ಸಾವಿರಾರು ಅಭಿಮಾನಿಗಳ ಮಧ್ಯೆ ಪಾಟೀಲ ಅಂತ್ಯಕ್ರಿಯೆ

ತಾಳಿಕೋಟೆ: ಭಾನುವಾರ ಸಂಜೆ ನಿಧನರಾದ ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ.ಎಸ್.ಪಾಟೀಲ ಸಾಸನೂರ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಸಾವಿರಾರು ಅಭಿಮಾನಿಗಳ ಮಧ್ಯೆ ಸಕಲ ಸರ್ಕಾರಿ ಗೌರವದೊಂದಿಗೆ ಸಮೀಪದ ಹಿರೂರ ಗ್ರಾಮದ ಭೋಗೇಶ್ವರ ಕಾಲೇಜ್ ಆವರಣದಲ್ಲಿ ನಡೆಯಿತು.

ಬಿ.ಎಸ್.ಪಾಟೀಲ ಸಾಸನೂರ ಅವರ ದೇಹವನ್ನು ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಯಿಂದ ನೇರವಾಗಿ ಅವರ ಸ್ವಗ್ರಾಮವಾದ ಬಸವನಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮಕ್ಕೆ ಭಾನುವಾರ ರಾತ್ರಿಯೆ ತರಲಾಗಿತ್ತು. ಅವರ ಮನೆಯಲ್ಲಿ ಗ್ರಾಮಸ್ಥರಿಗಾಗಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11ಗಂಟೆಗೆ ಮುದ್ದೇಬಿಹಾಳ ತಾಲೂಕಿನ ಹಿರೂರ ಗ್ರಾಮಕ್ಕೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿ ಅವರದೆ ವಿದ್ಯಾ ಸಂಸ್ಥೆ ಆವರಣದಲ್ಲಿ ಸಾರ್ವಜನಿಕರಿಗಾಗಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಗಲಿದ ನಾಯಕನ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು, ಸಂಬಂಧಿಕರು, ಅಧಿಕಾರಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಅಗಲಿದ ನಾಯಕನ ನೆನೆದು ಕಣ್ಣೀರಿಟ್ಟ ಅಭಿಮಾನಿಗಳು, ‘ಮತ್ತೆ ಹುಟ್ಟಿ ಬಾ’ ಎಂದು ಘೊಷಣೆ ಕೂಗಿ ಅಂತಿಮ ವಿದಾಯ ಹೇಳಿದರು.

ಸಂಜೆ ಕರ್ನಾಟಕ ಸರ್ಕಾರದ ಪರವಾಗಿ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಹಾಗೂ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಗೌರವ ಸಲ್ಲಿಸಿದರು. ನಂತರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ರಡ್ಡಿ ಸಮಾಜದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಬಿ.ಎಸ್. ಪಾಟೀಲ ಸಾಸನೂರ ಅವರ ಪತ್ನಿ ಗುರುಬಾಯಿಗೌಡಶಾನಿ ಪಾಟೀಲ, ಪುತ್ರರಾದ ಹಾಗೂ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಸಾಹೇಬಗೌಡ, ಸುರೇಶಗೌಡ, ಮಗಳು ಗೀತಾ ಸೇರಿದಂತೆ ಬಂಧು-ಬಳಗದವರು ಇದ್ದರು.

ಅಂತಿಮ ದರ್ಶನ ಪಡೆದ ನಾಯಕರು: ಮಾಜಿ ಸಚಿವ ಬಿ.ಎಸ್.ಪಾಟೀಲ ಸಾಸನೂರ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಹಲವು ಶಾಸಕರು, ಮಾಜಿ ಶಾಸಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ಅಮರೇಗೌಡ ಬಯ್ಯಾಪುರ, ಮುಧೋಳ ಶಾಸಕ ಗೋವಿಂದ ಕಾರಜೋಳ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್. ಪಾಟೀಲ, ಅರುಣ ಶಹಾಪುರ, ಮಾಜಿ ಶಾಸಕರಾದ ಸಿ.ಎಸ್.ನಾಡಗೌಡ, ರಾಜು ಆಲಗೂರ, ಹಂಪನಗೌಡ ಬಾರ್ದಲಿ, ಅಶೋಕ ಶಾಬಾದಿ, ಶಿವಪುತ್ರಪ್ಪ ದೇಸಾಯಿ, ಹಿರೂರ ಶ್ರೀಗಳು, ಜಾಲಹಳ್ಳಿ ಶ್ರೀಗಳು, ಇಟಗಿ ಶ್ರೀಗಳು, ಕೆಸರಟ್ಟಿ ಶ್ರೀಗಳು, ಇಂಗಳಗೇರಿ ಅಮ್ಮನವರು, ವಡವಡಗಿ ಶ್ರೀಗಳು, ಚಿಕ್ಕರೂಗಿ ಶ್ರೀಗಳು, ಕಲಕೇರಿ ಶ್ರೀಗಳು, ಚಬನೂರ ಶ್ರೀಗಳು, ಕೊಕಟನೂರು ಶ್ರೀಗಳು, ಯರನಾಳ ಶ್ರೀಗಳು, ಕೆರೂಟಗಿ ಶ್ರೀಗಳು, ಸಂತೆಕೆಲ್ಲೂರ ಶ್ರೀಗಳು, ಗುಂಡಕನಾಳ ಶ್ರೀಗಳು, ಬಾಗೇವಾಡಿ ಶಿವಪ್ರಕಾಶ ಸ್ವಾಮಿಗಳು ಸೇರಿದಂತೆ ರಾಜಕೀಯ ಗಣ್ಯರು, ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಕಣ್ಣೀರಿಟ್ಟ ಶಾಸಕ

ಬಿ.ಎಸ್.ಪಾಟೀಲ ಸಾಸನೂರ ಅವರ ಅಂತಿಮ ದರ್ಶನ ಪಡೆದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನಂತರ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಬಿ.ಎಸ್.ಪಾಟೀಲ ಸಾಸನೂರ ಅವರನ್ನು ನೆನೆದು ಕಣ್ಣೀರಿಟ್ಟರು. ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದ ಬಿ.ಎಸ್.ಪಾಟೀಲರು ನೀನು ಹಿರಿಯನಿದ್ದಂತೆ, ಸೋಮನಗೌಡರಿಗೆ ನೀನು ಅಣ್ಣನಾಗಿ ನಿಂತು ಸಹಾಯ ಮಾಡು. ಯಾವುದೇ ಸಂದರ್ಭದಲ್ಲಿ ಕೈಬಿಡಬೇಡ ಎಂದು ಹೇಳಿದ ಸಂದರ್ಭವನ್ನು ನೆನೆದು ಕಣ್ಣೀರಿಟ್ಟರು. ಆಗ ಬಿ.ಎಸ್.ಪಾಟೀಲರ ಅಭಿಮಾನಿಗಳ ಕಣ್ಣಂಚಲಿ ನೀರು ಜಿನಿಗಿತು. ಹಾಲಿ, ಮಾಜಿ ಶಾಸಕರು ಮಾತನಾಡಿ ಬಿ.ಎಸ್.ಪಾಟೀಲ ಸಾಸನೂರ ಅವರ ರಾಜಕೀಯ, ಸಾಮಾಜಿಕ ಕಾರ್ಯಗಳ ಬಗ್ಗೆ ನೆನಪಿಸಿದರು.

ಬಿ.ಎಸ್.ಪಾಟೀಲ ಸಾಸನೂರ ಅವರು ಮುತ್ಸದ್ದಿ ರಾಜಕಾರಣಿ. ರಾಜಕಾರಣದಲ್ಲಿ ಶುದ್ಧ ಹಸ್ತರು. ಗ್ರಾಮೀಣ ಭಾಗದಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಮಕ್ಕಳಿಗೆ ವಿದ್ಯಾದಾನ ಮಾಡಿದವರು. ಅಂಥ ಹಿರಿಯ ಚೇತನದ ಅಗಲಿಕೆ ತುಂಬ ನೋವನ್ನುಂಟು ಮಾಡಿದೆ. ಜಿಲ್ಲೆಯ ಹಿರಿಯ ಚೇತನದ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ.

| ಎಂ.ಸಿ. ಮನಗೂಳಿ, ತೋಟಗಾರಿಕೆ ಸಚಿವರು

 

Leave a Reply

Your email address will not be published. Required fields are marked *