ಕೊಪ್ಪಳ: ತಾಲೂಕು, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಎಲ್ಲರೂ ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದ ತಡಗೋಡೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಪೌಂಡ್ ಕಾಮಗಾರಿಗೆ 50 ಲಕ್ಷ ರೂ. ಅನುದಾನ ಬಂದಿದೆ. ಇನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ತಡೆಗೋಡೆ ಹಾಗೂ ಪ್ರೇಕ್ಷಕರ ಗ್ಯಾಲರಿ ಅಭಿವೃದ್ಧಿಗೆ ಎರಡು ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಎರಡೂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಕ್ರೀಡಾಂಗಣ ಅಭಿವೃದ್ಧಿಗೆ ಬೇಕಾಗುವ ಅನುದಾನ ತರಲು ಬದ್ಧ. ನಮ್ಮ ಯುವಕರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗಿಯಾಗಿ ಪದಕ ಗೆಲ್ಲಬೇಕು. ಜಿಮ್ ನಿರ್ಮಿಸುತ್ತಿದ್ದು, ಉಪಕರಣ ಖರೀದಿಗೆ 1.5ಕೋಟಿ ರೂ. ಅನುದಾನ ಕೊಡಿಸಲಾಗುವುದು. ಕ್ರಿಕೆಟ್ ಮಂಡಳಿಯವರು ವರ್ಷವಿಡೀ ಕ್ರೀಡಾಂಗಣ ಬಳಸಬೇಡಿ. ಇತರ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡಿ ಎಂದು ಸಲಹೆ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕ್ರೀಡಾಂಗಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಂಗಣ್ಣ ಕರಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾ$್ಯಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ನಾನು ಈ ಬಗ್ಗೆ ಮನವಿ ಮಾಡಿ ಅನುದಾನ ಬಿಡುಡಗಡೆಗೆ ಶ್ರಮಿಸುವೆ. ಮನಸ್ಸಿನಷ್ಟೇ ದೇಹದ ಆರೋಗ್ಯ ಮುಖ್ಯ. ಎಲ್ಲರೂ ಕ್ರೀಡೆಗಳಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ತಾಲೂಕು, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಉತ್ತಮ ಕೆಲಸ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಸಂಸದ ರಾಜಶೇಖರ ಹಿಟ್ನಾಳ ಆದ್ಯತೆ ನೀಡಲಿ. ನಗರದ ಹೃದಯ ಭಾಗದಲ್ಲಿ ಕ್ರೀಡಾಂಗಣ ಇದ್ದು ಸೌಂದರ್ಯಿಕರಣಗೊಳಿಸಬೇಕು. ಅನೇಕ ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಕ್ರೀಡೆಗೆ ಆದ್ಯತೆ ನೀಡಬೇಕು. ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ ಎಂದರು.
ನಗರಸಭೆ ಸದಸ್ಯರಾದ ಮಹೇಂದ್ರ ಚೋಪ್ರಾ, ವಿರುಪಾಕ್ಷಪ್ಪ ಮೋರನಾಳ, ಮುತ್ತುರಾಜ ಕುಷ್ಟಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಾರಡ್ಡಿ ಗಲಬಿ, ಎಂ.ಕಾಟನ್ ಪಾಷಾ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಮಲ್ಲು ಪೂಜಾರ ಇತರರಿದ್ದರು.
ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ
ತಾಲೂಕು ಕ್ರೀಡಾಂಗಣ ಸುತ್ತಲೂ ಶಾಲಾ&ಕಾಲೇಜುಗಳಿವೆ. ಆದರೆ, ಆಟವಾಡಲು ಮೈದಾನ ನೀಡುವುದಿಲ್ಲ. ಒಳಾಂಗಣ ಕ್ರೀಡೆಗಳನ್ನು ಕಾಲೇಜು ಆವರಣದಲ್ಲಿ ಆಡುವುದರಿಂದ ತರಗತಿಗಳಿಗೆ ತೊಂದರೆ ಆಗಲಿದೆ. ತಾಲೂಕು ಕ್ರೀಡಾಂಗಣದಲ್ಲಿ ಆಡಲು ಅವಕಾಶ ನೀಡುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಪ್ರಾಚಾರ್ಯ ತಿಮ್ಮಾರಡ್ಡಿ ಮೇಟಿ ಮನವಿ ಸಲ್ಲಿಸಿದರು.