More

    ಆರೋಗ್ಯ ಇಲಾಖೆ ಅವ್ಯವಸ್ಥೆ ; ಶಿರಾ ತಾಪಂ ಸಭೆಯಲ್ಲೇ ಕಣ್ಣೀರಿಟ್ಟ ಸದಸ್ಯೆ ತಿಪ್ಪಮ್ಮ

    ಶಿರಾ : ತಾಲೂಕಿನಾದ್ಯಂತ ಆಂಬುಲೆನ್ಸ್ ವ್ಯವಸ್ಥೆ ಸರಿಯಿಲ್ಲ. ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈವರೆಗೆ ಆಂಬುಲೆನ್ಸ್ ನೀಡಿಲ್ಲ. ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುವ ಬದಲು ಉದ್ಧಟತನ ತೋರುವ ಸಿಬ್ಬಂದಿ… ಬಳಕೆಗೆ ಬಾರದ ಸ್ಕಾೃನಿಂಗ್ ಯಂತ್ರ… ಹೀಗೆ ಅನಾರೋಗ್ಯಕ್ಕೆ ತುತ್ತಾಗಿರುವ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ತಾಪಂ ಸಭೆಯಲ್ಲಿ ಅನಾವರಣಗೊಂಡಿತು.

    ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ 5 ವರ್ಷಜಿ ಸ್ಕ್ಯಾನಿಂಗ್ ಯಂತ್ರವನ್ನು ಕುಂಟುನೆಪವೊಡ್ಡಿ ಮೂಲೆಗಿಡಲಾಗಿದೆ. ಆಂಬುಲೆನ್ಸ್‌ಗಳಿಲ್ಲದೆ ತುರ್ತು ಚಿಕಿತ್ಸೆ ದೊರೆಯದೆ ಸಾಕಷ್ಟು ಸಾವುನೋವು ಸಂಭವಿಸುತ್ತಿವೆ. ತಾಲೂಕು ಆಡಳಿತ ನಿರ್ಲಕ್ಷೃ ತಾಳಿದೆ ಎಂದು ಪಕ್ಷಾತೀತವಾಗಿ ಸದಸ್ಯರು ಆರೋಗ್ಯ ಇಲಾಖೆ ವಿರುದ್ಧ ದೂರಿದರು.

    ಅಲ್ಲದೆ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿ ಬೇಜಾವಾಬ್ದಾರಿ ಬಗ್ಗೆ ಕುಪಿತಗೊಂಡ ಸಂಸದ ಎ.ನಾರಾಯಣಸ್ವಾಮಿ ಇಂತಹ ಅಸಮರ್ಥರನ್ನು ಇಲ್ಲಿಂದ ಬೇರೆಡೆ ವರ್ಗಾವಣೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ, ತಾಲೂಕು ವೈದ್ಯಾಧಿಕಾರಿ ಪರವಾಗಿ ಬಂದ ಅಧಿಕಾರಿಗಳು ನೀಡಿದ ಅಸಮರ್ಪಕ ಮಾಹಿತಿಗೆ ರೋಸಿಹೋದ ಸಂಸದರು, ಸಭೆಯಿಂದಲೇ ಅಧಿಕಾರಿಗಳನ್ನು ಆಚೆ ಕಳುಹಿಸಿಬಿಟ್ಟರು.

    ದೊಡ್ಡ ಅಗ್ರಹಾರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 4 ಉಪಕೇಂದ್ರಗಳಿದ್ದು ನರ್ಸ್‌ಗಳನ್ನು ನಿಯೋಜಿಸಬೇಕು. ಶಿರಾ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ರೋಗಿಗಳನ್ನು ವೈದ್ಯಕೀಯ ಸಿಬ್ಬಂದಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸದಸ್ಯ ಪುಟ್ಟರಾಜು ದೂರಿದರು.

    ಸ್ಕ್ಯಾನಿಂಗ್ ಸೆಂಟರ್‌ಗೆ ವಿಕಿರಣ ತಜ್ಞರ ಕೊರತೆಯಿದ್ದು ಸ್ಥಳೀಯ ವೈದ್ಯರು ಪ್ರತೀ ಸ್ಕ್ಯಾನಿಂಗ್‌ಗೆ ಹೆಚ್ಚು ಹಣ ಕೇಳುತ್ತಿದ್ದು ಇಲಾಖೆ ವತಿಯಿಂದ ನೀಡುವ 300 ರೂ., ಸಾಕಾಗುವುದಿಲ್ಲ. ಜತೆಗೆ ಅರಿವಳಿ ತಜ್ಞ ಸ್ತ್ರೀರೋಗ ತಜ್ಞ ಹಾಗೂ ಆಂಬುಲೆನ್ಸ್ ಕೊರತೆಯಿದ್ದು ಶೀಘ್ರವೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಡಾ.ಶ್ರೀನಾಥ್ ಉತ್ತರಿಸಿದರು.

    ಕೃಷಿ ಇಲಾಖೆ ನೀಡುವ ಪ್ಲಾಸ್ಟಿಕ್ ಹೊದಿಕೆ ಕಳಪೆ ಹಾಗೂ ಸರಬರಾಜು ಮಾಡಿದ ಕಂಪನಿಗೆ ತನಿಖೆಗೆ ಒಳಪಡಿಸಿ ಎಂದು ಮತ್ತೊಮ್ಮೆ ತಾಪಂ ಸದಸ್ಯರೆಲ್ಲರೂ ಕೃಷಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

    ಅಧಿಕಾರಿಗಳಿಗೆ ತಾಕೀತು: ಉದ್ಯೋಗ ಖಾತ್ರಿಯೋಜನೆಯಡಿಯಲ್ಲಿ ಶಾಲಾ ಕಾಂಪೌಂಡ್, ಅಂಗನವಾಡಿ ಕಾಂಪೌಂಡ್, ಸರ್ಕಾರಿ ಶಾಲೆಗೆ ಶೌಚಗೃಹ, ಸಿಮೆಂಟ್ ಸ್ಲ್ಯಾಬ್ಸ್, ಸಿಸಿ ರಸ್ತೆ, ಹಲವು ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದ್ದು ಹೆಚ್ಚಿನದಾಗಿ ಎಸ್ಸಿ ಕಾಲನಿ ಹಾಗೂ ಗೊಲ್ಲರಹಟ್ಟಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಆಗಬೇಕೆಂದು ಅಧಿಕಾರಿಗಳಿಗೆ ಸಂಸದ ಎ.ನಾರಾಯಣಸ್ವಾಮಿ ಸೂಚಿಸಿದರು.

    18 ಕೋಟಿ ವಿಮೆ ಮಂಜೂರು : ಶಿರಾ ತಾಲೂಕಿನಾದ್ಯಂತ 8167 ರೈತರು 4 ಕೋಟಿ ಬೆಳೆ ವಿಮೆ ಪಾವತಿಸಿದ್ದು, ಈಗ 18 ಕೋಟಿ ಮಂಜೂರಾಗುವ ಹಂತದಲ್ಲಿದೆ. 2018-19ನೇ ವಾರ್ಷಿಕದ 250 ರೈತರ ಫೋಟೋ ಮಿಸ್ ಮ್ಯಾಚ್ ಆಗಿದ್ದು ಅದನ್ನು ಇನ್ಶುರೆನ್ಸ್ ಕಂಪನಿಗೆ ಪರಿಹರಿಸುವುದಾಗಿ ಸೂಚಿಸಿದ್ದೇವೆ ಎಂದು ತೋಟಗಾರಿಕಾ ಅಧಿಕಾರಿ ಸುಧಾಕರ್ ಸಭೆಗೆ ಮಾಹಿತಿ ನೀಡಿದರು. ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ವಿಧಾನಪರಿಷತ್ ಚಿದಾನಂದ್ ಎಂ ಗೌಡ, ಅಧಿಕಾಗಳಿಗೆ ಖಡಕ್‌ಆಗಿ ಕೆಲಸ ನಿರ್ವಹಿಸಲು ಸೂಚಿಸಿದರು. ತಾಪಂ ಅಧ್ಯಕ್ಷ ಚಂದ್ರಯ್ಯ ಸಭೆಯ ನೇತೃತ್ವವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ ಇದ್ದರು.

    ಸಭೆಯಲ್ಲೇ ಕಣ್ಣೀರಿಟ್ಟ ಸದಸ್ಯೆ : ನನ್ನ ಸೊಸೆ ಹಾಗೂ ಮೊಮ್ಮಗು ಅನಾರೋಗ್ಯದಿಂದ ಟಿ.ಬಿ.ಹಾಸ್ಪಿಟಲ್‌ಗೆ ಚಿಕಿತ್ಸೆಗೆ ಹೋದಾಗ ಸರಿಯಾಗಿ ಚಿಕಿತ್ಸೆ ನೀಡದೆ ಅಥವಾ ಬೇರೆ ಕಡೆ ಚಿಕಿತ್ಸೆ ಪಡೆಯಲು ವೈದ್ಯರು, ಸಿಬ್ಬಂದಿ ಸೂಚಿಸದೆ ನಿರ್ಲಕ್ಷ್ಯ ತೋರಿದ ಪರಿಣಾಮ ತಾಯಿ ಮೃತಪಟ್ಟಿದ್ದು ಮಗು ಈಗ ಅನಾಥವಾಗಿದೆ. ತಾಪಂ ಸದಸ್ಯಳಾದ ನನಗೇ ಈ ಗತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಶಿರಾ ತಾಲೂಕು ಹೊನ್ನಗೊಂಡನಹಳ್ಳಿ ಕ್ಷೇತ್ರದ ಸದಸ್ಯೆ ತಿಪ್ಪಮ್ಮ ಸಭೆಯಲ್ಲಿ ಕಣ್ಣೀರಿಟ್ಟರು. ಬೇಜವಾಬ್ದಾರಿತನ ತೋರಿಸಿದವರು ಯಾರು? ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ವೈದ್ಯಾಧಿಕಾರಿ ಡಾ.ಶ್ರೀನಾಥ್‌ಗೆ ಸಂಸದ ನಾರಾಯಣಸ್ವಾಮಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts