ಬಸ್ ನಿಲುಗಡೆಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ತಾಳಿಕೋಟೆ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಎಸ್​ವಿಎಂ ಪ್ಯಾರಾ ಮೆಡಿಕಲ್ ಕಾಲೇಜು ಬಳಿ ಬಸ್ ನಿಲುಗಡೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಎಸ್​ವಿಎಂ ಪ್ಯಾರಾ ಮೆಡಿಕಲ್ ಕಾಲೇಜು ಪಟ್ಟಣದಿಂದ 1 ಕಿ.ಮೀ. ದೂರವಿದ್ದು, ನಡೆದುಕೊಂಡು ಹೋಗಲು ಸಮಯ ಹಿಡಿಯುತ್ತದೆ. ಇದರಿಂದ ನಿಗದಿತ ಸಮಯಕ್ಕೆ ಹೋಗಲು ಆಗದೆ ತರಗತಿಗಳನ್ನು ತಪ್ಪಿಸುವಂತಾಗಿದೆ. ಬಸ್ ನಿಲುಗಡೆಗೆ ಆದೇಶವಿದ್ದರೂ ನಿಲ್ಲಿಸುವುದಿಲ್ಲ. ಬಸ್ ಹತ್ತಿದರೆ ನಮ್ಮನ್ನು ಕೆಳಗೆ ಇಳಿಸುತ್ತಾರೆ. ನಾವು ಕಾಲೇಜಿಗೆ ಇಳಿಸಲು ಕೋರಿದರು ಕೂಡ ಚಾಲಕರು, ನಿರ್ವಾಹಕರು ಸ್ಪಂದಿಸುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸದ್ಯ ಬಸ್ ನಿಲ್ಲಿಸಬೇಡಿ. ಬಸ್ ಘಟಕಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆಗೆ ಇತ್ಯರ್ಥಪಡಿಸುತ್ತೇವೆ ಎಂದು ಮನವೊಲಿಸಲು ಮುಂದಾದರು. ಪಟ್ಟು ಬಿಡದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.

ನಂತರ ಸ್ಥಳಕ್ಕೆ ಬಂದ್ ಎಸ್​ಐ ಎಸ್.ಜಿ. ಬಿರಾದಾರ ವಿದ್ಯಾಥಿಗಳೊಂದಿಗೆ ರ್ಚಚಿಸಿ, ಘಟಕ ವ್ಯವಸ್ಥಾಪಕರೊಂದಿಗೆ ರ್ಚಚಿಸಿ ಸ್ಪಂದಿಸುವುದಾಗಿ ತಿಳಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಮೊಟಕುಗೊಳಿಸಿದರು. ಎಬಿವಿಪಿ ಮುಖಂಡ ರಾಜೇಶ ಮಸರಕಲ್ಲ ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.