ವಿರಕ್ತ ಶ್ರೀಗಳು ಕರುಣಾಮಯಿ

ತಾಳಿಕೋಟೆ:ಬಡವರು ಶ್ರೀಮಂತರು ಎನ್ನದೆ ಸಕಲ ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ವಿರಕ್ತ ಶ್ರೀಗಳು ಅಜರಾಮರವಾಗಿದ್ದು, ನೆನೆದವರ ಮನದಲ್ಲಿ ವಿರಾಜಮಾನರಾಗುತ್ತಾರೆ ಎಂದು ಕೊಪ್ಪಳದ ಗವಿ ಸಿದ್ಧೇಶ್ವರ ಸಂಸ್ಥಾನದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಹೇಳಿದರು.

ಪಟ್ಟಣದ ಖಾಶ್ಗತೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಖಾಸ್ಗತೇಶ್ವರ ಮಠದ ಲಿಂ. ವಿರಕ್ತ ಶ್ರೀಗಳ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತನ್ನ ಸುಖ, ಸಂತೋಷ ತ್ಯಾಗ ಮಾಡಿ ಸಮಾಜದ ಒಳಿತಿಗಾಗಿ ಸನ್ಮಾರ್ಗ ಕರುಣಿಸುವವನೇ ನಿಜವಾದ ಗುರುವಾಗುತ್ತಾನೆ. ಅಂತಹ ಕರುಣಾಮಯಿ ಶ್ರೀ ವಿರಕ್ತ ಶ್ರೀಗಳು ಆಗಿದ್ದಾರೆ. ಎಲ್ಲರನ್ನೂ ಸಹೃದಯದಿಂದ ಕಾಣುವ ವ್ಯಕ್ತಿ ದೊಡ್ಡವರು. ಕಣ್ಣಿಲ್ಲದಿದ್ದರೂ ವಿರಕ್ತ ಶ್ರೀಗಳು ಭಕ್ತರನ್ನು ಒಳಗಣ್ಣಿನಿಂದ ನೋಡಿ ಅವರ ಕಷ್ಟಗಳನ್ನು ನಿವಾರಿಸಿದ್ದು ಇಂದು ಹರಿದು ಬಂದ ಭಕ್ತ ಸಾಗರ ತೋರಿಸುತ್ತದೆ ಎಂದರು. ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗದೇವರು ಮಾತನಾಡಿ, ಖಾಸ್ಗತರು ಹಾಗೂ ವಿರಕ್ತ ಶ್ರೀಗಳು ನಮಗೆ ದಾರಿದೀಪವಾಗಿದ್ದಾರೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮಠದ ಪರಂಪರೆ ಬೆಳೆಸಲಾಗುತ್ತಿದೆ ಎಂದರು.

ಖಾಸ್ಗತ ಶ್ರೀ ಪ್ರಶಸ್ತಿ ಪುರಸ್ಕೃತ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಡಾ. ಡಿ.ಸಿ. ರಾಜಪ್ಪ, ಅಗ್ನಿ ಚರಂತಿಮಠದ ಶಿವಯೋಗಿ ಶಿವಾಚಾರ್ಯ, ಹಿರೂರ ಅನ್ನದಾನೇಶ್ವರ ಮಠದ ಗುರುಜಯಸಿದ್ಧೇಶ್ವರ ಶಿವಾಚಾರ್ಯರು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಹಾಸ್ಯ ನಟ ರಾಜು ತಾಳಿಕೋಟೆ, ಮುಸ್ಲಿಂ ಧರ್ಮಗುರು ಸೈಯದ್ ಶಕೀಲಹ್ಮದ ಖಾಜಿ ಮಾತನಾಡಿದರು. ತೊಟ್ಟಿಲಕೆರೆ ಬಣ್ಣದಮಠದ ಶಿವಲಿಂಗ ಸ್ವಾಮಿಗಳು, ಇಂಗಳೇಶ್ವರ ವಚನಶಿಲಾಮಂಟಪದ ಚನ್ನಬಸವ ಸ್ವಾಮಿಗಳು, ಗುಂಡಕನಾಳ ಬ್ರಹ್ಮನಮಠದ ಗುರುಲಿಂಗ ಶಿವಾಚಾರ್ಯರು, ವಿವ ಸಂಘದ ಅಧ್ಯಕ್ಷ ಎಸ್.ಎ. ಸರೂರ, ಕಾರ್ಯದರ್ಶಿ ಬಸನಗೌಡ ಗಬಸಾವಳಗಿ, ಬಿಚಕಲ್ಲದ ಶಿವಲಿಂಗ ಸ್ವಾಮಿಗಳು, ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ಮುರುಗೇಶ ವಿರಕ್ತಮಠ, ವಿಜಯಕುಮಾರ ಹಿರೇಮಠ ವೇದಿಕೆಯಲ್ಲಿದ್ದರು. ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾಶಿನಾಥ ಮುರಾಳ ಸ್ವಾಗತಿಸಿದರು. ಸುಮಂಗಲಾ ಕೋಳೂರ, ಶ್ರೀಕಾಂತ ಪತ್ತಾರ ನಿರೂಪಿಸಿದರು.


ಖಾಸ್ಗತ ಶ್ರೀ ಪ್ರಶಸ್ತಿ:ಮೊದಲ ಬಾರಿಗೆ ಖಾಸ್ಗತೇಶ್ವರ ಮಠದಿಂದ ಆರಂಭಿಸಲಾದ ಖಾಸ್ಗತ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗೆ ಬೆಳಗಾವಿಯ ಪೊಲೀಸ್ ಆಯುಕ್ತ ಡಾ.ಡಿ. ಸಿರಾಜಪ್ಪ, ರಂಗಭೂಮಿ ಸಾಧನೆಗೆ ಕಲಾವಿದ ರಾಜು ತಾಳಿಕೋಟಿ, ಧಾರ್ವಿುಕ ಕ್ಷೇತ್ರಕ್ಕೆ ಡಾ. ಅಮರೇಶ ಮಿಣಜಗಿ, ಸಂಗೀತ ಕ್ಷೇತ್ರಕ್ಕೆ ಬಸವರಾಜ ಭಂಟನೂರ, ಶಿಕ್ಷಣ ಕ್ಷೇತ್ರಕ್ಕೆ ಮಂಡ್ಯದ ಬಿ.ಬಸವರಾಜ ಅವರಿಗೆ ನೀಡಿ ಗೌರವಿಸಲಾಯಿತು. ಶ್ರೀಗಳ ಮೂರ್ತಿ ದಾನಿಗಳಾದ ಮುಂಬೈ ಗಣ್ಯ ವ್ಯಾಪಾರಿ ರಾಜೇಶ ಮಹಾಜನ ಹಾಗೂ ಬೆಂಗಳೂರಿನ ಎಸ್.ಕೆ. ಹೈವೋಲ್ಟೇಜ್ ಇಕ್ವಿಪ್​ವೆುಂಟ್ಸ್​ನ ಕಾಶಿನಾಥ ಮಡಿವಾಳರ (ತಾಳಿಕೋಟೆ) ಅವರನ್ನು ಸನ್ಮಾನಿಸಲಾಯಿತು.

ಮೂರ್ತಿ ಭವ್ಯ ಮೆರವಣಿಗೆ: ಶ್ರೀಮಠದಲ್ಲಿ ಬೆಳಗ್ಗೆ ವಿರಕ್ತ ಶ್ರೀಗಳ ಭವ್ಯ ಮೂರ್ತಿಯೊಂದಿಗೆ ನಂದಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ನಂತರ ಲಿಂ. ವಿರಕ್ತ ಶ್ರೀಗಳು ಹಾಗೂ ಖಾಸ್ಗತ ಶ್ರೀಗಳ ಅಮೃತ ಶಿಲಾಮೂರ್ತಿ ಭವ್ಯ ಮೆರವಣಿಗೆ ಶ್ರೀಮಠದಿಂದ ಎಸ್.ಕೆ ಪಿಯು ಕಾಲೇಜಿನವರೆಗೆ ಸಂಚರಿಸಿತು ಪಟ್ಟಣದ ವಿವಿಧ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು, ಕುಂಭ ಕಳಸ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು. ಕೊಣ್ಣೂರ ಗ್ರಾಮದ ಕಲಾವಿದರಿಂದ ಡೊಳ್ಳುಕುಣಿತ ನಡೆಯಿತು. ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸ್ಥಳೀಯ ಘಟಕ, ಎಪಿಎಂಸಿ ಅಡತ ಮರ್ಚಂಟ್ಸ್ ಅಸೋಸಿಯೇಷನ್ ಬಳಗ ಹಾಗೂ ಸಜ್ಜನ ಸಮಾಜ ಬಾಂಧವರಿಂದ ಬೆಳಗ್ಗೆ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಹಾಗೂ ಕಾಲೇಜು ಆವರಣದಲ್ಲಿ ಸಾಮೂಹಿಕ ಪ್ರಸಾದ ವ್ಯವಸ್ಥೆ ನಡೆಯಿತು