ಕೃಷಿಕರಿಗೆ ಬೆಳೆ ವಿಮೆ ಪರಿಹಾರ ಒದಗಿಸಿ

ತಾಳಿಕೋಟೆ: ತಾಲೂಕಿನ ಬ.ಸಾಲವಾಡಗಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಬೆಳೆ ವಿಮೆ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ರೈತರು ತಹಸೀಲ್ದಾರ್ ಮೂಲಕ ಡಿಸಿಗೆ ಮನವಿ ಸಲ್ಲಿಸಿದರು.

ಎರಡು ವರ್ಷಗಳಿಂದ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಬರದಿಂದ ಕುಡಿಯಲು ನೀರು ಸಿಗುತ್ತಿಲ್ಲ. ಬಿತ್ತಿದ ಬೆಳೆಗಳು ಕಮರಿವೆ. ಸಾಲದ ಸುಳಿಗೆ ಸಿಲುಕಿರುವ ರೈತರು ಗುಳೆ ಹೋಗುವ ಸ್ಥಿತಿ ನಿರ್ಮಾಣ ವಾಗಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ರೈತರು ಬೆಳೆ ವಿಮೆ ತುಂಬಿದ್ದರೂ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಪರಿಹಾರ ದೊರೆತಿಲ್ಲ. ತಾಳಿಕೋಟೆ ಹೋಬಳಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಬೆಳೆ ವಿಮೆ ಹಾಗೂ ಸರ್ಕಾರದಿಂದ ನೀಡಲಾದ ಬೆಳೆ ಪರಿಹಾರ ಬಂದರೂ ಬ.ಸಾಲವಾಡಗಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಹಣ ಬಂದಿಲ್ಲ. ರೈತರು ಯಾವ ಅಧಿಕಾರಿಗಳನ್ನು ವಿಚಾರಿಸಿದರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಬ.ಸಾಲವಾಡಗಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಬೆಳೆ ವಿಮೆ ಪರಿಹಾರ ಒದಗಿಸಿಕೊಡಬೇಕೆಂದು ರೈತರು ಒತ್ತಾಯಿಸಿದರು.

ತಹಸೀಲ್ದಾರ್ ಪರವಾಗಿ ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಅಂಗಡಿ ಮನವಿ ಸ್ವೀಕರಿಸಿದರು. ಉ-ಕ ರೈತ ಸಂಘದ ಅಧ್ಯಕ್ಷ ಶ್ರೀಕಾಂತ ಹೊರಗಿನಮನಿ, ಶರಣ ಗೌಡ ದೊಡಮನಿ, ಮುದಕಣ್ಣ ರಾಯರೆಡ್ಡಿ, ತಾಪಂ ಸದಸ್ಯ ರಾಜು ಗೌಡ ಬಿರಾದಾರ, ಕುಮಾರ ಗೌಡ ದೊಡಮನಿ, ಮಲ್ಲು ಯಾಳಗಿ, ಕುಮಾರ ಅನಂತರಡ್ಡಿ, ನಿಂಗಣ್ಣ ಬಳಗಾರ, ಶ್ರೀಕಾಂತ ದೊಡಮನಿ ಇದ್ದರು.