ಶೀಘ್ರ ಬಯಲು ಶೌಚ ತೆರವುಗೊಳಿಸಿ

ತಾಳಿಕೋಟೆ: ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ದಲಿತ ಕೇರಿಗೆ ಹೊಂದಿಕೊಂಡಿರುವ ಬಯಲು ಶೌಚದಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ತಮದಡ್ಡಿ ಗ್ರಾಮದ ದಲಿತ ಮುಖಂಡರು ಆಗ್ರಹಿಸಿದರು.

ತಮದಡ್ಡಿ ಗ್ರಾಮದ ದಲಿತ ಕೇರಿಗೆ ಹೊಂದಿಕೊಂಡಿರುವ ಗಾಂವಠಾಣ ಜಾಗವನ್ನು ಮಹಿಳೆಯರ ಶೌಚಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಬಯಲು ಶೌಚದಿಂದ ದಲಿತ ಕೇರಿ ಜನರಿಗೆ ತೀವ್ರ ತೊಂದರೆಯಾಗುತ್ತಿದ್ದು, ಮಕ್ಕಳ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೂಡಲೇ ಶೌಚ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗೆ ಮನವಿ ಸಲ್ಲಿಸಿದ್ದೇವು. ಇದರಿಂದ ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ದಲಿತ ಕೇರಿಗೆ ಹೊಂದಿಕೊಂಡಿರುವ ಬಯಲು ಶೌಚಕ್ಕೆ ತಡೆ ನೀಡದಿರಲು ತೀರ್ವನಿಸಿದ್ದು ಖಂಡನೀಯವಾಗಿದ್ದು, ಶಾಸಕರು ದಲಿತರಿಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದರು.

ಸಭೆ ನಡೆಸುವ ಬಗ್ಗೆ ಯಾವ ದಲಿತರಿಗೂ ತಿಳಿಸಿಲ್ಲ. ಕೇವಲ ಸವರ್ಣಿಯರ ಸಭೆ ನಡೆಸುವ ಮೂಲಕ ಶೌಚ ತೆರವುಗೊಳಿಸದಿರುವ ತೀರ್ಮಾನ ಕೈಕೊಳ್ಳುವ ಮೂಲಕ ಸ್ವತಃ ಶಾಸಕರೇ ಸವರ್ಣಿಯರನ್ನು ದಲಿತರ ಮೇಲೆ ಎತ್ತಿ ಕಟ್ಟುತ್ತಿದ್ದಾರೆ. ಬಯಲು ಶೌಚ ನಿಮೂಲನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಮಿಷನ್ ಹಮ್ಮಿಕೊಂಡು ಶ್ರಮಿಸುತ್ತಿದ್ದರೆ, ಅವರದೆ ಪಕ್ಷದ ಶಾಸಕರು ಬಯಲು ಶೌಚ ಪ್ರೋತ್ಸಾಹಿಸುತ್ತಿದ್ದಾರೆ ಎಂದು ದೂರಿದರು.

ಮುಖಂಡರಾದ ಶ್ರೀಕಾಂತ ಚಲವಾದಿ, ದ್ಯಾಮಣ್ಣ ಶಿರೋಳ, ಡಿ.ಸಿ. ಚಲವಾದಿ, ಡಿಎಸ್​ಎಸ್ ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕ ನಾಗೇಶ ಕಟ್ಟಿಮನಿ, ತಾಲೂಕು ಸಂಚಾಲಕ ಕಾಶಿನಾಥ ಕಾರಗನೂರ, ಗುರುಪ್ರಸಾದ ಗೋಟಖಂಡ್ಕಿ, ಪ್ರಭು ಚಲವಾದಿ, ಶಿವಾನಂದ ಬೂದಿಹಾಳ, ದೇವು ಗೋಟಖಂಡ್ಕಿ, ಮಾಂತು ಮೈಲೇಶ್ವರ, ಯಮನಪ್ಪ ನಾಟಿಕಾರ, ಈರಪ್ಪ ಕೂಚಬಾಳ, ಎಸ್.ಟಿ. ಚಲವಾದಿ, ಬಸವರಾಜ ಚಕ್ರವರ್ತಿ, ಬಾಬು ಚಲವಾದಿ ಇತರರು ಇದ್ದರು.

7 ರಂದು ಪ್ರತಿಭಟನೆ: ಶೌಚ ಸಮಸ್ಯೆ ಉಂಟಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ವಣವಾಗಿದ್ದು, ಬಯಲು ಶೌಚ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಮತ್ತು ವಿವಿಧ ದಲಿತರ ಪರ ಸಂಘಟನೆಗಳ ನೇತೃತ್ವದಲ್ಲಿ ಜ. 7ರಂದು ತಾಳಿಕೋಟೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.

Leave a Reply

Your email address will not be published. Required fields are marked *