನನಗೆ ಸವಾಲುಗಳುಳ್ಳ ಹೊಸ ಪಾತ್ರಗಳನ್ನು ನೀಡುತ್ತಿದ್ದಾರೆ. ಯಾರೂ ಸಾಮಾನ್ಯವಾದ ಪಾತ್ರ ಬಯಸುತ್ತಿಲ್ಲ. ‘ಎಫ್2’ನಂಥ ಹಾಸ್ಯಭರಿತ ಚಿತ್ರ, ಆಕ್ಷನ್ ಚಿತ್ರ, ನೈಜ ಘಟನೆ ಆಧಾರಿತ ಚಿತ್ರ ಹೀಗೆ ಹಲವು ರೀತಿಯ ಸಿನಿಮಾಗಳು ಅರಸಿ ಬರುತ್ತಿವೆ. ವೃತ್ತಿಜೀವನದ ಆರಂಭದಿಂದ ಇಂತಹ ಪಾತ್ರ ದೊರಕಿರಲಿಲ್ಲ. ಈಗ ಸಿಗುತ್ತಿವೆ, ಜನರೂ ಇಷ್ಟ ಪಡುತ್ತಿದ್ದಾರೆ.

# ನಿಮ್ಮ ನಟನೆಯ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ..

ರಾಯಲ ಸೀಮಾ ಭಾಗದ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನಚರಿತ್ರೆ ಆಧಾರಿತ ಚಿತ್ರವಾಗಿದೆ. ನಿರ್ದೇಶಕ ಸುರೇಂದರ್ ರೆಡ್ಡಿ ಜತೆ ಈ ಹಿಂದೆ ಕಾರ್ಯನಿರ್ವಹಿಸಿದ್ದೇನೆ. ಇದೊಂದು ಅದ್ಭುತ ಚಿತ್ರವಾಗಿರಲಿದೆ. ನನ್ನ ಪಾತ್ರ ಹಿಂದಿನ ಎಲ್ಲ ಚಿತ್ರಗಳಿಗೆ ಹೋಲಿಸಿದರೆ ವಿಭಿನ್ನವಾಗಿರಲಿದೆ. ವಿಶೇಷ ಕಾಳಜಿ ವಹಿಸಿ ನನ್ನ ಕಾಸ್ಟೂ ್ಯå್ಗಳನ್ನು ಸಿದ್ಧಪಡಿಸಲಾಗಿದೆ. ನಟ ಚಿರಂಜೀವಿ ಅವರ ಮಗಳು ಸುಶ್ಮಿತಾ ವಿನ್ಯಾಸಗೊಳಿಸಿರುವ ಉಡುಗೆಗಳು ಹೊಸ ಲೋಕವನ್ನೇ ಸೃಷ್ಟಿಸಿವೆ. ಬಾಹುಬಲಿಯಂತೆ ಈ ಚಿತ್ರವೂ ಜನರನ್ನು ಆಕರ್ಷಿಸಲಿದೆ ಎನ್ನುವ ವಿಶ್ವಾಸವಿದೆ. ಜನರು ನೈಜ ಘಟನೆಯಾಧಾರಿತ ಚಿತ್ರಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಇತಿಹಾಸ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.

One Reply to “ವಿಜಯವಾಣಿ ಸಂದರ್ಶನದಲ್ಲಿ ನಟರಾದ ಪುನೀತ್​, ಯಶ್​ ಬಗ್ಗೆ ನಟಿ ತಮನ್ನಾ ಹೇಳಿದ್ದೇನು?”

Comments are closed.