ವಿದ್ಯಾರ್ಥಿಗಳಿಗೆ ಗಣಿತ ಭಯ ಹೋಗಲಾಡಿಸಿ

ತಾಳಿಕೋಟೆ: ಗಣಿತ ವಿಷಯದ ಬಗ್ಗೆ ಇರುವ ಭಯ ಹೋಗಲಾಡಿಸಿ ಪ್ರತಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಸಾಮರ್ಥ್ಯವನ್ನು ಗಣಿತ ಶಿಕ್ಷಕರು ಬೆಳೆಸಬೇಕು ಎಂದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ ಸಲಹೆ ನೀಡಿದರು.

ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಮುದ್ದೇಬಿಹಾಳ ತಾಲೂಕು ಮಟ್ಟದ ಗಣಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯಲು ಸಾಧ್ಯವಿರುವ ಮೊದಲ ವಿಷಯವೇ ಗಣಿತವಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ವಿಜಯಪುರದ ಗಣಿತ ಶಿಕ್ಷಕ ಕೆ.ಎಸ್. ಚನ್ನವೀರ ಗಣಿತ ಪಾಸಿಂಗ್ ಪ್ಯಾಕೇಜ್ ಹಾಗೂ ವರ್ಗಕೋಣೆಯ ಸಮಸ್ಯೆಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚೆ ನಡೆಸಿದರು.

ಸಂಸ್ಥೆ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಚಲವಾದಿ, ಮಾಧ್ಯಮಿಕ ಶಾಲೆ ನೌಕರರ ಸಂಘದ ಅಧ್ಯಕ್ಷ ಎಂ.ಜಿ. ಹೊಕ್ರಾಣಿ, ತಾಲೂಕು ಗಣಿತ ವಿಷಯ ವೇದಿಕೆ ಅಧ್ಯಕ್ಷ ಎಸ್.ವೈ. ಪಾಟೀಲ, ಸಂಗನಗೌಡ ಅಸ್ಕಿ (ಹಿರೂರ), ಮುಖ್ಯಶಿಕ್ಷಕ ಸಂತೋಷ ಪವಾರ, ಶಶಿಧರ ಪಾಟೀಲ, ಗುರುರಾಜ ಕುಲಕರ್ಣಿ ಇದ್ದರು. ಗಂಗನಗೌಡ ಜವಳಗೇರಿ ನಿರೂಪಿಸಿದರು. ಬಸವರಾಜ ಚಳ್ಳಗಿ ವಂದಿಸಿದರು.