ಪುರಸಭೆಗೆ ಬೀಗ ಜಡಿದು ಪ್ರತಿಭಟನೆ

ತಾಳಿಕೋಟೆ: ಪಟ್ಟಣದ ವಾರ್ಡ್ ನಂ.11 ಹಾಗೂ 12 ರ ಮಹಲ್ ಗಲ್ಲಿ ಮತ್ತು ಟಿಪ್ಪು ನಗರದಲ್ಲಿ ಚರಂಡಿ ತುಂಬಿ ರಸ್ತೆಗೆ ಹರಿದರೂ ಸ್ವಚ್ಛಗೊಳಿಸುತ್ತಿಲ್ಲ, ವಾರ್ಡ್​ಗಳಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಸಾರ್ವಜನಿಕ ಶೌಚಗೃಹ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಎರಡೂ ವಾರ್ಡ್ ಗಳ ಮಹಿಳೆಯರು ಪುರಸಭೆಗೆ ಬೀಗ ಜಡಿದು ಸೋಮವಾರ ಪ್ರತಿಭಟಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭುಗೌಡ ಮದರಕಲ್ಲ, ಪುರಸಭೆ ಪ್ರಭಾರಿ ವ್ಯವಸ್ಥಾಪಕ ಎಸ್.ಎಸ್. ಇಂಜನಗೇರಿ ಮಹಿಳೆಯರ ಸಮಸ್ಯೆ ಆಲಿಸಿದರು.

ಪ್ರತಿಭಟನಾ ನಿರತ ಮಹಿಳೆಯರು ಮಾತನಾಡಿ, ಮನಿಯಾರ್ ಸರ್ ಮನೆಯಿಂದ ಟಿಪ್ಪು ನಗರದವರೆಗೆ, ಹಂಡೆಭಾಗ ಮನೆಯಿಂದ ಶಹಾಪುರ ಮನೆವರೆಗೆ, ಲಾಹೋರಿ ಮನೆಯಿಂದ ಶಹಾಪುರಿ ಮನೆವರೆಗೆ, ಸಗರಿ ಮನೆಯಿಂದ ಸಾರ್ವಜನಿಕ ಶೌಚಗೃಹದವರೆಗೆ ಕೂಡಲೇ ಚರಂಡಿ ಸ್ವಚ್ಛಗೊಳಿಸಬೇಕು. ಮಹಲ್ ಗಲ್ಲಿ ಮತ್ತು ಟಿಪ್ಪು ನಗರದಲ್ಲಿ ಸಾರ್ವಜನಿಕ ಶೌಚಗೃಹ ಹದಗೆಟ್ಟಿದ್ದನ್ನು ಕೂಡಲೇ ಸರಿಪಡಿಸಬೇಕು. ವಾರ್ಡ್​ಗಳಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭುಗೌಡ ಮದರಕಲ್ಲ ಮಾತನಾಡಿ, ಚರಂಡಿ ಅತಿಕ್ರಮಣ ಮಾಡಿಕೊಂಡಿದ್ದರಿಂದ ಸ್ವಚ್ಛಗೊಳಿಸಲು ಆಗುತ್ತಿಲ್ಲ. ಸಾರ್ವಜನಿಕ ಶೌಚಗೃಹವನ್ನು ಮತ್ತೊಮ್ಮೆ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಲ್ಲದೆ ಮಹಿಳೆಯರೊಂದಿಗೆ ಸದರಿ ವಾರ್ಡ್​ಗಳಲ್ಲಿ ಸಂಚರಿಸಿ ಚರಂಡಿ ಅತಿಕ್ರಮಣ ಕುರಿತು ಮಹಿಳೆಯರಿಗೆ ಮನವರಿಕೆ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಿಳೆಯರು ಚರಂಡಿ ಒತ್ತುವರಿ ತೆರವುಗೊಳಿಸಲು ಸಹಕಾರ ನೀಡುವ ಭರವಸೆ ನೀಡಿದ್ದರಿಂದ ಸ್ಥಳದಲ್ಲಿದ್ದ ಆರೋಗ್ಯ ವಿಭಾಗದ ಸಿಬ್ಬಂದಿ ಎಸ್.ಎ. ಗತ್ತರಗಿ ಅವರಿಗೆ ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ದರು. ನೂರಾರು ಮಹಿಳೆಯರು ಇದ್ದರು.