ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ?

ಸಂತೋಷ ದೇಶಪಾಂಡೆ ಬಾಗಲಕೋಟೆ: ತಾಲೂಕು ಪಂಚಾಯಿತಿ ಕ್ಷೀಪ್ರ ರಾಜಕೀಯ ಬೆಳವಣಿಗೆ ಸಾಕ್ಷಿಯಾಗುತ್ತಿದೆ. ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸ್ವಪಕ್ಷಿಯರೇ ಮುಂದಾಗಿದ್ದು, ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಿದ್ಧರಾಗಿದ್ದಾರೆ.

ತಾಲೂಕು ಪಂಚಾಯಿತಿಯ 11 ಕಾಂಗ್ರೆಸ್ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಶಾಂತರಾಮ ಕೆ.ಜಿ. ಅವರನ್ನು ಭೇಟಿ ಮಾಡಿದ್ದು, ಅವಿಶ್ವಾಸ ಮಂಡನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ತಾಪಂ ಅಧ್ಯಕ್ಷ ಚನ್ನನಗೌಡ ಪರನ ಗೌಡರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸರ್ವಾಧಿ ಕಾರಿಯಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಮನವಿ ಮಾಡಿ ದರೂ ಪ್ರಯೋಜನವಾಗಿಲ್ಲ. ಇದೇ ಧೋರಣೆ ಮುಂದು ವರಿಸಿದ್ದಾರೆ. ಸಭೆಯಲ್ಲಿ ಏಕಪಕ್ಷಿಯವಾಗಿ ನಿರ್ಣಯ ತೆಗೆದುಕೊಳ್ಳುವುದು, ಇಲಾಖೆ ಅಧಿಕಾರಿಗಳಿಗೆ ಕಿರುಕುಳ ನೀಡುವುದು, ಗ್ರಾಪಂಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.

2017-18ನೇ ಸಾಲಿನ 1 ಕೋಟಿ ರೂ. ಅನುದಾನದಲ್ಲಿ ಅನೇಕ ಕಾಮಗಾರಿಗಳು ಆಗಿಲ್ಲ. 35 ಲಕ್ಷ ರೂ. ಲ್ಯಾಪ್ಸ್ ಆಗಿದೆ. ಕರ್ತವ್ಯ ನಿರ್ವಹಣೆಯೂ ಸರಿಯಿಲ್ಲ. ಹೀಗಾಗಿ ಅವಿಶ್ವಾಸ ಮಂಡನೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷರ ವಿರುದ್ಧ ಸ್ವಪಕ್ಷಿಯರು ಬಂಡಾಯ ಎದ್ದಿರುವುದು ತಾಲೂಕು ಪಂಚಾಯಿತಿಯಲ್ಲಿ ರಾಜಕೀಯ ಚದುರಂಗದಾಟಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿದ್ದರೂ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಅಸಲಿ ಕಥೆ ಏನು ?: 18 ಸ್ಥಾನ ಹೊಂದಿರುವ ತಾಪಂನಲ್ಲಿ ಕಾಂಗ್ರೆಸ್ 11, ಬಿಜೆಪಿಯ 7 ಸದಸ್ಯರಿದ್ದಾರೆ. ಪಕ್ಷದ ಆಂತರಿಕ ಒಪ್ಪಂದ ಪ್ರಕಾರ ಅಧ್ಯಕ್ಷ ಚನ್ನನಗೌಡ ಪರನಗೌಡರ, ಉಪಾಧ್ಯಕ್ಷ ಸಲೀಂ ಅಲ್ಲಾಬಕ್ಷ ಶೇಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಉಪಾಧ್ಯಕ್ಷ ಶೇಖ್ ರಾಜೀನಾಮೆ ನೀಡಿದ್ದಾರೆ. ಆದರೆ, ಪಕ್ಷದ ವರಿಷ್ಠರ ಸೂಚನೆಗೂ ಜಗ್ಗದ ಅಧ್ಯಕ್ಷ ಪರನಗೌಡರ ರಾಜೀನಾಮೆ ಕೊಡಲು ಸಿದ್ಧರಿಲ್ಲ. ನಾಲ್ಕೈದು ತಿಂಗಳ ಬಳಿಕ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಸದಸ್ಯರು ಶತಾಯಗತಾಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಣತೊಟ್ಟಿದ್ದು, ಅವಿಶ್ವಾಸ ನಿರ್ಣಯ ಅಸ್ತ್ರ ಪ್ರಯೋಗಿಸಿದ್ದಾರೆ. ಸೆಪ್ಟಂಬರ್ 29ರಂದು ನಡೆದ ಸಾಮಾನ್ಯ ಸಭೆಯಲ್ಲೂ ಅಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ ಸ್ಪೋಟಗೊಂಡಿತ್ತು. ಸ್ವಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರು ಸಭೆಗೆ ಗೈರು ಉಳಿದ ಪರಿಣಾಮ ಕೋರಂ ಭರ್ತಿಯಾಗದೇ ಸಭೆ ಮುಂದೂಡಲಾಗಿತ್ತು.

ನಿಯಮದಲ್ಲೇನಿದೆ ?: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಅಧ್ಯಕ್ಷ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಒಟ್ಟು ಸದಸ್ಯರ ಪೈಕಿ ಅರ್ಧದಷ್ಟು ಸದಸ್ಯರು ಅವಿಶ್ವಾಸ ಗೊತ್ತುವಳಿ ನೋಟಿಸ್​ಗೆ ಸಹಿ ಹಾಕಿರಬೇಕು. ಮೂರನೇ ಎರಡರಷ್ಟು ಸದಸ್ಯರು ಬಹುಮತದಿಂದ ಗೊತ್ತುವಳಿ ಅಂಗೀಕರಿಸಿದರೆ ಅಧ್ಯಕ್ಷರು ಅಧಿಕಾರ ಕಳೆದುಕೊಳ್ಳುತ್ತಾರೆ.

ಅಧ್ಯಕ್ಷರ ನಡೆ ನಿಗೂಢ: ಜಿಲ್ಲಾಧಿಕಾರಿಗಳು ಅವಿಶ್ವಾಸ ಮಂಡನೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ದಿನಾಂಕ ಪ್ರಕಟಿಸುವ ಮುನ್ನ ಅಧ್ಯಕ್ಷ ಸ್ಥಾನಕ್ಕೆ ಚನ್ನನಗೌಡ ಪರನಗೌಡರ ರಾಜೀನಾಮೆ ನೀಡಿದರೆ ಅವಿಶ್ವಾಸ ಮಂಡನೆ ಸಭೆ ನಡೆಯುವ ಅವಶ್ಯಕತೆ ಇರುವುದಿಲ್ಲ. ಆದರೆ,ಅವರು ತಮ್ಮ ಮುಂದಿನ ನಡೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಅಧಿಕಾರ ವಹಿಸಿಕೊಳ್ಳುವ ಮುನ್ನ ಪಕ್ಷದ ಮುಖಂಡರು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದು ಅವಧಿ ನಿಗದಿ ಮಾಡಿದ್ದರು. ಪಕ್ಷದ ವರಿಷ್ಠರು ಸೂಚನೆ ಮೇರೆಗೆ ನಾನು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಆದರೆ, ಅಧ್ಯಕ್ಷ ಚನ್ನನಗೌಡ ಪರನಗೌಡರ ರಾಜೀನಾಮೆ ನೀಡುತ್ತಿಲ್ಲ. ಇದರಿಂದ ಬಿಕ್ಕಟ್ಟು ಎದುರಾಗಿದೆ. ಅನಿವಾರ್ಯವಾಗಿ ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ.

| ಸಲೀಂ ಅಲ್ಲಾಬಕ್ಷ ಶೇಖ್ ಸದಸ್ಯ, ಮಾಜಿ ಉಪಾಧ್ಯಕ್ಷ

ಪಕ್ಷದ ಸದಸ್ಯರು ಅವಿಶ್ವಾಸ ಮಂಡನೆಗೆ ಮನವಿ ಮಾಡಿರುವುದು ಇದೀಗ ಗೊತ್ತಾಗಿದೆ. ಸದಸ್ಯರ ಆರೋಪಗಳಲ್ಲಿ ಸತ್ಯಾಂಶವಿಲ್ಲ. ನನ್ನ ವಿಚಾರ ಈಗಾಗಲೇ ಪಕ್ಷದ ಮುಖಂಡರಿಗೆ ಹೇಳಿದ್ದೇನೆ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದೇನೆ.

| ಚನ್ನನಗೌಡ ಪರನಗೌಡರ ತಾಪಂ ಅಧ್ಯಕ್ಷ