ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ತಾಳಿಕೋಟೆ: ಭೀಕರ ಬರದ ನಡುವೆಯೂ ಪಟ್ಟಣದಲ್ಲಿ ಜ.28 ಹಾಗೂ 29 ರಂದು ನಡೆಯಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಜೋರಾಗಿ ನಡೆದಿವೆ.

ಈ ಹಿಂದೆ ನಡೆದ ಪ್ರಥಮ ತಾಲೂಕು ಸಮ್ಮೇಳನ ಯಶಸ್ವಿಯಾಗಿದ್ದು, ಮತ್ತೆ ಜಿಲ್ಲಾ ಸಮ್ಮೇಳನದ ಅಕ್ಷರ ಜಾತ್ರೆಗೆ ಸಿದ್ಧತೆ ನಡೆಯುತ್ತಿದ್ದು ಸಮ್ಮೇಳನದ ಭವ್ಯ ವೇದಿಕೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳು ಭರದಿಂದ ಸಾಗಿವೆ. ಪಟ್ಟಣದ ನಾಗರಿಕರು ಸಾಹಿತ್ಯ ಸಮ್ಮೇಳನ ತಮ್ಮ ಊರಿನ ಹಬ್ಬ ಎಂಬಂತೆ ಭಾವಿಸಿ ಕಾರ್ಯದಲ್ಲಿ ತೊಡಗಿದ್ದಾರೆ.

ತಾಲೂಕಿನ ಖ್ಯಾತ ಸಾಹಿತಿ ಪ್ರೊ. ಬಿ.ಆರ್. ಪೊಲೀಸ್​ಪಾಟೀಲರ ಸರ್ವಾಧ್ಯಕ್ಷತೆಯಲ್ಲಿ ಪಟ್ಟಣದ ಶಿವಯೋಗಿ ಸಂಗಮಾರ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ 2 ದಿನ ಸಮ್ಮೇಳನ ನಡೆಯಲಿದೆ. ಬೃಹತ್ ವೇದಿಕೆ, ಊಟದ ಪೆಂಡಾಲ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ಸ್ವಯಂಪ್ರೇರಿತವಾಗಿ ಜನರು ತೊಡಗಿಕೊಂಡಿರುವುದು ಜಿಲ್ಲಾ ಸಮ್ಮೇಳನಕ್ಕೆ ಮೆರಗು ತಂದಿದೆ. ಸಮ್ಮೇಳನಕ್ಕೆ ಅಂದಾಜು 50 ಸಾವಿರ ಜನರು ಆಗಮಿಸುವ ನಿರೀಕ್ಷೆಯಲ್ಲಿ ಸಂಘಟಕರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಎರಡು ದಿನದ ಸಂಪೂರ್ಣ ಊಟದ ವೆಚ್ಚವನ್ನು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನೀಡಲಿದ್ದಾರೆ. ಎಸ್​ಎಸ್ ವಿದ್ಯಾ ಸಂಸ್ಥೆಯಲ್ಲಿನ ಸಭಾ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯ ಹೊರಗೆ ರ್ಪಾಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು, ಸಮ್ಮೇಳನಕ್ಕೆ ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ. ಕಸಾಪ ಪದಾಧಿಕಾರಿಗಳು, ಶಿಕ್ಷಕರು, ಮುಖಂಡರು ವಿವಿಧ ಕೆಲಸ ಕಾರ್ಯಗಳ ಹೊಣೆ ಹೊತ್ತುಕೊಂಡಿದ್ದಾರೆ. ಅಕ್ಷರ ಜಾತ್ರೆಯೂ ನಡೆಯುವ ಎರಡು ದಿನದ ಸಮ್ಮೇಳನ ಭವ್ಯ ಜಾತ್ರೆಯಂತೆ ನಡೆಯಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಕಸಾಪ ಅಧ್ಯಕ್ಷೆ ಸುಮಂಗಲಾ ಕೋಳೂರ ತಿಳಿಸಿದ್ದಾರೆ.