ಹೆಚ್ಚಿನ ಪರಿಹಾರಕ್ಕೆ ರೈತರ ಆಗ್ರಹ

ಕಡೂರು: ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ನಿರ್ಮಾಣ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಮಾತನಾಡಿ, ಬೈಪಾಸ್ ರಸ್ತೆ ನಿರ್ವಿುಸಲು ಗುರುತಿಸಿರುವ ಜಾಗದಲ್ಲಿ ಅಡಕೆ, ತೆಂಗು ಹಾಗೂ ವಿವಿಧ ಬೆಳೆಗಳನ್ನು ಒಳಗೊಂಡ ಭೂಮಿ ಕಳೆದುಕೊಳ್ಳಲಿದ್ದಾರೆ. ಬಹಳ ವರ್ಷಗಳಿಂದ ಇಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಅಭಿವೃದ್ಧಿ ನೆಪದಲ್ಲಿ ಅವರಿಗೆ ಭೂಮಿ ಇಲ್ಲವಾಗಿ ಇತ್ತ ಪರಿಹಾರದ ಮೊತ್ತವೂ ಕಡಿಮೆಯಾದರೆ ಬದುಕು ಬರಡಾಗುತ್ತದೆ. ಹೆದ್ದಾರಿ ಪ್ರಾಧಿಕಾರವು 1956 ಮತ್ತು 2013ರ ಕಾಯ್ದೆಯ ನಿಯಮಗಳನ್ನು ಸರಿಯಾಗಿ ಪಾಲಿಸದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಪ್ರತಿ ಗುಂಟೆಗೆ ಮೂಲ ಬೆಲೆ ಕನಿಷ್ಠ 2 ಲಕ್ಷ ರೂ. ನೀಡಬೇಕು. ವಿದ್ಯುತ್ ಕಂಬಗಳನ್ನು ನೆಡುವಾಗ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ತೆಂಗಿನಮರಕ್ಕೆ ಕನಿಷ್ಠ 18 ಸಾವಿರ, ಅಡಕೆ ಮರಕ್ಕೆ 10 ಸಾವಿರ, ಕೊಳವೆ ಬಾವಿಗೆ 3 ಲಕ್ಷ ರೂ. ಪರಿಹಾರ ನೀಡಬೇಕು. ಮನೆ, ನಿವೇಶನ ಕಳೆದುಕೊಳ್ಳುವ ರೈತರಿಗೆ ಪರ್ಯಾಯವಾಗಿ ನಿವೇಶನ, ಮನೆ ನೀಡಬೇಕು ಎಂದು ಆಗ್ರಹಿಸಿದರು.

ಕಡೂರು ಅಕ್ಕಪ್ಪದ ಗ್ರಾಮಗಳಲ್ಲಿ ರಸ್ತೆಗೆ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಸಂಖ್ಯೆ 210 ಇದೆ. 286 ಎಕರೆ ಭೂಮಿ ಕಳೆದುಕೊಳ್ಳಲಿದ್ದಾರೆ. ರಾಜ್ಯದ ಇತರೆ ಭಾಗಗಳಲ್ಲಿ ಒಂದು ಎಕರೆ ಭೂಮಿಗೆ 50 ಲಕ್ಷ ರೂ. ಪರಿಹಾರ ನೀಡಿರುವ ದಾಖಲೆಗಳು ನಮ್ಮ ಬಳಿ ಇವೆ. ಇವುಗಳನ್ನು ಆಧಾರವಾಗಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಹಾಸನ ಸಂಸದ ಎಚ್.ಡಿ.ದೇವೇಗೌಡ ಮತ್ತು ಮಾಜಿ ಶಾಸಕ ವೈಎಸ್​ವಿ ದತ್ತ ಬೆಂಬಲ ವ್ಯಕ್ತಪಡಿಸಿದ್ದಾರೆ.