More

  ಉಪಯೋಗಕ್ಕೆ ಬಾರದಾಗಿದೆ ಗಂಗಾವತಿ ತಾಲೂಕು ಕ್ರೀಡಾಂಗಣ

  ವೀರಾಪುರ ಕೃಷ್ಣ ಗಂಗಾವತಿ

  ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಚನ್ನಬಸವಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ಕಾಯಂ ಸಿಬ್ಬಂದಿ ಕೊರತೆಯಿದ್ದು, ಅನುದಾನ ಬಳಕೆಯಾದರೂ ಉಪಯೋಗಕ್ಕಿಲ್ಲವಾಗಿದೆ.

  ನಗರದ ಕನಕಗಿರಿ ರಸ್ತೆಯ ಎಪಿಎಂಸಿ ಪ್ರಾಂಗಣದಲ್ಲಿ ತಾಲೂಕು ಕ್ರೀಡಾಂಗಣಕ್ಕಾಗಿ 40, 460 ಚ.ಮೀ ಜಾಗ ನೀಡಿದ್ದು, 2006ರಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ ನಿರ್ವಹಣೆಯಲ್ಲಿರುವ ಕ್ರೀಡಾಂಗಣದಲ್ಲಿ ಆಡಳಿತ ಕಚೇರಿ, ಪ್ರೇಕ್ಷಕರ ಗ್ಯಾಲರಿ, ವ್ಯಾಯಾಮ ಶಾಲೆ, ಯೋಗ ಕೇಂದ್ರ, ಶಟಲ್ ಬ್ಯಾಡ್ಮಿಂಟನ್, ಬಾಸ್ಕೇಟ್ ಬಾಲ್ ಮತ್ತು ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿದೆ. ಕ್ರೀಡಾಂಗಣಕ್ಕೆ ಇದುವರೆಗೂ ತಾಲೂಕು ಅಧಿಕಾರಿಯನ್ನು ನಿಯೋಜಿಸಿಲ್ಲ. ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಇಬ್ಬರು ದಿನಗೂಲಿ ನೌಕರರಷ್ಟೇ ಇಲ್ಲಿದ್ದಾರೆ. ಪೂರ್ಣ ಪ್ರಮಾಣದ ಅಧಿಕಾರವಿಲ್ಲ. ಕಚೇರಿ ಸಹಾಯಕ, ಪರಿಚಾರಕ, ಕಾವಲುಗಾರ ಎಲ್ಲವೂ ಕಡಿಮೆ ಸಂಬಳದಲ್ಲಿ ಇಬ್ಬರೇ ನಿರ್ವಹಿಸಬೇಕು. ಧ್ವಜಾರೋಹಣ ಸಂದರ್ಭ ಮಾತ್ರ ಸ್ವಚ್ಛವಾಗುವ ಕ್ರೀಡಾಂಗಣವು ಪಡ್ಡೆ ಹುಡುಗರ ಅಡ್ಡೆಯಾಗಿದೆ. ಹೈಮಾಸ್ಟ್ ಲೈಟ್‌ಗಳಿಗೂ ಕಲ್ಲು ಬಿದ್ದಿವೆ.

  ಉಪಯೋಗಕ್ಕೆ ಬಾರದಾಗಿದೆ ಗಂಗಾವತಿ ತಾಲೂಕು ಕ್ರೀಡಾಂಗಣ
  ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಬಳಕೆಯಾಗದೇ ಬೀಗ ಹಾಕಿರುವುದು.

  ಹೆಚ್ಚು ಅನುದಾನ ಬಳಕೆ
  ಯೋಗ ಕೇಂದ್ರಕ್ಕಾಗಿ ಐದು ಲಕ್ಷ ರೂ. ಬಳಸಲಾಗಿದ್ದು, ಪತಂಜಲಿ ಯೋಗ ಸಮಿತಿ ನಿರ್ವಹಣೆಯಿಂದ ಉಪಯೋಗಕ್ಕಿದೆ. ಸ್ವಿಮ್ಮಿಂಗ್ ಪೂಲ್‌ಗಾಗಿ ಎರಡು ಹಂತದಲ್ಲಿ 34 ಲಕ್ಷ ರೂ.ಖರ್ಚು ಮಾಡಿದ್ದರೂ ಉದ್ಘಾಟನೆ ಸಂದರ್ಭ ಈಜಿದ್ದು ಹೊರತುಪಡಿಸಿದರೆ ಇಂದಿಗೂ ಉಪಯೋಗವಿಲ್ಲ. ಐದು ಲಕ್ಷ ರೂ.ವೆಚ್ಚದಲ್ಲಿರುವ ವ್ಯಾಯಾಮ ಶಾಲೆಗೆ ಆರಂಭದಿಂದಲೂ ಬೀಗ ಜಡಿಯಲಾಗಿದೆ. 90.77 ಲಕ್ಷ ರೂ.ವೆಚ್ಚದ ಒಳಾಂಗಣ ಕ್ರೀಡಾಂಗಣದಲ್ಲಿ ಸ್ವಚ್ಛ ಮಾಡುವರಿಲ್ಲ. ಬಳಕೆಗೆ ಮುನ್ನವೇ ನೆಲಹಾಸು ಮತ್ತು ವಿದ್ಯುತ್ತೀಕರಣಕ್ಕೆ 19.30 ಲಕ್ಷ ರೂ. ಬಳಕೆ ಮಾಡಲಾಗಿದೆ. 12 ಲಕ್ಷ ರೂ.ವೆಚ್ಚದ ಬಾಸ್ಕೆಟ್ ಬಾಲ್ ಗೋಲ್‌ನಲ್ಲಿ ಇದುವರಿಗೂ ಒಂದು ಗೋಲು ಬಿದ್ದಿಲ್ಲ. ವಿದ್ಯುತ್ ಸ್ವಿಚ್ ಬೋರ್ಡ್, ಕುಡಿವ ನೀರಿನ ಪೈಪ್‌ಲೈನ್ ಮತ್ತು ಪಂಪ್‌ಸೆಟ್ ಅನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ನಿರ್ವಹಣೆ ಕೊರತೆಯಿಂದ ಅನುದಾನ ಪೋಲಾಗುತ್ತಿದ್ದು, ಕ್ರೀಡಾಪಟುಗಳಿಗೆ ಅನುಕೂಲವಿಲ್ಲ.

  ಸಿಬ್ಬಂದಿ ಕೊರತೆ
  ತಾಲೂಕು ಕ್ರೀಡಾಂಗಣಕ್ಕೆ ಯುವಜನ ಸಬಲೀಕರಣ ಅಧಿಕಾರಿ, ಕಚೇರಿ ಸಹಾಯಕ, ಪರಿಚಾರಕ ಸೇರಿ ಒಂಬತ್ತು ಸಿಬ್ಬಂದಿ ನಿಯೋಜಿಸಬೇಕು. ಕ್ರೀಡಾಂಗಣ ನಿರ್ಮಾಣದಿಂದಲೂ ಇಬ್ಬರೇ ನಿರ್ವಹಿಸುತ್ತಿದ್ದು, ತಾಲೂಕು ಅಧಿಕಾರಿ ಎರವಲು ಸೇವೆ ಮೇಲೆ ನಿಯೋಜಿಸಲಾಗಿತ್ತು. ಎರಡು ವರ್ಷದಿಂದ ತಾಲೂಕು ಅಧಿಕಾರಿ ಬದಲಾದ ಬಗ್ಗೆ ಜಿಲ್ಲಾ ಉಪನಿರ್ದೇಶಕರ ಗಮನಕ್ಕಿಲ್ಲ. ಇಂದಿಗೂ ಅವರೇ ನಿರ್ವಹಿಸುತ್ತಿದ್ದಾರೆ ಎಂದು ಹೇಳುತ್ತಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿ. ಕ್ರೀಡಾಂಗಣದ ಮಾಹಿತಿ ನೀಡಲು ಅವರು ತಡವರಿಸಿದ್ದು, ಸರಿ ಮಾಡೋಣ ಬಿಡಿ ಎಂದು ಹಾರಿಕೆ ಉತ್ತರ ನೀಡುವ ಮೂಲ ಜಾರಿಕೊಂಡರು. ರಾಜಕಾರಣಿಗಳಿಗಾಗಿ ಹೆಲಿಪ್ಯಾಡ್ ನಿರ್ಮಿಸಿದ್ದು ನಿರ್ವಹಣೆಯಿಲ್ಲ. ರಾತ್ರಿಯಾಗುತ್ತಿದ್ದಂತೆ ಕುಡುಕರ ಗುಂಪು ಕ್ರೀಡಾಂಗಣದಲ್ಲಿ ಜಮಾಯಿಸುತ್ತಿದ್ದು, ಭದ್ರತೆಯಿಲ್ಲದಂತಾಗಿದೆ. ಆವರಣದ ಸುತ್ತಲೂ ಮುಳ್ಳು ಕಂಟಿ ಬೆಳೆದಿದ್ದು, ವಿಷ ಜಂತುಗಳ ಕಾಟ ವಿಪರೀತವಾಗಿದೆ.

  ಉಪಯೋಗಕ್ಕೆ ಬಾರದಾಗಿದೆ ಗಂಗಾವತಿ ತಾಲೂಕು ಕ್ರೀಡಾಂಗಣ
  ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಸ್ವಿಮ್ಮಿಂಗ್ ಪೂಲ್ ಹಾಳಾಗಿರುವುದು.

  ಖಾಸಗಿ ಸಂಸ್ಥೆಗಳಲ್ಲಿ ಅವಲಂಬನೆ
  ತಾಲೂಕಿನಲ್ಲಿ ಕ್ರೀಡಾಪಟುಗಳ ಹೆಚ್ಚಿದ್ದರೂ ಸೌಲಭ್ಯದ ಕೊರತೆಯಿಂದ ಖಾಸಗಿ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಕ್ರಿಕೆಟ್, ದಸರಾ ಮತ್ತು ಸರ್ಕಾರಿ ಶಾಲೆಗಳ ಕ್ರೀಡಾ ಕೂಟ ಹೊರತುಪಡಿಸಿ ಬೇರೆ ಕ್ರೀಡೆ ನಡೆಯಲ್ಲ. ಹ್ಯಾಂಡ್ ಬಾಲ್, ಪೆಂಕಾಕ್‌ಸಿಲತ್, ವಾಲಿಬಾಲ್, ಖೋಖೋ, ಕರಾಟೆ, ಶಟಲ್ ಬ್ಯಾಡ್ಮಿಂಟನ್, ಕಬ್ಬಡ್ಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಕ್ರೀಡಾ ತಂಡಗಳಿದ್ದರೂ ಇಲಾಖೆ ಪ್ರೋತ್ಸಾಹಿಸುತ್ತಿಲ್ಲ. ಸರ್ಕಾರ ನಿರ್ಲಕ್ಷ್ಯತನಕ್ಕೆ ಬೇಸತ್ತ ಕ್ರೀಡಾಪಟುಗಳು ಮತ್ತು ಪಾಲಕರು ಖಾಸಗಿ ಸಂಸ್ಥೆಗಳ ಮೊರೆ ಹೋಗಿದ್ದು, ಐದಕ್ಕೂ ಹೆಚ್ಚು ತರಬೇತಿ ಕೇಂದ್ರಗಳು ಆರಂಭವಾಗಿವೆ.

  ಉಪಯೋಗಕ್ಕೆ ಬಾರದಾಗಿದೆ ಗಂಗಾವತಿ ತಾಲೂಕು ಕ್ರೀಡಾಂಗಣ
  ಬಳಕೆಯಿಲ್ಲದ ಬಾಸ್ಕೇಟ್ ಬಾಲ್ ಕೋರ್ಟ್.

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿದ್ದರೂ ಕ್ರೀಡಾಂಗಣಕ್ಕೆ ಅಧಿಕಾರಿ ಮತ್ತು ತರಬೇತುದಾರರನ್ನು ನಿಯೋಜಿಸಿಲ್ಲ. ನಿರ್ವಹಣೆ ಕೊರತೆಯಿಂದ ಕ್ರೀಡಾಂಗಣ ಉಪಯೋಗಕ್ಕಿಲ್ಲದಂತಾಗಿದೆ.
  ಯಂಕಪ್ಪ ತಳವಾರ, ದೈಹಿಕ ಶಿಕ್ಷಕ ಹಾಗೂ ರಾಜ್ಯಮಟ್ಟದ ಖೋಖೋ ತರಬೇತುದಾರ

  ಸರ್ಕಾರದಿಂದ ತಾಲೂಕು ಕ್ರೀಡಾಂಗಣ ನಿರ್ವಹಣೆ ಅಸಾಧ್ಯ. ಖಾಸಗಿ ಸಂಸ್ಥೆಗಳಿಗೆ ಬಾಡಿಗೆ ರೂಪದಲ್ಲಿ ನೀಡಿದರೆ ಅನುಕೂಲವಾಗಲಿದ್ದು, ಬಡ ಕ್ರೀಡಾಪಟುಗಳಿಗೂ ಗುಣಮಟ್ಟದ ತರಬೇತು ನೀಡಲು ಸಾಧ್ಯವಾಗಲಿವೆ.
  ಯಂಕಪ್ಪ ಕಟ್ಟಿಮನಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಮತ್ತು ಗಂಗಾವತಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ

  ತಾಲೂಕು ಕ್ರೀಡಾಂಗಣದಲ್ಲಿರುವ ಈಜುಕೋಳ ನಿರ್ವಹಣೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸೌಲಭ್ಯ ಕಲ್ಪಿಸಲಾಗುವುದು. ತಾಲೂಕು ಅಧಿಕಾರಿಗಳು ಇಲ್ಲದಿರುವುದು ಗಮನಕ್ಕಿಲ್ಲ.
  ಕೆ.ಗ್ರೇಸಿ, ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕೊಪ್ಪಳ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts