ತಾಲೂಕು ಆಸ್ಪತ್ರೆಗೆ ಶಾಸಕ ಭೇಟಿ, ಪರಿಶೀಲನೆ

ಅಥಣಿ: ಇಲ್ಲಿಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಜತೆಗೆ 100 ಹಾಸಿಗೆ ಇರುವ ಈ ಆಸ್ಪತ್ರೆಯನ್ನು 200ಕ್ಕೆ ಹೆಚ್ಚಿಸಿ ಮೇಲ್ದರ್ಜೆಗೆರಿಸಲು ಆರೋಗ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಮಹೇಶ ಕುಮಠಳ್ಳಿ ಭರವಸೆ ನೀಡಿದ್ದಾರೆ.

ತಾಲೂಕು ಸರ್ಕಾರಿ ಆಸ್ಪತ್ರೆಯ ಸಮಸ್ಯೆ ಕುರಿತು ವಿಜಯವಾಣಿ ಬೆಳಕು ಚೆಲ್ಲಿತ್ತು. ವರದಿಗೆ ಸ್ಪಂದಿಸಿದ ಶಾಸಕ ಕುಮಠಳ್ಳಿ ಭಾನುವಾರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಾಸ್ತವ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಅಥಣಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ಬೆಳವಣಿಗೆಗೆ ಅನುಗುಣವಾಗಿ ಜನರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಜನರು ಹೆಚ್ಚಿನ ಹಣ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಆದ್ದರಿಂದ ಶೀಘ್ರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರೋಗಿಗಳೊಂದಿಗೆ ಮಾತನಾಡಿದ ಶಾಸಕ ಕುಮಠಳ್ಳಿ, ಆಸ್ಪತ್ರೆಯಲ್ಲಿ ದೊರೆಯುವ ಸೌಕರ್ಯಗಳ ಕುರಿತು ಮಾಹಿತಿ ಪಡೆದರು. ವೈದ್ಯಾಧಿಕಾರಿ ಡಾ.ಚಿದಾನಂದ ಮೇತ್ರಿ ಆಸ್ಪತ್ರೆಗೆ ಅವಶ್ಯವಿರುವ ಸೌಕರ್ಯಗಳ ಕುರಿತು ಶಾಸಕರ ಗಮನಕ್ಕೆ ತಂದರು.
ಪ್ರಕಾಶ ನರಟ್ಟಿ, ಅನಿಲ ಸುಣದೋಳಿ, ವಿನಯ ಪಾಟೀಲ, ಬಿ.ಎ.ನೇಮಗೌಡ, ಆರ್.ಬಿ.ಸಜ್ಜನ ಹಾಗೂ ಸಿಬ್ಬಂದಿ ಇದ್ದರು.