29ರಂದು ತಾಲೂಕು ಸಾಹಿತ್ಯ ಸಮ್ಮೇಳನ


ವಿರಾಜಪೇಟೆ: ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ ವತಿಯಿಂದ ಜು. 29ರಂದು ಅರಮೇರಿ ಕಳಂಚೇರಿ ಮಠದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಠದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ಅಂದು ಬೆಳಗ್ಗೆ 7.30 ಗಂಟೆಗೆ ಧ್ವಜಾರೋಹಣ. 9 ಗಂಟೆಗೆ ವಿರಾಜಪೇಟೆ- ಮಡಿಕೇರಿ ಮುಖ್ಯ ರಸ್ತೆಯಿಂದ ಮಠದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಂತರ 10.30 ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಗಳ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ ಮಾತನಾಡಿದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಸಮಾಜ ಅವರನ್ನು ಗುರುತಿಸುತ್ತದೆ ಎಂದು ಹೇಳಿದರು.

ಮುಖ್ಯ ದ್ವಾರಕ್ಕೆ ಲಿಂಗೈಕ್ಯ ಶಾಂತಮಲ್ಲ ಸ್ವಾಮೀಜಿ ಅವರ ಹೆಸರಿಡುವುದರ ಜತೆಗೆ ಕಾರ್ಗಿಲ್ ಯೋಧ ಪೆಮ್ಮಂಡ ಕಾವೇರಪ್ಪ, ಸ್ವಾತಂತ್ರ್ಯ ಹೋರಾಟಗಾರ ಕುವಲೇರ ಸೂಫಿ ಹಾಗೂ ಜನಪದ ವೀರ ಮಹಿಳೆ ಅಳಮಂಡ ದೊಡ್ಡವ್ವ ಅವರ ಹೆಸರಲ್ಲಿ ದ್ವಾರ ನಿರ್ಮಿಸಲು ನಿರ್ಧರಿಸಲಾಯಿತು.

ಅಲ್ಲದೆ ಪುಸ್ತಕ ಮಳಿಗೆಗೆ ಸಾಹಿತಿ ಪುಗ್ಗೆರ ಕರಂಬಯ್ಯ ಹೆಸರು, ಸಭಾಂಗಣಕ್ಕೆ ಮಹಾಂತ ಸ್ವಾಮೀಜಿ, ಮುಖ್ಯ ವೇದಿಕೆಗೆ ಸೋಮಶೇಖರ ಸ್ವಾಮೀಜಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅರಮೇರಿ ಕಳಂಚೇರಿ ಮಠದ ಸ್ಥಾಪಕ ಗುರುಗಳಾದ ರಾಜಶೇಖರ ಸ್ವಾಮೀಜಿ ಹೆಸರಿಡಲು ತೀರ್ಮಾನಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸ್ವಸಹಾಯ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಸ್ತ್ರೀ ಶಕ್ತಿ ಸಂಘಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳು ಸಮ್ಮೇಳನವನ್ನು ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಮೊಕೋಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಆಲತಂಡ ಸೀತಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ರತಾ ಮೈತಾಳ, ಸೇವಾ ನಿರತೆ ರೀನಾ ಪೂವಣ್ಣ, ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಗಳಾದ ಸುಬ್ರಮಣಿ ಮತ್ತು ರಂಜಿತಾ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ನಳಿನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *